ಉಗ್ರಪ್ಪ-ಸಲೀಂ ಬಗ್ಗೆ ಡಿಕೆಶಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಮಾಜಿ ಸಂಸದ ಉಗ್ರಪ್ಪ- ಕಾಂಗ್ರೆಸ್ ಮಾಧ್ಯಮ ಸಂಚಾಲಕ ಸಲೀಂ ಅವರ ನಡುವಿನ ಆಂತರಿಕ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಶಿಸ್ತು ಪಾಲನಾ ಸಮತಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ನಡೆದ ಮಾಧ್ಯಮ ಗೋಷ್ಠಿಯ ಸಂದರ್ಭದಲ್ಲಿ ಕೆಲವು ಆಂತರಿಕ ಸಂಭಾಷಣೆಗಳಾಗಿವೆ. ಕಾಂಗ್ರೆಸ್ ಪಕ್ಷ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ರೆಹಮಾನ್ ಖಾನ್ ನೇತೃತ್ವದ ಶಿಸ್ತು ಪಾಲನಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ.ಅವರ ಹೇಳಿಕೆಗೂ ನನಗೂ ಅಥವಾ ಕಾಂಗ್ರೆಸ್‍ಗೂ ಸಂಬಂಧ ಇಲ್ಲ, ನಾನು ಯಾವುದೇ ಪರ್ಸೆಂಟೇಜ್ ವಿಷಯದಲ್ಲಿ ಭಾಗಿಯಾಗಿಲ್ಲ, ಭಾಗಿಯಾಗಬೇಕಾದ ಅವಶ್ಯಕತೆಯೂ ನನಗಿಲ್ಲ ಎಂದಿದ್ದಾರೆ.

ನಮ್ಮವರು ಆಂತರಿಕವಾಗಿ ಮಾತನಾಡಿದ್ದಾರೆ. ಇಲ್ಲ ಎಂದು ನಾನು ಹೇಳಲ್ಲ. ಅದಕ್ಕೆ ಉಗ್ರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಮೀಡಿಯಾದ್ದು ತಪ್ಪು ಎಂದು ನಾನು ಹೇಳಲ್ಲ. ನಾವು ಮಾತನಾಡಿದ್ದನ್ನು ಮಾಧ್ಯಮಗಳು ತೋರಿಸಿದ್ದಾರೆ. ಈ ಹಿಂದೆ ಬಿಜೆಪಿಯ ಅನಂತಕುಮಾರ್, ಯಡಿಯೂರಪ್ಪ ಮಾತನಾಡಿದ್ದರು. ಬಸನಗೌಡಪಾಟೀಲ್ ಯತ್ನಾಳ್, ಎಚ್.ವಿಶ್ವನಾಥ್ ಸೇರಿದಂತೆ ಅನೇಕರು ಮಾತನಾಡಿದ್ದಾರೆ. ಅದನ್ನು ಮಾಧ್ಯಮಗಳು ತೋರಿಸಿವೆ ಎಂದರು.

ಸಲೀಂ ಅವರ ಆರೋಪಕ್ಕೂ ನನಗೂ ಸಂಬಂಧ ಇಲ್ಲ. ರಾಜಕಾರಣದಲ್ಲಿ ಚಪ್ಪಾಳೆ ತಟ್ಟುವವರು, ಕಲ್ಲು ಹೊಡೆಯುವವರು, ಮೊಟ್ಟೆ, ಚಪ್ಪಲಿ ಎಸೆಯುವವರು ಇರುತ್ತಾರೆ. ಧಿಕ್ಕಾರ ಕೂಗುವವರು, ಜೈಕಾರ ಹಾಕುವವರು ಇರುತ್ತಾರೆ. ನನ್ನ ಕುರಿತು ಮಾತನಾಡಿರುವವರು ಯಾವ ವರ್ಗಕ್ಕೆ ಸೇರಿದವರು ಎಂದು ಜನರೇ ತೀರ್ಮಾನಿಸಲಿ ಎಂದರು.

ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಸಿದ್ದರಾಮಯ್ಯ ಅವರು ಮತ್ತು ನನ್ನ ನಡುವೆ ಯಾವುದೇ ಜಗಳ ಇಲ್ಲ. ನಿನ್ನೆ ಹೇಳಿಕೆ ಕೊಟ್ಟವರ ವಿರುದ್ಧ ಕಾಂಗ್ರೆಸ್ ಪಕ್ಷದ ಸಂವಿಧಾನ ಆದರಿಸಿ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದೆ ಎಂದರು.ನಾನು ಯಾವ ಪರ್ಸೇಂಟೆಜ್ ವ್ಯವಹಾರದಲ್ಲೂ ಭಾಗಿಯಾಗಿಲ್ಲ. ಗೃಹ ಸಚಿವರು ದೂರು ಕೊಟ್ಟರೆ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಅವರೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

ಇವತ್ತು ವಿದ್ಯುತ್ ಕೊರತೆ ವಿಚಾರ ಮಾತನಾಡಬೇಕು ಎಂದಿದ್ದೆ. ಆದರೆ ಈ ಘಟನೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ಅದಕ್ಕಾಗಿಯೇ ಇಲ್ಲಿ ಮಾತನಾಡಲು ಕುಳಿತಿದ್ದೇನೆ ಎಂದರು. ಇನ್ನೂ ಮುಂದೆ ಈ ವಿಚಾರವಾಗಿ ಪಕ್ಷದಲ್ಲಿ ಇನ್ನೂ ಮುಂದೆ ಯಾರು ಚರ್ಚೆ ನಡೆಸಬಾರದು ಎಂದು ಸೂಚನೆ ನೀಡಿದರು.

ಭ್ರಷ್ಟಚಾರದ ಬಗ್ಗೆ ಬೆಡ್‍ನಲ್ಲಿ ಬಿಜೆಪಿ ಸರ್ಕಾರದ ಒಬ್ಬ ಮಂತ್ರಿ ಮಾತನಾಡಿದ್ದರು. ಅದರ ಬಗ್ಗೆ ಯಾರೊಬ್ಬರು ಯಾಕೆ ಚರ್ಚೆ ಮಾತನಾಡಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.ಇದು ಷ್ಯಡ್ಯಂತ್ರವಾದರೂ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಹಳ್ಳಿಯಿಂದ ಬಂದವನು, ನನ್ನ ದೈಹಿಕ ನಡವಳಿಕೆಯನ್ನು ಯಾರು ಬದಲಾವಣೆ ಮಾಡಲಾಗಲ್ಲ. ನನ್ನದೇ ಆದೇ ಶೈಲಿ ಇದೆ. ಅದರಲ್ಲಿ ಯಶಸ್ಸು ಅಡಗಿದೆ ಎಂದರು.

ರಾಜ್ಯದ ಜನತೆ ಮತ ಹಾಕಿದ್ದರ ಮೇಲೆ ಪಕ್ಷ ಸಂಘಟನೆಯ ತಕ್ಕಡಿ ನಿರ್ಧಾರವಾಗುತ್ತದೆ. ಬೇರೆ ಯಾರೇ ಮಾತನಾಡಿದರೂ ಅದು ಲೆಕ್ಕಕ್ಕೆ ಬರಲ್ಲ ಎಂದರು. ನಮ್ಮಲ್ಲಿ ಯಾವ ಭ್ರಷ್ಟಚಾರವೂ ಇಲ್ಲ, ಬಿಜೆಪಿ ಬದುಕಿರುವುದೇ ಭ್ರಷ್ಟಾಚಾರದಲ್ಲಿ, ಈ ಸರ್ಕಾರ ರಚನೆಯಾಗಿದ್ದೇ ಭ್ರಷ್ಟಚಾರದ ಮೇಲೆ, ಶಾಸಕರನ್ನು ಖರೀದಿ ಮಾಡಿಯೇ ಸರ್ಕಾರ ಬಂದಿದೆ. ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ ಎಂದು ದೂರಿದರು.

Facebook Comments

Sri Raghav

Admin