“ರಾಜಕೀಯಕ್ಕಾಗಿ ಬಿಜೆಪಿಯವರಿಂದ ಹಿಂದೂಧರ್ಮದ ದುರ್ಬಳಕೆ”

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಆ. 26- ರಾಜಕೀಯ ಉದ್ದೇಶಕೋಸ್ಕರ ಬಿಜೆಪಿಯವರು ಹಿಂದು ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.

ತಾಲ್ಲೂಕಿನ ಚಂದಾಪುರದ ಆರ್.ಕೆ.ಗಾರ್ಡೇನಿಯಾದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಆರೋಗ್ಯ ಹಸ್ತ ಕಾರ್ಯಕ್ರಮ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

ನಾವೂ ಕೂಡ ಪ್ರತಿನಿತ್ಯಾ ತಂದೆ-ತಾಯಿಗೆ ಮತ್ತು ದೇವರಿಗೆ ಪೂಜೆ ಸಲ್ಲಿಸುತ್ತೇವೆ, ದೇಶದಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಹಿಂದೂ ಧರ್ಮದ ಪ್ರಗತಿಗೆ ಕಾಂಗ್ರೆಸಿಗರ ಕೊಡುಗೆ ಅಪಾರವಿದೆ ಆದರೆ ರಾಜಕೀಯ ಲಾಭಕೋಸ್ಕರ ಧರ್ಮಗಳ ಮತ್ತು ಜಾತಿಗಳ ಹೆಸರಿನಲ್ಲಿ ಎಂದೂ ಕೂಡ ಕಾಂಗ್ರೆಸ್ ರಾಜಕೀಯ ಮಾಡಿಲ್ಲ ಜೊತೆಗೆ ಹಿಂದೂ ಧರ್ಮದ ಬಗ್ಗೆ ನಮಗೆ ಬೋಧನೆ ಮಾಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದೆ ಜೊತೆಗೆ ಜನರು ಭಯ ಭೀತಿಯಿಂದ ಬದುಕುವಂತಹ ಪರಿಸ್ಥಿತಿಯಲ್ಲಿದ್ದರು ಸಹ ಅದಕ್ಕೆ ಪರಿಹಾರ ಕಂಡು ಹಿಡಿಯಬೇಕಾದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಗಂಟೆ ಬಾರಿಸಿ, ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದು ಜನರ ಮುಖಕ್ಕೆ ಮಸಿ ಬಳಿಯುವಂತಹ ಕೆಲಸವನ್ನು ಮಾಡುತ್ತಿರುವುದು ಒಂದು ಕಡೆಯಾದರೆ ಕೊರೋನಾ ಹೆಸರಿನಲ್ಲಿ ಬಿಜೆಪಿ ನಾಯಕರು ಕೋಟ್ಯಾಂತರ ರೂಪಾಯಿಯನ್ನು ಕಬಳಿಸುವ ಕೆಲಸವನ್ನು ಮಾಡಿದ್ದು ತಪ್ಪು ಲೆಕ್ಕಕ್ಕೆ ಉತ್ತರ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಳಿದರೆ ಇದುವರೆಗೆ ಬಿಜೆಪಿಯವರು ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ. ರಮೇಶ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಮುಂಬರುವ ಎಲ್ಲಾ ಹಂತದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಕಾಂಗ್ರೆಸ್‍ನ ಆರ್.ಕೆ.ರಮೇಶ್, ಕುಮಾರ್, ಆಂತೋಣಿ ಕಿರಣ್, ಹಾರಗದ್ದೆ ಶ್ರೀಧರ್, ಮಂಜುನಾಥ್, ಆಂಜಿನಪ್ಪ, ಶೋಭಗೌಡ, ಸುಷ್ಮಾ ರಾಜಗೋಪಾಲರೆಡ್ಡಿ, ಸುಜಯ್, ಎನ್.ಬಿ.ಐ.ನಾಗರಾಜ್, ಅಚ್ಚುತ್‍ರಾಜ್, ಪ್ರಸನ್ನಕುಮಾರ್. ನವೀನ್, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Facebook Comments

Sri Raghav

Admin