ಕುಮಾರಸ್ವಾಮಿ-ಡಿಕೆಶಿ ಮೀಟ್ ಮಾಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2-ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಜೆಡಿಎಸ್‍ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‍ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಬೆಳಗಾವಿಯಿಂದ ಚಿಕ್ಕಬಳ್ಳಾಪುರಕ್ಕೆ ತೆರಳುವಾಗ ಹವಾಮಾನ ವೈಪರೀತ್ಯದಿಂದಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಬೆಂಗಳೂರಿನತ್ತ ತೆರಳುತ್ತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ವಿಮಾನ ನಿಲ್ದಾಣದಲ್ಲೇ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆಕಸ್ಮಿಕ ಭೇಟಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಪೂರ್ವನಿಯೋಜಿತವಾಗಿಯೇ ಇಬ್ಬರೂ ನಾಯಕರು ಸಮಯ ನಿಗದಿ ಮಾಡಿಕೊಂಡು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಜೊತೆ ಬಂಡೆಯಂತೆ ನಿಲ್ಲುತ್ತೇನೆ ಎಂದು ಹೇಳಿದ್ದ ಡಿ.ಕೆ.ಶಿವಕುಮಾರ್ ಅವರು, ಸರ್ಕಾರ ಪತನವಾಗುವುದನ್ನು ತಪ್ಪಿಸಲು ಹರಸಾಹಸ ನಡೆಸಿದರು. ಈ ಮೊದಲು ರಾಜಕೀಯ ವೈರಿಗಳಂತಿದ್ದ ಡಿಕೆಶಿ ಮತ್ತು ಎಚ್‍ಡಿಕೆ ಸಮ್ಮಿಶ್ರ ಸರ್ಕಾರದ ನಂತರ ಆತ್ಮೀಯ ಗೆಳೆಯರಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಈ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗಿದೆ.

ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಜೈಲು ಸೇರಿದಾಗ ಕುಮಾರಸ್ವಾಮಿಯವರು ಖುದ್ದಾಗಿ ಹೋಗಿ ಭೇಟಿ ಮಾಡಿ ಬಂದಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಕಾಂಗ್ರೆಸ್ ನಾಯಕರಿಗಿಂತಲೂ ಮೊದಲು ಹೋಗಿ ವಿಮಾನ ನಿಲ್ದಾಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಬರಮಾಡಿಕೊಂಡಿದ್ದರು.

ವಿಮಾನ ನಿಲ್ದಾಣದಿಂದ ಸ್ವಲ್ಪದೂರದಲ್ಲಿ ತಮ್ಮನ್ನು ಸ್ವಾಗತಿಸಲು ಸೇರಿದ್ದ ಭಾರೀ ಸಂಖ್ಯೆಯ ಜನಸ್ತೋಮದ ನಡುವೆ ಮಾತನಾಡಿದ ಡಿ.ಕೆ.ಶಿವಕುಮಾರ್ ಆ ವೇಳೆ ತಮ್ಮ ಕೈಯಲ್ಲಿ ಜೆಡಿಎಸ್‍ನ ಬಾವುಟ ಹಿಡಿದಿದ್ದರು. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಇತ್ತೀಚೆಗೆ ನಡೆದಿರುವ ಹೊಸ ಬೆಳವಣಿಗೆಯಲ್ಲಿ ಮತ್ತೊಮ್ಮೆ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿಯ ಮಾತುಗಳು ಕೇಳಿ ಬಂದಿವೆ. ಉಪಚುನಾವಣೆಗಳಲ್ಲಿ ಬಿಜೆಪಿ ಐದಕ್ಕಿಂತಲೂ ಕಡಿಮೆ ಸ್ಥಾನ ಗೆದ್ದಿದ್ದೇ ಆದರೆ ಬಹುಮತ ಕಳೆದುಕೊಳ್ಳಲಿದೆ. ಆಗ ಹೊಸ ಸರ್ಕಾರ ರಚನೆಯ ಸಾಧ್ಯಸಾಧ್ಯತೆಗಳು ಚಿಗುರೊಡೆಯಲಿವೆ. ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಲು ನಾಮುಂದು-ತಾಮುಂದು ಎಂದು ಘಟಾನುಘಟಿ ನಾಯಕರು ಮುಂದೆ ಬಂದಿದ್ದಾರೆ. ಒಂದು ವೇಳೆ ಮೈತ್ರಿ ಸರ್ಕಾರ ಪುನಾರಚನೆಯಾಗುವುದೇ ಆದರೆ ಅಲ್ಲಿ ಜೆಡಿಎಸ್‍ನ ಪಾತ್ರ ಮಹತ್ವದ್ದಾಗಿದೆ.

ಕಾಂಗ್ರೆಸ್ ಏನೇ ನಿರ್ಧಾರ ಮಾಡಿದರೂ ಜೆಡಿಎಸ್ ನಾಯಕರು ಸೂಚಿಸಿದ ವ್ಯಕ್ತಿಯೇ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಭೇಟಿ ಹಲವು ಕುತೂಹಲಗಳನ್ನು ಹುಟ್ಟುಹಾಕಿವೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರೂ ನಾಯಕರು ಚರ್ಚೆ ನಡೆಸಿರುವುದು ರಾಜಕೀಯ ವಿರೋಧಿಗಳಲ್ಲಿ ದುಗುಡ ಹೆಚ್ಚಿಸಿದೆ.

Facebook Comments