ರಾಮನ ದೇವಸ್ಥಾನ ನಿರ್ಮಾಣಕ್ಕೆ ಜನ ಕೊಟ್ಟ ಹಣ ದುರುಪಯೋಗ: ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಜೂ.15- ರಾಮಜನ್ಮಭೂಮಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಜನ ಸಾಮಾನ್ಯರು ಕೊಟ್ಟ ಹಣವನ್ನು ದುರುಪಯೋಗ ಮಾಡಿಕೊಂಡವರನ್ನು ಕೂಡಲೇ ಬಂಧಿಸಬೇಕು, ಹಣವನ್ನು ವಾಪಾಸ್ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಮಂಡ್ಯದ ಯಲಿಯೂರು ಸರ್ಕಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮಭೂಮಿ ವಿಚಾರದಲ್ಲಿ ಜನ ಹತ್ತು ಪೈಸೆ, ಐದು, ಸಾವಿರ, ಲಕ್ಷ ರೂಪಾಯಿಗಳನ್ನು ಹಳ್ಳಿ ಹಳ್ಳಿಯಿಂದ ಜನ ಕೊಟ್ಟಿದ್ದಾರೆ. ಇಟ್ಟಿಗೆಗಳನ್ನು ಕೊಟ್ಟಿದ್ದಾರೆ.

ಜಮೀನು ಖರೀದಿ ಮಾಡಿ ವ್ಯಾಪಾರ ಮಾಡಿಕೊಳ್ಳಲಿ ಎಂದು ಜನ ದುಡ್ಡುಕೊಟ್ಟಿಲ್ಲ. ನಮ್ಮ ದೇವರಿಗೆ, ದೇವಸ್ಥಾನಕ್ಕೆ ಒಳ್ಳಿತಾಗಲಿ ಎಂದು ಕೊಟ್ಟಿದ್ದಾರೆ. ಜನರ ಭಾವನೆಗೆ ಧಕ್ಕೆಯಾಗಿದೆ. ಇದು ದೇಶಕ್ಕೆ, ಭಾರತೀಯ ಸಂಸ್ಕೃತಿಗೆ ದೊಡ್ಡ ಅವಮಾನ. ಅಯೋಧ್ಯೆಯ ಅವ್ಯವಹಾರವನ್ನು ದೇಶವೇ ಖಂಡಿಸಬೇಕಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಲೇ ಕ್ರಮ ಕೈಗೊಂಡು ಅವ್ಯವಹಾರ ಮಾಡಿದವರನ್ನು ಬಂಧಿಸಬೇಕು, ದೇವಸ್ಥಾನ ನಿರ್ಮಾಣಕ್ಕೆ ಜನ ಕೊಟ್ಟ ಹಣವನ್ನು ವಾಪಾಸ್ ಕೊಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನಾ ಯಲಿಯೂರು ಸರ್ಕಲ್ ನಲ್ಲಿ ಪೆಟ್ರೋಲ್, ಡೀಸೆಲ್ ನಿರಂತರ ದರ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಮಂಡ್ಯದ ಜಿಲ್ಲಾ ಕಾಂಗ್ರೆಸ್ ಆಯೋಜಿಸಲಾಗಿದ್ದ 100 ನಾಟೌಟ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಅಕ್ಕ ಪಕ್ಕದ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕದಲ್ಲಿರುವಂತೆ ಇಲ್ಲೂ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ನೀಡಬೇಕು ಎಂದು ಒತ್ತಾಯಿಸಿದರು.

ಜನರ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದ್ದರೂ ದರ ಹೆಚ್ಚಳ ಮಾಡುತ್ತಿದ್ದಾರೆ. ಕಾಂಗ್ರೆಸ್ ವತಿಯಿಂದ ನಿನ್ನೆವರೆಗೂ 4300 ಕಡೆ ಪ್ರತಿಭಟನೆ ನಡೆಸಲಾಗಿದೆ. ಒಟ್ಟು ಐದು ಸಾವಿರ ಕಡೆ ಪ್ರತಿಭಟನೆಗಳು ನಡೆಯುತ್ತವೆ ಎಂದರು. ಇದು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿ ಪ್ರತಿಭಟನೆಯಲ್ಲ. ಜನ ಸಾಮಾನ್ಯರ ಪ್ರತಿಭಟನೆ. ಹಿಂದಿನ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ 35 ರೂಪಾಯಿ ಬೆಲೆ ಇದ್ದಾಗ ಯಡಿಯೂರಪ್ಪ ಸೈಕಲ್ ತುಳಿದಿದ್ದರು, ಗ್ಯಾಸ್ ದರ ಏರಿಕೆಯಾಗಿದ್ದಾಗ ಶೋಭಾ ಕರಂದ್ಲಾಜೆ ಪ್ರತಿಭಟನೆ ಮಾಡಿದ್ದರು. ಅವರೆಲ್ಲಾ ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದರು.

ಕೆಪಿಸಿಸಿ ಅಧ್ಯಕ್ಷನಾಗಿ ನಾನು ಬೆಂಗಳೂರು, ಚಿತ್ರದುರ್ಗ, ತಿಪಟೂರಿನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ನಿನ್ನೆ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ನಡೆದಿದೆ. ಮಂಡ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟೂರು ಎಂಬ ಕಾರಣಕ್ಕೆ ಇಲ್ಲಿಗೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ ಎಂದರು.

ಪ್ರತಿಭಟನೆಯಲ್ಲಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಮಾಜಿ ಸಚಿವರಾದ ಆತ್ಮಾನಂದ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಜಿಲ್ಲಾಧ್ಯಕ್ಷ ಗಂಗಾಧರ್, ಮುಖಂಡರಾದ ರವಿ ಗಣಿಗಾ, ಅಪ್ಪಾಜಿ ಮತ್ತಿತರರು ಇದ್ದರು.

Facebook Comments