ಡಿಕೆಶಿ ಪದಗ್ರಹಣಕ್ಕೆ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.23- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ರಾಜ್ಯದ 7,831 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿದ್ದು, ಗ್ರಾಮ ಪಂಚಾಯ್ತಿ, ನಗರ ಪಂಚಾಯ್ತಿಗಳಲ್ಲಿ ಸುಮಾರು 20 ಲಕ್ಷ ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಬೆಂಗಳೂರಿನಲ್ಲಿಂದು ಪೂರ್ವಭಾವಿ ಸಭೆ ನಡೆದಿದ್ದು, ಅದರಲ್ಲಿ ಕೆಪಿಸಿಸಿಯ ಮಾಜಿ ಪದಾಧಿಕಾರಿಗಳು, ವಿಧಾನಸಭೆ, ಲೋಕಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ವಿಧಾನಸಭಾ ಕ್ಷೇತ್ರಗಳ ವೀಕ್ಷಕರಾಗಿ ನಿಯೋಜಿತರಾಗಿರುವವರು ಭಾಗವಹಿಸಿದ್ದರು.

ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಅವರು, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆ, ಮಹಾನಗರ ಪಾಲಿಕೆ ವಾರ್ಡ್‍ಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೂ ಮುನ್ನ ಆ ಜಾಗವನ್ನು ಸ್ಯಾನಿಟೈಜ್ ಮಾಡಬೇಕು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಹೊರಗಡೆ ಸ್ಯಾನಿಟೈಜರ್ ಇಟ್ಟಿರಬೇಕು, ರಾಷ್ಟ್ರಧ್ವಜ ಮತ್ತು ಚರಕ ಹೊಂದಿರುವ ಕಾಂಗ್ರೆಸ್ ಧ್ವಜ ಪ್ರದರ್ಶಿಸಬೇಕು, ದೀಪ ಹಚ್ಚಬೇಕು, ಪದಗ್ರಹಣ ಸಂದರ್ಭದಲ್ಲಿ ಎಲ್ಲರೂ ಸಂವಿಧಾನದ ಪೀಠಿಕೆಯನ್ನು ಪಠಣ ಮಾಡಬೇಕು, ವಂದೇ ಮಾತರಂ ಹಾಡಬೇಕು, ಉಪಹಾರದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಚಿತ್ರೀಕರಣ ಮಾಡಿ ಅದರ ಪ್ರತಿಯನ್ನು ಕೆಪಿಸಿಸಿಗೆ ಕಳುಹಿಸಬೇಕು. ಪ್ರತಿಯೊಂದನ್ನೂ ಪಕ್ಷದಲ್ಲಿ ಪರಿಶೀಲನೆ ಮಾಡಲಾಗುವುದು. ಯಾರೆಲ್ಲಾ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಯಾರಿಗೆಲ್ಲಾ ಆಸಕ್ತಿ ಇದೆ. ಯಾರೆಲ್ಲಾ ನಿರಾಸಕ್ತಿ ತೋರಿಸಿದ್ದಾರೆ ಎಂಬುದನ್ನು ಈ ದಾಖಲೆ ಆಧರಿಸಿಯೇ ನಿರ್ಧರಿಸ ಲಾಗುವುದು ಎಂದರು.

ಪದಗ್ರಹಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರೆ ಮುಂದಿನ ಒಂದು ವರ್ಷದಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ಸರ್ಕಾರ ಸಭೆ ನಡೆಸುವ ಅವಕಾಶ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Facebook Comments