ಮುಷ್ಕರಕ್ಕೆ ದೇಶವ್ಯಾಪಿ ವೈದ್ಯರ ಸಾಥ್, ಚಿಕಿತ್ಸೆ ಸಿಗದೇ ರೋಗಿಗಳ ನರಳಾಟ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ,ಜೂ.17- ಕಿರಿಯ ವೈದ್ಯರ ಮೇಲೆ ಹಲ್ಲೆ ಮತ್ತು ಅವರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಮೀನಮೇಷ ಎಣಿಸುತ್ತಿರುವ ಪಶ್ಚಿಮ ಬಂಗಾಳ ಸರ್ಕಾರದ ಧೋರಣೆ ಖಂಡಿಸಿ ನಡೆಯುತ್ತಿರುವ ಮುಷ್ಕರಕ್ಕೆ ದೇಶವ್ಯಾಪಿ ವೈದ್ಯರು ಬೆಂಬಲ ನೀಡಿದ್ದಾರೆ.

ರಾಜಧಾನಿ ದೆಹಲಿಯ ಏಮ್ಸ್ ಸೇರಿದಂತೆ ಮುಂಬೈ, ಚೆನ್ನೈ ಮೊದಲಾದ ಮಹಾನಗರಗಳ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರು ಇಂದು ಒಂದು ದಿನದ ಮುಷ್ಕರದಲ್ಲಿ ಪಾಲ್ಗೊಂಡು ಪಶ್ಚಿಮ ಬಂಗಾಳದ ಕಿರಿಯ ವೈದ್ಯರಿಗೆ ಸಾಥ್ ನೀಡಿದರು.

ವೈದ್ಯಕೀಯ ಸಮುದಾಯದ ಮುಷ್ಕರದಿಂದಾಗಿ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳು ಕೂಡ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೆ ಸಾರ್ವಜನಿಕರು ಪರದಾಡುವಂತಾಯಿತು. ಹೊರರೋಗಿಗಳ ವಿಭಾಗಗಳು ಬಹುತೇಕ ಬಂದ್ ಆಗಿದ್ದರಿಂದ ಅನಾರೋಗ್ಯಪೀಡಿತರು ಚಿಕಿತ್ಸೆ ಲಭಿಸದೆ ನರಳುವಂತಾಯಿತು.

ತುರ್ತು ಚಿಕಿತ್ಸೆ ಮತ್ತು ಅನಿವಾರ್ಯ ಶಸ್ತ್ರ ಕ್ರಿಯೆಗಳನ್ನು ಹೊರತುಪಡಿಸಿ ಉಳಿದೆಲ್ಲ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆಪರೇಷನ್ ಥಿಯೇಟರ್‍ಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವ ವೈದ್ಯರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯದಲ್ಲಿ ಪಾಲ್ಗೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ದೂರದ ಪ್ರದೇಶಗಳಿಂದ ಬಂದಿದ್ದ ಹೊರರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಸಿಗದೆ ಆಸ್ಪತ್ರೆಯ ಆವರಣದಲ್ಲಿ ಬಳಲುತ್ತಿದ್ದ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿ ಕಂಡುಬಂತು.

ಕೋಲ್ಕತ್ತಾ ವರದಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಕಿರಿಯ ವೈದ್ಯರ ಮುಷ್ಕರ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ದೇಶಾದ್ಯಂತ ವೈದ್ಯರು ತಮ್ಮ ಪ್ರತಿಭಟನೆಗೆ ನೀಡಿರವುದರಿಂದ ಮತ್ತಷ್ಟು ಉತ್ತೇಜನಗೊಂಡಿರುವ ಕಿರಿಯ ವೈದ್ಯರು ತಮ್ಮ ಪಟ್ಟನ್ನು ಸಡಿಸಲಿಸದೆ ಮುಷ್ಕರ ನಿರತರಾಗಿದ್ದಾರೆ.
ಈ ನಡುವೆ ವೈದ್ಯರ ಮನವೊಲಿಸುವ ಸರ್ಕಾರದ ಯತ್ನ ಮುಂದುವರೆದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ