ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ ದೆಹಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.24- ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕ ಸ್ಥಾನದ ಗೊಂದಲ ಸೇರಿ ಎಲ್ಲವಕ್ಕೂ ಶೀಘ್ರವೇ ಇತಿಶ್ರಿ ಹಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿ ಕಾರ್ಜುನ ಖರ್ಗೆ, ಮಾಜಿ ಸಚಿವ ಡಿ.ಕೆ.ಶಿವ ಕುಮಾರ್ ಸೇರಿದಂತೆ ಮತ್ತಿತರರು ದೆಹಲಿಯಲ್ಲಿ ಹೈಕಮಾಂಡ್‍ನ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ವಿಷಯದಲ್ಲಿ ನಿರ್ಧಾರ ಬಹುತೇಕ ಸಿದ್ಧವಾಗಿದ್ದರೂ ಪ್ರಕಟಣೆ ವಿಳಂಬಗೊಳ್ಳುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ನಾಲ್ಕು ಮಂದಿ ಕಾರ್ಯಾಧ್ಯಕ್ಷರ ನೇಮಕವಾಗಬೇಕು ಎಂಬ ಒತ್ತಡವನ್ನು ರಾಜ್ಯದ ಕೆಲ ನಾಯಕರು ಹೈಕಮಾಂಡ್ ಮೇಲೆ ಹೇರುತ್ತಿದ್ದಾರೆ. ಕಾರ್ಯಾಧ್ಯಕ್ಷರನ್ನು ನೇಮಿಸುವುದಾದರೆ ನನಗೆ ಅಧ್ಯಕ್ಷ ಸ್ಥಾನ ಬೇಡ ಎಂಬುದು ಡಿ.ಕೆ.ಶಿವಕುಮಾರ್ ಅವರ ಹಠ. ಹೀಗಾಗಿ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ.

ಮತ್ತೊಂದೆಡೆ ವಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷ ನಾಯಕನ ಸ್ಥಾನ ಎರಡನ್ನೂ ಪ್ರತ್ಯೇಕಗೊಳಿಸಲು ಹೈಕಮಾಂಡ್ ಚಿಂತನೆ ನಡೆಸಿದೆ. ಇದಕ್ಕೆ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಿಷಯದಲ್ಲೂ ನಿರ್ಧಾರ ಹೊರ ಬಿದ್ದಿಲ್ಲ. ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅದನ್ನು ಅಂಗೀಕರಿಸಿಯೂ ಇಲ್ಲ. ತಿರಸ್ಕರಿಸಿಯೂ ಇಲ್ಲ.

ರಾಜ್ಯ ಕಾಂಗ್ರೆಸ್‍ನ ಮಟ್ಟಿಗೆ ಅತ್ಯಂತ ಪ್ರಮುಖವಾದ ಈ ಎರಡು ನಿರ್ಣಯಗಳು ಇನ್ನು ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ. ಹೈಕಮಾಂಡ್‍ನ ನಾಯಕರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಇಂದು ನವದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಜತೆ ಸುಮಾರು ಅರ್ಧಗಂಟೆ ಕಾಲ ಚರ್ಚೆ ನಡೆಸಿದ್ದಾರೆ.

ಮಧ್ಯಪ್ರದೇಶದ ದಾತಿಯ ಪೀತಾಂಬರ ಪೀಠದ ಬಾಗಲ್ಮುಖಿ ಹಾಗೂ ಧೂಮವತಿ ದೇಗುಲದಲ್ಲಿ ವಿಶೇಷ ಪೂಜೆ ನಡೆಸಿದ ಬಳಿಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೆಹಲಿಗೆ ಆಗಮಿಸಿದ್ದಾರೆ. ಬಹುತೇಕ ಸೋಮವಾರದವರೆಗೂ ದೆಹಲಿಯಲ್ಲೇ ಉಳಿಯುವ ಡಿಕೆಶಿ ಹಲವಾರು ಮುಖಂಡರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಶತಾಯಗತಾಯ ನೆನೆಗುದಿಗೆ ಬಿದ್ದಿರುವ ಈ ಎರಡು ಹುದ್ದೆಗಳ ಬಗ್ಗೆ ಶೀಘ್ರ ನಿರ್ಧಾರ ಪ್ರಕಟಿಸುವಂತೆ ವರಿಷ್ಠ ರ ಮೇಲೆ ರಾಜ್ಯದ ನಾಯಕರು ಒತ್ತಡ ಹೇರಲಿದ್ದಾರೆ.

Facebook Comments