ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್‍ ಗೆಲುವಿನ ವಾತಾವರಣ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.29- ರಾಜರಾಜೇಶ್ವರಿ ನಗರದಲ್ಲಿ ದಿನೇ ದಿನೇ ಚಿತ್ರಣ ಬದಲಾಗುತ್ತಿದ್ದು , ಕಾಂಗ್ರೆಸ್‍ನಲ್ಲಿ ಗೆಲುವಿನ ವಾತಾವರಣ ಆಶಾದಾಯಕವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂದು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯಿಂದ ಅನೇಕ ಮುಖಂಡರುಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಕಾಂಗ್ರೆಸ್‍ನ ಅಭ್ಯರ್ಥಿ ಕುಸುಮಾ ಅವರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯಗಳಿವೆ. ಕುಸುಮಾ ಅವರು ಹೋದ ಕಡೆಯಲ್ಲೆಲ್ಲಾ ಅವರಿಗೆ ಅರಿಶಿನ, ಕುಂಕುಮ ಹಚ್ಚಿ ಹೂವು ಮುಡಿಸಿ ಪ್ರೀತಿ ತೋರಿಸುತ್ತಿರುವುದನ್ನು ನೋಡಿದರೆ ಮನಸ್ಸು ತುಂಬಿ ಬರುತ್ತಿದೆ ಎಂದು ಹೇಳಿದರು.

ನೊಂದ ಹೆಣ್ಣು ಮಗಳ ನೋವಿಗೆ ಕ್ಷೇತ್ರರದ ಜನರು ಸ್ಪಂದಿಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಟ್ಟಿಟ್ಟ ಬುತ್ತಿ. ದೌರ್ಜನ್ಯ ದಬ್ಬಾಳಿಕೆ , ಆತಂಕದ ವಾತಾವರಣದಿಂದ ಜನರಿಗೆ ಮುಕ್ತಿ ಬೇಕಿದೆ. ಅದಕ್ಕಿರುವುದು ಒಂದೇ ಮಾರ್ಗ ಎಂದರೆ ಕಾಂಗ್ರೆಸ್‍ನ ವಿದ್ಯಾವಂತ, ಸುಸಂಸ್ಕøತ ಅಭ್ಯರ್ಥಿಯನ್ನು ಗೆಲ್ಲಿಸುವುದು. ಹೀಗಾಗಿ ಕ್ಷೇತ್ರದ ಜನರು ಈಗಾಗಲೇ ತೀರ್ಮಾನ ಮಾಡಿಯಾಗಿದೆ. ಬಿಜೆಪಿಯವರ ಕುತಂತ್ರ, ಬೆದರಿಕೆ ರಾಜಕಾರಣಕ್ಕೆ ಯಾರೂ ಮಣೆ ಹಾಕುವುದಿಲ್ಲ ಎಂದು ಹೇಳಿದರು.

ಕುಸುಮಾ ಅವರು ಭಾವುಕರಾಗಿ ಮಾತನಾಡಿದ್ದು , ನಿಮ್ಮ ಮನೆ ಮಗಳಾಗಿ ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಿ. ನಿಮ್ಮ ನಿರೀಕ್ಷೆಯನ್ನು ಎಂದೂ ಹುಸಿ ಮಾಡುವುದಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಮತದಾರರು ನೀಡುವ ತೀರ್ಪು ಅಮೂಲ್ಯವಾದದ್ದು. ಅದನ್ನು ಗೌರವಿಸಬೇಕು. ನೀವು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸೇವೆ ಮಾಡಬೇಕು. ಅದಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬಾರದು ಎಂಬುದು ನನ್ನ ಉದ್ದೇಶ. ಮುಂದಿನ ದಿನಗಳಲ್ಲಿ ನಾನು ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನಗೆ ನನ್ನದೇ ಆದ ಕನಸುಗಳಿವೆ. ಅವುಗಳು ಸಾಕಾರಗೊಳ್ಳಬೇಕಾದರೆ ನ.3ರಂದು ನಡೆಯುವ ಉಪ ಚುನಾವಣೆಯಲ್ಲಿ ನೀವು ಕ್ರ.ಸಂ.1ರಲ್ಲಿನ ಕಾಂಗ್ರೆಸ್ ಗುರುತಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಈವರೆಗೂ ಕ್ಷೇತ್ರದ ಜನ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡಿದ್ದಾರೆ. ಕುಡಿಯುವ ನೀರಿಗೂ ಸಮಸ್ಯೆಗಳಾಗಿದೆ. ರಸ್ತೆ, ವಿದ್ಯುದ್ದೀಪ, ಆರೋಗ್ಯ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡಿ ನೆಮ್ಮದಿಯ ವಾತಾವರಣ ನಿರ್ಮಿಸುವುದು ಕಾಂಗ್ರೆಸ್‍ನ ಮೂಲ ಉದ್ದೇಶ ಎಂದು ಹೇಳಿದರು.

ಕ್ಷೇತ್ರದಲ್ಲಿ ಬದಲಾವಣೆ ಅಲೆ: ಕ್ಷೇತ್ರದಲ್ಲಿ ದಿನೇ ದಿನೇ ಜನ ಬೆಂಬಲ ಹೆಚ್ಚಾಗುತ್ತಿದೆ. ಭಯದ ವಾತಾವರಣದಲ್ಲೇ ಕಾಂಗ್ರೆಸ್ ಜತೆ ಕೈ ಜೋಡಿಸಲು ಹಿಂದೇಟು ಹಾಕುತ್ತಿದ್ದ ಮತದಾರರು ದಿನೇ ದಿನೇ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಬೆದರಿಕೆ ಹಾಕುವವರಿಗೆ ತಿರುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್ ಜತೆ ಬಹಿರಂಗವಾಗಿ ಗುರುತಿಸಿಕೊಂಡು ಧರ್ಮಪರವಾಗಿ ಕೆಲಸ ಮಾಡುತ್ತೇನೆ. ನ್ಯಾಯವನ್ನು ಗೆಲ್ಲಿಸುತ್ತೇವೆ ಎಂದು ಹೇಳುವ ಮೂಲಕ ಕುಸುಮಾ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತಿದೆ.

Facebook Comments