“ಕೇವಲ 1700 ಕೋಟಿ ಸಾಲಲ್ಲ, ಕನಿಷ್ಟ 10 ಸಾವಿರ ಕೋಟಿ ರೂ.ಪ್ಯಾಕೇಜ್ ಘೋಷಿಸಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 6- ಮುಖ್ಯಮಂತ್ರಿ ಕೇವಲ 1700 ಕೋಟಿ ರೂಪಾಯಿಗಳ ಪ್ಯಾಕೇಜ್ ಸಾಲುವುದಿಲ್ಲ. ಕನಿಷ್ಟ 10 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ಘೊಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಕಟ್ಟಡ ನಿರ್ಮಾಣ, ಕೆರೆ ಕಟ್ಟೆಗಳನ್ನು ಕಟ್ಟುವ ಕೆಲಸಗಳನ್ನು ನಿಲ್ಲಿಸಿ. ಲಾಕ್ ಡೌನ್ ನಿಂದ ನಷ್ಟ ಅನುಭವಿಸಿ ಜೀವನ ನಡೆಸಲು ಕಷ್ಟ ಪಡುತ್ತಿರುವವರಿಗೆ ನೆರವು ನೀಡಿ ಎಂದು ಒತ್ತಾಯಿಸಿದರು.

ಎರಡು ವರ್ಗಗಳಿಗೆ ಮಾತ್ರ ನೆರವು ನೀಡಲಾಗಿದೆ. ಅದು ಸಾಲುವುದಿಲ್ಲ. ಚಾಲಕರು, ಕುಶಲಕರ್ಮಿಗಳು, ರೈತರು, ದರ್ಜಿಗಳು, ವಿಶ್ವರ್ಕಮರು ಸೇರಿ ಎಲ್ಲಾ ವರ್ಗಕ್ಕೆ ಕನಿಷ್ಟ ತಿಂಗಳಿಗೆ 10 ಸಾವಿರ ರೂಪಾಯಿ ನೀಡಬೇಕು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಸಮುದಾಯಗಳನ್ನು ಸರ್ಕಾರ ಗೌರವಿಸಬೇಕು.

ಉದ್ಯೋಗ ನೀಡಿರುವ ಉದ್ಯಮಿಗಳಿಗೆ ರಿಯಾಯಿತಿ ನೀಡಬೇಕು, ಉದ್ಯೋಗ ಮಾಡುವ ಕೆಲಸಗಾರರಿಗೂ ಆರ್ಥಿಕ ನೆರವು ನೀಡಬೇಕು. ಈಗಾಗಲೇ ರಾಜ್ಯದಿಂದ ಹೊರ ಹೋಗಿರುವ ಕಾರ್ಮಿಕರನ್ನು ಕರೆ ತರುವ ಕೆಲಸವಾಗಬೇಕು ಎಂದು ಹೇಳಿದರು. ಬಜೆಟ್ ನಲ್ಲಿ ಘೋಷಣೆ ಮಾಡಿದ ಹಲವಾರು ಯೋಜನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಗಿತಗೊಳಿಸಿದ್ದಾರೆ. ಈಗ ಸಂಕಷ್ಟ ಸಮಯ ನಾವು ರಾಜಕಾರಣ ಮಾಡಲ್ಲ.

ಬಜೆಟ್ ನ್ನು ಪರಿಷ್ಖರಣೆ ಮಾಡೋಣ. ತುರ್ತು ಅಗತ್ಯಗಳಿಗೆ ಹಣ ಬಳಕೆ ಮಾಡಬೇಕಿದೆ. ಅಧಿವೇಶನ ಕರೆದರೆ ನಾವು ರಾಜಕಾರಣ ಮಾಡಲ್ಲ. ಸಲಹೆ ಕೊಡುತ್ತೇವೆ. ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ವಿಶೇಷ ಅಧಿವೇಶನ ಕರೆದರೆ ನಮ್ಮ ಪಕ್ಷದ 100 ಮಂದಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಯಾವುದೇ ಭತ್ಯೆ ಪಡೆದುಕೊಳ್ಳಲ್ಲ.

ಜೆಡಿಎಸ್ ನವರು ಇದೇ ರೀತಿ ನಿರ್ಣಯ ಕೈಗೊಳ್ಳುವಂತೆ ನಾನು ಕುಮಾರಸ್ವಾಮಿಯವರ ಜೊತೆ ಮಾತನಾಡಿ ಮನವಿ ಮಾಡುತ್ತೇನೆ ಎಂದು ಹೇಳಿದರು. ಕಷ್ಟದಲ್ಲಿದ್ದ ವಲಸೆ ಕಾರ್ಮಿಕರನ್ನು ಭೇಟಿ ಮಾಡಲು ನಾನು ಬಸ್ ನಿಲ್ದಾಣಕ್ಕೆ ಹೋಗಿದ್ದೆ, ಆದರೆ ಅಲ್ಲಿಗೆ ಹೋಗಲು ನಾನು ಯಾರು ಎಂದು ಒಬ್ಬ ಸಚಿವ ಪ್ರಶ್ನೆ ಮಾಡಿದ್ದಾರೆ.

ನನ್ನ ತಡೆಯಲು ಇವರಿಗೆ ಯಾವ ಅಧಿಕಾರ ಎಂದು ಪ್ರಶ್ನಿಸಿದರಲ್ಲದೆ, ಕೆಪಿಸಿಸಿ ಅಧ್ಯಕ್ಷರು ಸಹಿ ಮಾಡಿ ಒಂದು ಕೋಟಿ ಚೆಕ್ ಕೊಟ್ಟರೆ ಅದನ್ನು ನಕಲಿ ಎಂದು ಹೇಳುತ್ತಾರೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಹೆಸರನ್ನು ನಕಲಿ ಮಾಡಲು ಸಾಧ್ಯವೇ ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದ ಸಚಿವರಿದ್ದಾರೆ ಎಂದು ಕಿಡಿಕಾರಿದರು.

ಬ್ಯಾಂಕ್ ಗಳು ಬಡ್ಡಿ ಬಿಡುತ್ತಿಲ್ಲ, ಸಾಲ ವಸೂಲಿ ನಿಲ್ಲಿಸಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರಿಗೆ ನೆರವಾಗಬೇಕಿದೆ. ಈಗ ಘೋಷಿಸಿರುವ ಪ್ಯಾಕೇಜ್ ಕಾಗದ ಪತ್ರದ ಮೇಲಷ್ಟೇ ಇರಬಾರದು, ಅನುಷ್ಠಾನಕ್ಕೆ ಬರಬೇಕು ಎಂದು ಒತ್ತಾಯಿಸಿದರು.

Facebook Comments

Sri Raghav

Admin