ಆರ್ಥಿಕತೆ ದಿವಾಳಿ: ರಾಹುಲ್ ಹೇಳಿಕೆಗೆ ಡಿಕೆಶಿ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.31- ಅಸಂಘಟಿತ ವಲಯದ ಮೇಲೆ ಕೇಂದ್ರ ಸರ್ಕಾರ ನಡೆಸಿದ ದಾಳಿಯಿಂದ ದೇಶವಿಂದು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಅನುಮೋದಿಸಿದ್ದಾರೆ. ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿ.ಕೆ.ಶಿವಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರ ವಿಡಿಯೋವನ್ನು ರಿಟ್ವಿಟ್ ಮಾಡುವ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, 2008ರಲ್ಲಿ ಈಡೀ ವಿಶ್ವವೇ ಆರ್ಥಿಕ ಸಂಕಟದಲ್ಲಿದ್ದಾಗ ಭಾರತ ಯಾವುದೇ ಅಪಾಯ ಎದುರಿಸದೆ ದೃಢವಾಗಿತ್ತು. ಇದಕ್ಕೆ ಕಾರಣವೇನೆಂದು ನಾನು ಮನಮೋಹನ್ ಸಿಂಗ್ ಅವರನ್ನುಕೇಳಿದಾಗ ದೇಶದ ಆರ್ಥಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಆಗ ಮಾತ್ರ ದೇಶದ ಅರ್ಥ ವ್ಯವಸ್ಥೆ ದೃಢವಾಗಿರಲು ಸಾಧ್ಯ ಎಂದು ಹೇಳಿದ್ದರು. ಅವರ ಪ್ರಕಾರ ಸಂಘಟಿತ ಮತ್ತು ಅಸಂಘಟಿತ ಎಂಬ ಎರಡು ಆರ್ಥಿಕ ವ್ಯವಸ್ಥೆಗಳು ಭಾರತದಲ್ಲಿವೆ. ಸಂಘಟಿತ ಅರ್ಥ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡಕಂಪನಿಗಳು ಬರುತ್ತವೆ. ಅಸಂಘಟಿತ ವಲಯದಲ್ಲಿ ಕಾರ್ಮಿಕರು, ರೈತರು, ಕೂಲಿಕಾರರು ಬರುತ್ತಾರೆ. ಅಸಂಘಟಿತ ವಲಯ ಸದೃಢವಾಗಿದ್ದರೆ ಆರ್ಥಿಕ ವ್ಯವಸ್ಥೆಯೂ ಬಲವಾಗಿರುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾಗಿ ರಾಹುಲ್ ವಿವರಿಸಿದ್ದಾರೆ.

ಈಗಿನ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್ಟಿ ಮತ್ತು ಪೂರ್ವಸಿದ್ಧತೆ ಇಲ್ಲದ ಲಾಕ್‍ಡೌನ್‍ನಿಂದ ಅಸಂಘಟಿತ ಆರ್ಥಿಕ ವ್ಯವಸ್ಥೆ ಮೇಲೆ ದಾಳಿ ನಡೆಸಿದೆ. ಈ ವಲಯದಿಂದ ಹಣ ಲಪಟಾಯಿಸಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದರು. ಈ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಅಪ್ರೋಡ್ ಮಾಡಿರುವ ಡಿ.ಕೆ.ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ದೇಶದ ಅಸಂಘಟಿತ ಅರ್ಥ ವ್ಯವಸ್ಥೆಯ ಮೇಲೆ ದಾಳಿ ಮಾಡಿದೆ. ಅದರ ಪರಿಣಾಮ ಏನು ಎಂಬುದನ್ನು ರಾಹುಲ್ ಗಾಂಧಿ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Facebook Comments