ರೋಗಿಗಳ ಕುಟುಂಬದವರ ಜೊತೆ ಮಾತನಾಡಲು ಹೆದರುವ ಪರಿಸ್ಥಿತಿ ನಿರ್ಮಿಸಬೇಡಿ: ವೈದ್ಯರ ಅಳಲು
ಬೆಂಗಳೂರು, ಜೂ.1- ಬ್ಲಾಕ್ ಫಂಗಸ್ ಚಿಕಿತ್ಸೆಗೆ ಔಷಧಿ ಕೊರತೆಯ ಬಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಾಡಿರುವ ಟ್ವಿಟ್ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ವ್ಯಕ್ತಿಗಳು ಮತ್ತು ಸಂಘಟನೆಗಳ ಆರೋಪಗಳನ್ನು ದುರುದ್ದೇಶ ಪೂರಿತ ಎಂದು ತಳ್ಳಿ ಹಾಕುವ ಸರ್ಕಾರಕ್ಕೆ ತಜ್ಞ ವೈದ್ಯರ ಅಭಿಪ್ರಾಯಗಳು ಬಿಸಿ ತುಪ್ಪವಾಗಿವೆ. ನಿರಂತರವಾಗಿ ಟ್ವಿಟ್ ಮಾಡುತ್ತಿರುವ ವೈದ್ಯರಿಗೆ ಸರ್ಕಾರವನ್ನು ಸಮರ್ಥಿಸಿಕೊಳ್ಳುವವರು ಕಟು ಶಬ್ಧಗಳಲ್ಲಿ ಪ್ರತ್ಯುತ್ತರಿಸುತ್ತಿರುವುದು, ಕೆಲವರು ವೈದ್ಯರ ಬೆಂಬಲಕ್ಕೆ ನಿಂತಿರುವುದು ಗಮನ ಸೆಳೆದಿದೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನೇತ್ರ ಶಸ್ತ್ರ ಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿಯ ತಜ್ಞ ವೈದ್ಯರಾಗಿರುವ ಡಾ.ರಘುರಾಜ್ ಹೆಗಡೆ ಅವರು, ಟ್ವಿಟ್ ಮಾಡಿದ್ದು, ಮ್ಯೂಕರ್ ಮೈಕೋಸಿಸ್ (ಕಪ್ಪು ಶಿಲೀಂಧ್ರ)ದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಒಂದು ಕಣ್ಣನ್ನು ಕಳೆದ ವಾರ ಶಸ್ತ್ರ ಚಿಕಿತ್ಸೆಯಿಂದ ತೆಗೆದು ಹಾಕಿದ್ದೇನೆ. ಇವತ್ತು ಇನ್ನೊಂದು ಕಣ್ಣಿಗೂ ಸೋಂಕು ಹಬ್ಬಿದೆ. ಶೀಘ್ರವೇ ಮೆದುಳಿಗೂ ತಲುಪುವ ಸಾಧ್ಯತೆ ಇದೆ. ನನಗೆ ರೋಗಿಯ ಕುಟುಂಬದ ಜೊತೆ ಮಾತನಾಡುವ ಪರಿಸ್ಥಿತಿ ಎದುರಾಗಿದ್ದು, ಭಯವಾಗುತ್ತಿದೆ. ಸರ್ಕಾರ ನಮ್ಮನ್ನು ಯಾಕೆ ಈ ಪರಿಸ್ಥಿತಿಗೆ ದೂಡುತ್ತಿದೆ ಎಂದು ಪ್ರಶ್ನಿಸಿದ್ಧಾರೆ.
ವೈದ್ಯರ ಟ್ವಿಟ್ ಗೆ ಕೆಲವು ಆಕ್ಷೇಪ ವ್ಯಕ್ತ ಪಡಿಸಿದಾಗ ಪ್ರತಿಕ್ರಿಯಿಸಿರುವ ಅವರು, ಸರ್ಕಾರ ಎಚ್ಚೇತ್ತುಕೊಳ್ಳುವವರೆಗೂ ನಾನು ಈ ಕೆಲಸವನ್ನು ಮಾಡುತ್ತಲೇ ಇರುತ್ತೇನೆ. ಬ್ಲಾಕ್ ಫಂಗಸ್ ರೋಗದ ಚಿಕಿತ್ಸೆಗೆ ಬೇಕಾಗುವ ಅಂಪ್ರೊಟೆರಿಸಿನ್ ಬಿ ಔಷಧಿ ಕೊರತೆಯಿಂದ ಜನ ಸಾಯುತ್ತಿದ್ದಾರೆ. ಮುಂದಿನ ನಾಲ್ಕೈದು ವಾರಗಳವರೆಗೆ ಹೆಚ್ಚು ಔಷಧಿ ಬೇಕಾಗಬಹುದು. ತಕ್ಷಣವೇ ಆಮದು ಮಾಡಿಕೊಳ್ಳಿ, ಆಸ್ಪತ್ರೆಗಳಿಗೆ ಹಂಚಿಕೆ ಮಾಡಿ, ಔಷಧಿ ಪೂರೈಸಿ ಎಂದು ಸರ್ಕಾರ ಮತ್ತು ಮುಖ್ಯಮಂತ್ರಿಯವರನ್ನು ಉಲ್ಲೇಖಿಸಿದ್ದಾರೆ.
ರೋಗದಿಂದ ಸಂಕಷ್ಟದಲ್ಲಿರುವ ರೋಗಿಗಳ ಕುಟುಂಬದವರ ಜೊತೆ ಮಾತನಾಡಿ, ದಯವಿಟ್ಟು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಅಧಿಕಾರಿಗಳಿಂದ ಎದುರಾಗಿರುವ ಅಡೆಗಳನ್ನು ನಿವಾರಣೆ ಮಾಡಿ. ಜೀವ ರಕ್ಷಕ ಔಷಧಿಯನ್ನು ಒದಗಿಸಿ ಎಂದು ಮನವಿ ಮಾಡಿದ್ದಾರೆ.
ಮುಂದಿನ ಆರು ತಿಂಗಳ ಬಳಿಕ ಔಷಧಿ ಬೇಕಿಲ್ಲ. ಸದ್ಯಕ್ಕಿರುವ ಬೇಡಿಕೆಯನ್ನು ಪೂರ್ಣಗೊಳಿಸಲು ವಿದೇಶಗಳಲ್ಲಿ ತಯಾರಾಗುತ್ತಿರುವ ಔಷಧಿಯನ್ನು ಆಮದು ಮಾಡಿಕೊಳ್ಳಿ, ಇದು ಯೋಚಿಸುತ್ತಾ ಕುಳಿತುಕೊಳ್ಳುವ ಸಮಯವಲ್ಲ. ಈಗ ಉತ್ಪಾದನೆಗೆ ಆರಂಭಿಸಿದರೆ ಹೆಚ್ಚು ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.
ಸರ್ಕಾರ ಮೇ ತಿಂಗಳಿನಲ್ಲಿ ಸಾಕಷ್ಟು ಔಷಧಿ ಪೂರೈಸಿದೆ, ಜೂನ್ ತಿಂಗಳಿಗೆ ಐದು ಲಕ್ಷದಂತೆ ಪೂರೈಸಲಿದೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ದೇಶಾಶದ್ಯಂತ ಮುಂದಿನ ನಾಲ್ಕು ವಾರಗಳಿಗೆ 30 ಲಕ್ಷ ವೈಲ್ಸ್ ಔಷಧಿ ಬೇಕು, ಸರ್ಕಾರ ಐದು ಲಕ್ಷ ಮಾತ್ರ ಒದಗಿಸುತ್ತಿದೆ ಎಂದು ವೈದ್ಯರು ಅಸಮದಾನ ವ್ಯಕ್ತ ಪಡಿಸಿದ್ದಾರೆ.
ವೈದ್ಯರ ಆಕ್ಷೇಪಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿವೆ. ಕೊರೊನಾ ಚಿಕಿತ್ಸೆ ನೀಡುವಾಗ ಬ್ಲಾಕ್ ಫಂಗಸ್ ಬರುವ ಮುನ್ಸೂಚನೆಯನ್ನು ವೈದ್ಯರು ಯಾಕೆ ಗುರುತಿಸಲಿಲ್ಲ. ಸೂಕ್ತ ಚಿಕಿತ್ಸಾ ಪದ್ಧತಿಯನ್ನು ಏಕೆ ಅನುಸರಿಸಲಿಲ್ಲ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.