ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸರಿಗೆ ತಜ್ಞ ವೈದ್ಯರಿಂದ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.25- ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ, ಒತ್ತಡ ಮುಕ್ತವಾಗಿ ಯಾವ ರೀತಿ ಕರ್ತವ್ಯ ನಿರ್ವಹಿಸಬಹುದೆಂಬ ಬಗ್ಗೆ ನಿಮ್ಹಾನ್ಸ್ ಆಸ್ಪತ್ರೆಯ ಮನೋತಜ್ಞ ವೈದ್ಯರು ಹಾಗೂ ರಾಜೀವ್‍ಗಾಂಧಿ ಆರೋಗ್ಯ ವಿವಿ ಪ್ರೊಫೆಸರ್‍ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಜಾಗೃತಿ-ಅರಿವು ಮೂಡಿಸಿದರು.

ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ನಿಮ್ಹಾನ್ಸ್ ಆಸ್ಪತ್ರೆಯ ತಜ್ಞರ ವೈದ್ಯರ ಸಹಯೋಗದೊಂದಿಗೆ ಪೊಲೀಸ್ ಆಯುಕ್ತರ ಕಚೇರಿಯ ಮೀಟಿಂಗ್ ಹಾಲ್‍ನಲ್ಲಿ, ವಿಡಿಯೋ ಕಾನ್ಫರೆನ್ಸ್ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ತರಬೇತಿ ವೇಳೆ ನಿಮ್ಹಾನ್ಸ್ ಆಸ್ಪತ್ರೆಯ ತಜ್ಞ ವೈದ್ಯರು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮಾತನಾಡಿ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಹಾಗೂ ತಮ್ಮ ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಸಾರ್ವಜನಿಕರೊಂದಿಗೆ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಪೊಲೀಸ್ ಸಿಬ್ಬಂದಿ ಅನೇಕ ತೊಂದರೆಗಳನ್ನು ಅನುಭವಿಸುವ ಸಂಭವವೂ ಹೆಚ್ಚು.

ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿಷ್ಠೆ ಮೆರೆಯುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಬಹಳ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸುತ್ತಿರುತ್ತಾರೆ. ಈ ಮಾರಕ ಕಾಯಿಲೆಯಿಂದ ಯಾವ ರೀತಿ ಜಾಗೃತಿಯಿಂದ ಇರಬೇಕು. ಯಾವೆಲ್ಲ ಸೂತ್ರಗಳನ್ನು ಅನುಸರಿಸಬೇಕು.

ಇಂತಹ ಸಮಯದಲ್ಲಿ ಆತಂಕಕ್ಕೆ ಒಳಗಾಗದೆ ಧೈರ್ಯ ಮತ್ತು ಒತ್ತಡ ಮುಕ್ತವಾಗಿ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕೆಂಬುದರ ಬಗ್ಗೆ ಸವಿವರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿದರು. ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹೇಗೆ ಕರ್ತವ್ಯ ನಿರ್ವಹಿಸಬೇಕೆಂಬುದರ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಾಗಾರವಾಗಿತ್ತು.

ಎರಡನೆ ತರಬೇತಿ ಕಾರ್ಯಕ್ರಮವು ಏ.30ರಂದು ನಡೆಯಲಿದೆ ಹಾಗೂ ಹಿರಿಯ ಅಧಿಕಾರಿಗಳಿಗಾಗಿ ಇಂತಹದ್ದೇ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗದ ಸಂಬಂಧವಾಗಿ ಪೋಸ್ಟರ್ ಮತ್ತು ಬುಕ್‍ಲೆಟ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಾಗೃತಿ ಮತ್ತು ತಿಳುವಳಿಕೆ ನೀಡುವುದರ ಜತೆಗೆ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕೆಂದು ಕಿವಿಮಾತು ಹೇಳಿದರು. ಎಲ್ಲ ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin