ಡಿ.ಕೆ.ಶಿವಕುಮಾರ್ ಬಂಧನ :ಕಾಂಗ್ರೆಸ್ ಪ್ರತಿಭಟನೆಗೆ ಜೆಡಿಎಸ್ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಸೆ.4-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನವನ್ನು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ದಿನಗಳ ಕಾಲ ಇಡಿ ಅಧಿಕಾರಿಗಳ ಮುಂದೆ ಶಿವಕುಮಾರ್ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಕಾನೂನಿಗೆ ಗೌರವ ಕೊಟ್ಟು ಹಬ್ಬದ ದಿನವೂ ಹಾಜರಾಗಿದ್ದರು. ಆದರೂ ಅವರನ್ನು ಬಂಧಿಸಿರುವುದು ರಾಜಕೀಯ ಪ್ರೇರಿತ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷದ ನಾಯಕರಿಗೆ ತೊಂದರೆ ಕೊಡುವ ನೀತಿಯನ್ನು ಅನುಸರಿಸುತ್ತಿದೆ. ಇಂತಹ ನೀತಿಯನ್ನು ಮುಂದುವರೆಸಬಾರದು. ಡಿ.ಕೆ.ಶಿವಕುಮಾರ್ ಬಂಧನವನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಜೆಡಿಎಸ್ ಕೂಡ ಬೆಂಬಲಿಸುತ್ತದೆ ಎಂದು ಹೇಳಿದರು.

ವಿಚಾರಣೆಗೆ ಹಾಜರಾಗಿ ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದರೂ ಬಂಧನವಾಗಿದೆ. ಇದು ರಾಜಕೀಯ ಪ್ರೇರಿತವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಇದು ಪ್ರಜಾಪ್ರಭುತ್ವದ ವಿರೋಧಿ ಕ್ರಮವಾಗಿದೆ. ಕೇಂದ್ರ ಸರ್ಕಾರ ತನ್ನ ಅಧೀನದ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾನೂನು ರೀತಿ ವಿಚಾರಣೆ ನಡೆಸಲು ಯಾರ ಅಭ್ಯಂತರವೂ ಇಲ್ಲ ಎಂದರು.

#ಒಂದು ಸಾವಿರ ಕೋಟಿ ಪರಿಹಾರಕ್ಕೆ ಆಗ್ರಹ:
ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿ 18ರಿಂದ 20 ಜಿಲ್ಲೆಗಳು ತೀವ್ರ ಸಂಕಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.  ನೆರೆ ಹಾವಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ರಾಜ್ಯ ಸರ್ಕಾರದಿಂದಲೂ ಕೇಂದ್ರಕ್ಕೆ ಪರಿಹಾರ ಕೋರುವ ಹಾಗೂ ಮನವರಿಕೆ ಮಾಡಿಕೊಡುವ ವರದಿ ಸಲ್ಲಿಕೆಯಾಗಿಲ್ಲ ಎಂದರು.

ರಾಷ್ಟ್ರೀಯ ಹೆದ್ದಾರಿ ಹದ್ದಗೆಟ್ಟಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿಕುಳಿತಿದೆ. ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಣೆಗೆ ಆಗಮಿಸಲಿಲ್ಲ. ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ. ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹಾಜರಿದ್ದರು.

Facebook Comments