ರಾಜ್ಯಕ್ಕಾದ ಅನ್ಯಾಯವನ್ನು ಬೊಮ್ಮಾಯಿ ಸರಿ ಪಡಿಸಲಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ಕಳೆದ ಎರಡು ವರ್ಷದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಅವರು ಸರಿಪಡಿಸುತ್ತಾರೆಂಬ ನಿರೀಕ್ಷೆ ಇದೆ ಎಂದರು.

ಕೇಂದ್ರ ಸರ್ಕಾರ ನೀರಾವರಿ, ಹಣಕಾಸು ಸೇರಿದಂತೆ ಯಾವುದೇ ವಿಚಾರದಲ್ಲೂ ರಾಜ್ಯಕ್ಕೆ ಸಹಕಾರ ಕೊಟ್ಟಿಲ್ಲ. ಯಡಿಯೂರಪ್ಪನವರು ಕಣ್ಣಲ್ಲಿ ನೀರು ಹಾಕಿ, ನೋವು ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಬೊಮ್ಮಾಯಿಯವರ ಹೆಸರು ಸೂಚಿಸಿದ್ದಾರೆ ಎಂದು ಮಾಧ್ಯಮಗಳಿಂದ ಗೊತ್ತಾಗಿದೆ. ನಮಗೆ ಒಳ್ಳೆಯ ಆಡಳಿತ ಬೇಕು ಅಷ್ಟೇ. ಮಿಕ್ಕಂತೆ ಅವರ ಪಕ್ಷದ ಆತಂರಿಕ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಕೇಂದ್ರ ನಾಯಕರು ನನಗೆ ಸಂಪುಟ ರಚನೆಗೆ ಎರಡು ತಿಂಗಳು ಅವಕಾಶ ನೀಡಲಿಲ್ಲ ಎಂದು ಯಡಿಯೂರಪ್ಪನವರು ಹೇಳಿಕೊಂಡಿದ್ದಾರೆ. ಅನೇಕ ರೀತಿಯಲ್ಲಿ ತಮಗಾದ ನೋವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಚಂಡ ಹೋರಾಟ ಮಾಡಿದ್ದರು. ಕೆಲವು ಮಂತ್ರಿಗಳು ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದರು, ಮತ್ತೆ ಕೆಲವರು ಪರೀಕ್ಷೆ ಬರೆದಿರುವುದಾಗಿ ತಿಳಿಸಿದರು. ಶಾಸಕರಿಂದಲೂ ಯಡಿಯೂರಪ್ಪ ಅವರಿಗೆ ವಿರೋಧ ವ್ಯಕ್ತವಾಗಿತ್ತು.

ಸರ್ಕಾರದಲ್ಲಿ ಸಮನ್ವಯತೆ ಇರಲಿಲ್ಲ. ಹೀಗಾಗಿ ಎರಡು ವರ್ಷಗಳಲ್ಲಿ ರಾಜ್ಯ 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಏನೇನಾಗಿದೆ ಎಂದು ಬೇರೆ ಸಮಯದಲ್ಲಿ ಮಾತನಾಡೋಣ. ವಿಧಾನಸಭೆ ಅಧಿವೇಶನದಲ್ಲಿ ಉಳಿದ ವಿಚಾರ ಚರ್ಚಿಸುತ್ತೇವೆ ಎಂದು ಹೇಳಿದರು.

ಬಿಜೆಪಿಯಲ್ಲಿ ಯಾರ ಕೈ ಮೇಲಾಯ್ತು ಎಂಬುದು ಆ ಪಕ್ಷದ ಆಂತರಿಕ ವಿಚಾರ. ಅದು ನಮಗೆ ಬೇಡ. ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡಲಿ, ರಾಜ್ಯಕ್ಕೆ ನ್ಯಾಯ ಒದಗಿಸಲಿ, ಅವರಿಗೆ ಶುಭವಾಗಲಿ ಎಂದು ಹೇಳಿದರು.

Facebook Comments