ಯಡಿಯೂರಪ್ಪ ಸರ್ಕಾರಕ್ಕೆ ಡಿಕೆಶಿ ಖಡಕ್ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಜಿಲ್ಲಾಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸದೆ ಬಿಜೆಪಿ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕಾಂಗ್ರೆಸ್ ಇದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಒಂದು ವೇಳೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದರೆ ಉಗ್ರ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.

ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್, ಜುಲೈ ಅಂತ್ಯಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ.

ಚುನಾವಣೆ ನಡೆಸುವ 45 ದಿನಗಳ ಮೊದಲೇ ಮೀಸಲಾತಿ ನಿಗದಿ ಮಾಡಬೇಕು, ವೇಳಾಪಟ್ಟಿ ಪ್ರಕಟಿಸಬೇಕು. ಆದರೆ, ಅಂತಹ ಯಾವ ಕೆಲಸಗಳನ್ನು ಮಾಡಬಾರದು, ಕೇವಲ ಕೋವಿಡ್ ಸೋಂಕಿನ ನಿಯಂತ್ರಣ ಮಾಡಬೇಕೆಂದು ಮಾ.7ರಂದೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ರವಾನಿಸಿದೆ.

ಅದರಂತೆ ಜಿಲ್ಲಾಧಿಕಾರಿಗಳು ಯಾವ ಪ್ರಕ್ರಿಯೆಗಳನ್ನು ಮುಂದುವರೆಸಿಲ್ಲ. ಅವಧಿ ಮುಕ್ತಾಯಗೊಳ್ಳುವ ಸಮಯ ಬರುತ್ತಿದ್ದಂತೆ ಬಿಜೆಪಿ ಸದಸ್ಯರನ್ನು ನೇಮಿಸುವ ಪ್ರಯತ್ನ ನಡೆದಿದೆ. ಇದು ಪೂರ್ವ ನಿಯೋಜಿತ ಎಂದು ಆರೋಪಿಸಿದರು.

ಸರ್ಕಾರಕ್ಕೆ ಅಧಿಕಾರ ಇಲ್ಲದೇ ಇದ್ದರೂ ಜಿಲ್ಲಾಧಿಕಾರಿಗಳ ಕೈ ಕಟ್ಟಿ ಹಾಕಿ ಅವರನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮ ಪಂಚಾಯ್ತಿಗಳಿಗೆ ಬಿಜೆಪಿ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮಾಡುವ ಹುನ್ನಾರ ನಡೆಸಿದೆ. ಇದನ್ನು ಕಾಂಗ್ರೆಸ್ ಯಾವ ಕಾರಣಕ್ಕೂ ಸಹಿಸಲ್ಲ. ಉಗ್ರ ರೀತಿಯ ಹೋರಾಟ ನಡೆಸಲಾಗುವುದು.

ದಾರಿ ತಪ್ಪಿದ ಸರ್ಕಾರ ಸರಿ ದಾರಿಗೆ ಬರದೇ ಇದ್ದರೆ ಅದನ್ನು ರಾಜಕೀಯವಾಗಿ ಹೆದುರಿಸುವುದು ನಮಗೆ ಗೊತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪಂಚಾಯ್ತಿಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಇರುವ ಸಂವಿಧಾನಬದ್ಧ ಹಕ್ಕು.

ಅದನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಐದು ವರ್ಷದ ಅವಧಿ ಮುಗಿದ ಮೇಲೆ ಚುನಾವಣೆ ಮುಂದೂಡಲು ಯಾರಿಗೂ ಅಧಿಕಾರ ಇಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಈ ಮೊದಲು ಪತ್ರಿಕಾಗೋಷ್ಠಿ ನಡೆಸಿ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸುವುದಿಲ್ಲ ಎಂದು ಹೇಳಿದ್ದರು.

ಹಾಲಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಹೊಸ ಸದಸ್ಯರನ್ನು ನೇಮಕಾತಿ ಮಾಡುವುದಾಗಿ ಹೇಳುತ್ತಿದ್ದರು. ಇದಕ್ಕೆ ಅವಕಾಶವಿಲ್ಲ. ಚುನಾವಣಾ ಆಯೋಗ ಸ್ವಯತ್ತ ಸಂಸ್ಥೆ. ಸರ್ಕಾರದ ಒತ್ತಡಕ್ಕೆ ಮಣಿಯಬಾರದು. ಎಂದರು.

ಸಂವಿಧಾನ ನೀಡಿರುವ ಕಾನೂನು ಬದ್ಧ ಅಧಿಕಾರಗಳನ್ನು ಚಲಾಯಿಸಬೇಕೆಂದು ನಾವು ಚುನಾವಣಾ ಆಯುಕ್ತರಿಗೆ ಸಲಹೆ ಮಾಡಿದÉ್ದೀವೆ. ಕಾನೂನು ಪ್ರಕಾರ ನಡೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

# ನಾಚಿಕೆಗೇಡಿನ ರಾಜಕಾರಣ :
ಪ್ರತ್ಯೇಕ ಬಜೆಟ್ ಇಲ್ಲದೆ, ಹಣ ಖರ್ಚು ಮಾಡದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಅದರಲ್ಲಿ ಬಜೆಟ್‍ನಿಂದ ಖರ್ಚು ಮಾಡುವುದು ಕೇವಲ 2 ಲಕ್ಷ ಕೋಟಿ ಮಾತ್ರ. ಉಳಿದಂತೆ ವಿವಿಧ ಹಣಕಾಸು ಸಂಸ್ಥೆಗಳು ನೀಡುವ ಸಾಲವನ್ನು ಕೇಂದ್ರ ಸರ್ಕಾರ ತನ್ನ ಪ್ಯಾಕೇಜ್ ವ್ಯಾಪ್ತಿಗೆ ಸೇರಿಸಿಕೊಂಡಿದೆ ಎಂದು ದೂರಿದರು.

ಬಿಜೆಪಿ ನಾಚಿಕೆಗೇಡಿನ ರಾಜಕಾರಣ ಮಾಡುತ್ತಿದೆ. ಧಾರ್ಮಿಕ ಇಲಾಖೆಯಿಂದ ನೀಡಲಾಗುವ ಆಹಾರದ ಪೊಟ್ಟಣಗಳ ಮೇಲಿದ್ದ ಸರ್ಕಾರದ ಸ್ಟಿಕ್ಕರನ್ನು ಕಿತ್ತು ಬಿಜೆಪಿ ನಾಯಕರು ತಮ್ಮ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

Facebook Comments

Sri Raghav

Admin