ವಿಕೃತನ ಪೈಶಾಚಿಕ ಕೃತ್ಯಕ್ಕೆ ಮುಗ್ದ ಹಳ್ಳಿ ಹುಡುಗಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ದೊಡ್ಡಬಳ್ಳಾಪುರ, ನ.13- ಇಪ್ಪತ್ತರ ಪ್ರಾಯದ ಯುವತಿ ವಿಕೃತನ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿರುವುದು ದುರ್ದೈವ. ಅದೆಲ್ಲಿ ಕಾದು ಕುಳಿತಿದ್ದನೋ ಹಂತಕ. ಒಂಟಿಯಾಗಿ ಸಿಕ್ಕ ಅವಳ ಪ್ರಾಣವನ್ನೇ ತೆಗೆದಿದ್ದಾನೆ. ಮುಗ್ದ ಹಳ್ಳಿ ಹುಡುಗಿ… ಹಳ್ಳಿಯ ಮುಗ್ದ ಸೌಂದರ್ಯ ಅವಳ ಕಣ್ಣಲ್ಲಿತ್ತು. ಅವಳ ಸೌಂದರ್ಯವೇ ಅವಳ ಪಾಲಿಗೆ ಮುಳುವಾಯ್ತಾ… ಹೌದು ಎನ್ನುತ್ತಿದ್ದಾರೆ ಗ್ರಾಮದ ಜನತೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗನಹಳ್ಳಿ ಗ್ರಾಮದ ರಾಜಣ್ಣ-ರತ್ನಮ್ಮ ಎಂಬ ದಂಪತಿ ಪುತ್ರಿ ಅಂಜಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಪಾಲಕರು ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ತನ್ನ ಪಾಡಿಗೆ ಕುಟುಂಬದವರೊಂದಿಗೆ ನೆಲೆಸಿದ್ದ ಯುವತಿ ಇದೀಗ ತನ್ನದಲ್ಲದ ತಪ್ಪಿಗೆ ಶವವಾಗಿ ಮಲಗಿರುವುದು ವಿಷಾದಕರ.

ಪ್ರತಿನಿತ್ಯ ಅಂಜಲಿ ಅವರ ಅಪ್ಪ ಕುರಿಗಳನ್ನು ಮೇಯಿಸಲು ಹೋಗುತ್ತಿದ್ದರು. ಆದರೆ, ನಿನ್ನೆ ಬೇರೊಂದು ಕೆಲಸಕ್ಕೆ ಹೋಗಿದ್ದರಿಂದ ಅಂಜಲಿ ಬೆಳಗ್ಗೆ ಸಹೋದರನನ್ನು ಕರೆದುಕೊಂಡು ಕುರಿ ಮೇಯಿಸಲು ಗ್ರಾಮದ ಹೊರಗಿನ ಸ್ಮಶಾನದ ಬಳಿ ತೆರಳಿದ್ದರು.ಮಟ ಮಟ ಮಧ್ಯಾಹ್ನ ಅಂಜಲಿ ಸಹೋದರ ಊಟಕ್ಕೆ ಮನೆಗೆ ಹೋಗುವುದನ್ನೇ ಕಾದು ಕುಳಿತಿದ್ದ ವಿಕೃತ ಕಾಮಿ ಸಮಯ ಸಾಧಿಸಿ ಆಕೆ ಮೇಲೆ ಪೈಶಾಚಿಕ ಕೃತ್ಯವೆಸಗಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.

ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹಲವು ಆಯಾಮಗಳಲ್ಲಿ ಆರೋಪಿ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

ಆರೋಪಿ ಒಬ್ಬನೇ… ಅಥವಾ ಇನ್ನೂ ಹಲವರು ಪೈಶಾಚಿಕ ಕೃತ್ಯಕ್ಕೆ ಸಹಕರಿಸಿದರೇ, ಹೊರಗಿನಿಂದ ಗ್ರಾಮಕ್ಕೆ ಬಂದು ಕೊಲೆ ಮಾಡಿದ್ದಾನೋ ಇಲ್ಲವೇ ಗ್ರಾಮದವನೇ ಯುವತಿಯ ಚಲನವಲನ ಗಮನಿಸಿ ಒಂಟಿಯಾಗಿರುವ ಸಮಯವನ್ನೇ ಕಾದು ಕೃತ್ಯವೆಸಗಿದ್ದಾನೆಯೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Facebook Comments