ವಿನಯ್ ಕುಲಕರ್ಣಿ ವಿಚಾರಣೆ ರಾಜಕೀಯ ಪ್ರೇರಿತ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.5- ಕಾಲಚಕ್ರ ಉರುಳುತ್ತಿರುತ್ತದೆ… ಇದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಪ್ರೇರಿತರಾಗಿ ಕಾಂಗ್ರೆಸ್ ನಾಯಕರ ಮೇಲೆ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನಡೆಯುತ್ತಿರುವ ಪ್ರತೀಕಾರದ ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತದೆ ಹಾಗೂ ಸತ್ಯ, ನಿಷ್ಠೆ ಹಾಗೂ ಪ್ರಾಮಾಣಿಕರಾದ ನಮ್ಮ ನಾಯಕರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಧಾರವಾಡದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್‍ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಕಿಡಿಕಾರಿದರು.

ಸಿಬಿಐ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯವಿದೆ. ಅವರು ತಮ್ಮ ಕೆಲಸವನ್ನು ಕಾನೂನು ಪರಿಮಿತಿಯಲ್ಲಿ ಮಾಡುತ್ತಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ರಾಜಕೀಯ ಒತ್ತಡಕ್ಕೆ ಮಣಿಯುವುದು ಸರಿಯಲ್ಲ. ಕಾಲಚಕ್ರ ತಿರುಗುತ್ತಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಹಲವಾರು ಬಿಜೆಪಿ ನಾಯಕರು ಈಗ ಖುಷಿಯಲ್ಲಿದ್ದಾರೆ. ಇಂತಹ ಸ್ವಾಯತ್ತ ಸಂಸ್ಥೆಗಳನ್ನು ಅವರ ಆಸ್ತಿ ಎಂದುಕೊಂಡು ಕಾನೂನು ಕಟ್ಟಳೆಗಳನ್ನೇ ಗಾಳಿಗೆ ತೂರುತ್ತಿದ್ದಾರೆ. ಇದು ಎಲ್ಲರಿಗೂ ಅರ್ಥವಾಗುತ್ತದೆ. ಚಾಕೊಲೆಟ್, ಕ್ಯಾರೆಟ್, ಸಿಹಿ ಕೊಟ್ಟು ಕಾಂಗ್ರೆಸ್‍ನಲ್ಲಿದ್ದವರನ್ನು ಕರೆಸಿಕೊಂಡಿದ್ದಾರೆ.

ಆದರೆ, ಅಂತಹವರ ಬಗ್ಗೆ ಈ ಹಿಂದೆ ಸ್ವತಃ ಪ್ರಧಾನಮಂತ್ರಿಯವರೇ ಯಾವ ರೀತಿ ಮಾತನಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ಬಿಜೆಪಿಗೆ ಬಂದ ತಕ್ಷಣ ಅವರು ಗಂಗಾಜಲದಂತೆ ಶುದ್ಧವಾಗುವುದಿಲ್ಲ ಎಂದು ಟೀಕಿಸಿದರು.

ಚುನಾವಣೆಗೂ ಮೊದಲು ಹಾಗೂ ಚುನಾವಣೆ ನಂತರ ಇಂತಹ ರಾಜಕೀಯ ಪ್ರೇರಿತ ಘಟನೆಗಳು ನಡೆಯುತ್ತವೆ. ಆದರೂ ನಮ್ಮವರ ರಕ್ಷಣೆಗೆ ಕಾನೂನಿದೆ. ನಾವು ಅವರ ಜತೆ ಇದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Facebook Comments