ಸೋನಿಯಾ ಗಾಂಧಿ ಭೇಟಿಯಾದ ಡಿ.ಕೆ.ಸುರೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.10-ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣಕ್ಕೆ ಹೆದರಬೇಡಿ, ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಅಭಯ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಸಹೋದರರಾಗಿರುವ ಸಂಸದ ಡಿ.ಕೆ.ಸುರೇಶ್ ಅವರು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ಅರ್ಧ ಗಂಟೆ ಕಾಲ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ಕಾರ್ಯ ವೈಖರಿಗಳ ಬಗ್ಗೆ ಡಿ.ಕೆ.ಸುರೇಶ್ ಸಂಪೂರ್ಣ ಮಾಹಿತಿ ನೀಡಿದರು. ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಯಿಂದ ರಾಜಕೀಯವಾಗಿ ಹಿನ್ನಡೆಯಾಗಲಿದೆ ಎಂಬ ಆತಂಕ ಬೇಡ. ಕಾಂಗ್ರೆಸ್ ಪಕ್ಷ ನಿಮ್ಮೊಂದಿಗಿದೆ. ಮುಂದಿನ ದಿನಗಳಲ್ಲಿ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಪಕ್ಷದ ಕಾನೂನು ತಜ್ಞರು ಅಗತ್ಯವಾದ ಎಲ್ಲಾ ನೆರವನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಶೀಘ್ರವೇ ಸಂಕಷ್ಟಗಳು ನಿವಾರಣೆಯಾಗುತ್ತವೆ. ಪಕ್ಷದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ. ಕೇಂದ್ರ ಸರ್ಕಾರದ ನಡೆಗಳು ರಾಜಕೀಯ ದುರುದ್ದೇಶಪೂರಿತ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಿ. ಬಂಧನದ ಹಿಂದಿನ ಎಲ್ಲಾ ಘಟನೆಗಳ ಬಗ್ಗೆ ನನಗೆ ಮಾಹಿತಿ ಇದೆ. ಕಾಂಗ್ರೆಸ್‍ನ ಪ್ರಭಾವಿ ನಾಯಕರನ್ನು ಸೆಳೆದುಕೊಳ್ಳಲು ಬಿಜೆಪಿ ಏನೆಲ್ಲಾ ಪ್ರಯತ್ನ ನಡೆಸಿದೆ ಎಂಬುದು ನನಗೆ ಗೊತ್ತು.

ಅಸಾಂವಿಧಾನಿಕವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಸದಾ ಕಾಲ ನಿಮ್ಮ ಜೊತೆಗಿದ್ದೇವೆ. ಪಕ್ಷದ ನಿಷ್ಠರನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಧೈರ್ಯ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments