ಡಿಕೆಶಿ ಪದಗ್ರಹಣಕ್ಕೆ ಬಾಯಿ ಮಾತಿನ ಬದಲಾಗಿ ಅಧಿಕೃತವಾದ ಅನುಮತಿ ನೀಡಿ : ಸಂಸದ ಡಿ.ಕೆ.ಸುರೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11-ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಕುರಿತಂತೆ ಬಾಯಿ ಮಾತಿನ ಹೇಳಿಕೆ ನೀಡುವ ಬದಲಾಗಿ ಅಧಿಕೃತವಾದ ಅನುಮತಿ ನೀಡುವಂತೆ ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಯನ್ನು ಗಮನಿಸಿದ್ದೇವೆ. ಕಾರ್ಯಕ್ರಮ ಮಾಡಿಕೊಳ್ಳಲು ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಬಾಯಿ ಮಾತಿನ ಹೇಳಿಕೆಗಳು ಅಧಿಕೃತ ಆದೇಶವಾಗುವುದಿಲ್ಲ ಎಂದರು.

ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುವ ಪ್ಯಾಕೇಜ್‍ನ್ನು ಬಾಯಿ ಮಾತಿನಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ. ಆದರೆ ಈವರೆಗೂ ಯಾರಿಗೂ ಹಣ ಬಿಡುಗಡೆಯಾಗಿಲ್ಲ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ನಮಗೆ ಯಾವುದೇ ಆದೇಶ ಬಂದಿಲ್ಲ ಎನ್ನುತ್ತಾರೆ. ಈ ರೀತಿ ಹೇಳಿಕೆಗಳು ಅನುಮತಿಗಳಾಗುವುದಿಲ್ಲ.

ನಾವು ಸಂವಿಧಾನಬದ್ಧವಾಗಿ ನಡೆದು ಕೊಳ್ಳುತ್ತೇವೆ. ಕಾನೂನು ಪಾಲನೆ ಮಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸುತ್ತೇ. ಅಧಿಕೃತ ಆದೇಶ ಇಲ್ಲದೆ ಹೋದರೆ ಕಾರ್ಯಕ್ರಮ ಮಾಡುವುದು ನಿಯಮದ ಉಲ್ಲಂಘನೆಯಾಗುತ್ತದೆ ಹಾಗಾಗಿ 3ನೇ ಬಾರಿಯೂ ಸಿಎಂಗೆ ಪತ್ರ ಬರೆದು ಅನುಮತಿ ಕೋರಿದ್ದೇವೆ.

ಅಧಿಕೃತವಾದ ಆದೇಶ ಹೊರಡಿಸಿದರೆ ನಮಗೆ ಗ್ರಾಮಪಂಚಾಯ್ತಿಗಳ ಮಟ್ಟದಲ್ಲಿ ತೊಂದರೆಯಾಗುವುದಿಲ್ಲ. ಅನುಮತಿ ಕೊಡುವ ಮನಸ್ಸಿದರೆ ಲಿಖಿತವಾಗಿ ನೀಡಲಿ ಇಲ್ಲದೆ ಹೋದರೆ ಇದೇ 14ರಂದು ನಿಗದಿಯಾಗಿರುವ ಕಾರ್ಯಕ್ರಮವನ್ನು ಮುಂದೂಡುವುದಾಗಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಅದರಂತೆ ಮುಂದಿನ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದರು.

Facebook Comments