ಸಾವಿನ ಸಂಖ್ಯೆಯನ್ನು ಸರ್ಕಾರ ಮರೆ ಮಾಚುತ್ತಿದೆ: ಡಿ.ಕೆ.ಸುರೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.19-ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಯಾವುದೇ ತಯಾರಿ ಮಾಡಿಕೊಳ್ಳದೇ ರಾಜಕೀಯ ಮಾಡುವುದರಲ್ಲೇ ಕಾಲಹರಣ ಮಾಡಿದ್ದರಿಂದ ಪರಿಸ್ಥಿತಿ ಕೈ ಮೀರಿದ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅವರಿಗೆ ಚುನಾವಣೆ ನಡೆಸಲು ಹಣ ವಸೂಲು ಮಾಡಿಕೊಳ್ಳಬೇಕಿತ್ತು. ಚುನಾವಣೆ ಮುಗಿದ ಮೇಲೆ ಲಾಕ್‍ಡೌನ್ ಬಗ್ಗೆ ಮಾತನಾಡುತ್ತಿದ್ದಾರೆ. ವಿಶ್ವದ ಎಲ್ಲ ದೇಶಗಳು ಕೊರೊನಾ ನಿಯಂತ್ರಣಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದರು. ಆದರೆ, ನಮ್ಮಲ್ಲಿ ಲಸಿಕೆ ಕಂಡುಹಿಡಿದಿದ್ದೇವೆ ಎಂದು ಮೈಮರೆತಿದ್ದರು. ಫೋಟೋ ಹಾಕಿಕೊಂಡು ಪ್ರಚಾರ ಪಡೆದುಕೊಂಡು ರಾಜಕೀಯ ಮಾಡುತ್ತಿದ್ದರು. ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವಿನ ಸಂಖ್ಯೆಯನ್ನು ಸರ್ಕಾರ ಮರೆ ಮಾಚುತ್ತಿದೆ. ಈಗ ನೀಡುತ್ತಿರುವ ಅಂಕಿಗಳಿಗಿಂತಲೂ ಸಾವಿನ ಪ್ರಮಾಣ ಮೂರು ಪಟ್ಟು ಹೆಚ್ಚಿದೆ. ಸರ್ಕಾರ ಕೈ ಕಟ್ಟಿ ಕುಳಿತಿದ್ದು, ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ರೆಮಿಡಿಸಿವಿರ್ ಔಷ ಕೊರತೆ ಇದೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಆದರೆ, ಕಾಳ ಸಂತೆಯಲ್ಲಿ ಔಷ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ರಾತ್ರಿ ಕಫ್ರ್ಯೂನಂತಹ ಅವೈಜ್ಞಾನಿಕ ಕ್ರಮ ಕೈಗೊಂಡಿದೆ. ವಾರಾಂತ್ಯದ ಕಫ್ರ್ಯೂ ಕೂಡಾ ಕೊರೊನಾ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, ಕೊರೊನಾ ಎರಡನೇ ಅಲೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬೀದಿಯಲ್ಲಿ ಸಾವುಗಳಾಗುತ್ತಿವೆ. ಸರ್ಕಾರ ಜೀವಂತ ವಾಗಿದೆಯೆ ಇಲ್ಲವೆ ಎಂಬ ಅನುಮಾನ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಔಷಧಿ ಹಾಗೂ ಆಸ್ಪತ್ರೆಯಲ್ಲಿ ಹಾಸಿಗೆ ಸೇರಿದಂತೆ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಜನರ ಜೀವವನ್ನು ಗಂಭೀರವಾಗಿ ಪರಿಗಣಿಸಬೇಕು.

ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬಾರದು ಎಂದು ಮನವಿ ಮಾಡಿದರು. ಅಕ್ರಮವಾಗಿ ಹಣ ಸಂಪಾದನೆ ಮಾಡಿ ಉಪಚುನಾವಣೆಯಲ್ಲಿ ಒಂದೊಂದು ಕ್ಷೇತ್ರಕ್ಕೆ 50 ಕೋಟಿ ರೂ. ಖರ್ಚು ಮಾಡಿದ್ದಾರೆ. ಜನರ ಆರೋಗ್ಯ ರಕ್ಷಣೆ ಬಗ್ಗೆ ಸರ್ಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಕೊರೊನಾ ಗಂಭೀರವಾದ ಸಮಸ್ಯೆ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದರು.

Facebook Comments