ತಿಂಗಳೊಳಗೆ 1246 ವೈದ್ಯರು ಹಾಗೂ 824 ತಜ್ಞ ವೈದ್ಯರ ನೇರ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.4- ರಾಜ್ಯದ ಪ್ರಾಥಮಿಕ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 1246 ಸಾಮಾನ್ಯ ವೈದ್ಯರು ಹಾಗೂ 824 ತಜ್ಞ ವೈದ್ಯರನ್ನು ಒಂದು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಕೆ.ಸುಧಾಕರ್ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ನರೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿಯಿವೆ. ಖಾಲಿ ಇರುವ 1246 ಸಾಮಾನ್ಯ ವೈದ್ಯರು ಹಾಗೂ 824 ತಜ್ಞ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 9850 ಕಿರಿಯ ಆರೋಗ್ಯ ಸಹಾಯಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಖಾಲಿ ಇದ್ದ 224 ಹುದ್ದೆಗಳನ್ನು 2018ರ ಸಾಲಿನಲ್ಲಿ ವಿಶೇಷ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲಾಗಿದೆ. ಒಟ್ಟು 7123 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 2727 ಹುದ್ದೆಗಳು ಖಾಲಿ ಇವೆ ಎಂದರು. ಇನ್ನು ಮುಂದೆ ಆ್ಯಂಬುಲೆನ್ಸ್‍ಗಳಲ್ಲಿ 12 ಸೇವೆಗಳನ್ನು ಸಮರ್ಪಕ ಮತ್ತು ಉತ್ಕøಷ್ಟ ಸೇವೆ ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಎರಡುಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಕಳೆದ 10 ವರ್ಷಗಳಿಂದ ಆ್ಯಂಬುಲೆನ್ಸ್ ನೀಡುತ್ತಿರುವ ಸೇವೆಯಿಂದ ನಮಗೆ ಪಾಠವಾಗಿದೆ. ಮುಂದಿನ ದಿನಗಳಲ್ಲಿ ಆ್ಯಂಬುಲೆನ್ಸ್‍ಗಳಲ್ಲಿ 12 ಸೇವೆಗಳನ್ನು ನೀಡಲಾಗುವುದು. ಆ್ಯಂಬುಲೆನ್ಸ್‍ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು. ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉತ್ತಮವಾದ ಸೇವೆಯನ್ನು ನೀಡಲು ವೈದ್ಯರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ ಒಂದು ಲಕ್ಷ ಜನಸಂಖ್ಯೆ ಇರುವ ತಾಲ್ಲೂಕುಗಳಲ್ಲಿ ಒಂದು ಆ್ಯಂಬುಲೆನ್ಸ್ ಇದೆ. ಇನ್ನು ಮುಂದೆ 30ರಿಂದ 35 ಸಾವಿರ ಜನರಿಗೆ ಒಂದು ಆ್ಯಂಬುಲೆನ್ಸ್ ನೀಡಲಾಗುವುದು ಎಂದು ತಿಳಿಸಿದರು. ಮಲೆಮಹೇಶ್ವರದಲ್ಲಿ 30 ಹಾಸಿಗೆ ಸಾಮಥ್ರ್ಯವುಳ್ಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಸಿಎಂ ಒಪ್ಪಿಗೆ ಕೊಟ್ಟಿದ್ದಾರೆ. ಈ ವರ್ಷದ ಅಂತ್ಯದೊಳಗೆ ಇಲ್ಲಿ ಹೊಸ ಆಸ್ಪತ್ರೆ ತಲೆಎತ್ತಲಿದೆ ಎಂದರು.

ಹೊಸದಾಗಿ ರಚನೆಯಾಗಿರುವ 49 ತಾಲ್ಲೂಕುಗಳಲ್ಲಿ ಹೊಸ ಕಟ್ಟಡಗಳ ಮೂಲಕ ನಾವು ಆರೋಗ್ಯ ಕೇಂದ್ರಗಳನ್ನು ನಿರ್ಮಿಸಬೇಕು. ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಮುಖ್ಯಮಂತ್ರಿ ಕೂಡ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಬೇಕೆಂದು ಸೂಚಿಸಿದ್ದಾರೆ. ಹನೂರು ತಾಲ್ಲೂಕಿನಲ್ಲಿರುವ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಆರ್ಥಿಕ ನಿರ್ಬಂಧ ಇರುವುದರಿಂದ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ. ಎಲ್ಲೆಲ್ಲಿ ಸಿಬ್ಬಂದಿಗಳ ಕೊರತೆ ಇದೆಯೋ ಆದಷ್ಟು ಶೀಘ್ರ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

Facebook Comments