ಇಂಜಿನಿಯರ್‌ಗಳ ಆಪ್ತಮಿತ್ರ ಈ ರೋಬೋ ಡಾಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೋಸ್ಟನ್ (ಅಮೆರಿಕ),ಸೆ.4- ಇದು ರೋಬೋ ಯುಗ. ಮನುಷ್ಯನ ಎಲ್ಲ ಕಾರ್ಯಗಳಿಗೆ ಕಂಪ್ಯೂಟರ್‍ಗಳು ಹೇಗೆ ಮುಖ್ಯವೋ ಅದೇ ರೀತಿ ಯಂತ್ರಮಾನವರೂ ಸಹ ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ.

ಇದಕ್ಕೊಂದು ಸ್ಪಷ್ಟ ನಿದರ್ಶನವೆಂದರೆ ಅಮೆರಿಕ ಕೈಗಾರಿಕಾ ಘಟಕವೊಂದರಲ್ಲಿ ಶ್ವಾನ ರೀತಿಯ ರೋಬೋ ಇಂಜಿನಿಯರ್‌ಗಳ ಕೆಲಸಕಾರ್ಯಗಳಲ್ಲಿ ನೆರವಾಗುತ್ತಿದೆ. ಬನ್ನಿ ಈ ಡಾಗ್ ರೋಬೋನನ್ನು ನಾವು ಭೇಟಿ ಮಾಡೋಣ.

ಈ ಡಾಗ್ ರೋಬೊ ಹೆಸರು ಫ್ಲಫ್ಫಿ. ಇದು ಫೋರ್ಡ್ ಸಂಸ್ಥೆಯ ಹೊಸ ಎಂಜಿನಿಯರಿಂಗ್ ಯಂತ್ರ ಮಾನವ. ನಾಲ್ಕು ಕಾಲುಗಳ ಈ ರೋಬೋ ನಡೆಯುತ್ತದೆ. ಓಡುತ್ತದೆ. ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತದೆ. ಇದು ನಾಯಿ ರೀತಿಯಲ್ಲೇ ಎಲ್ಲ ಲಕ್ಷಣಗಳನ್ನು ಪ್ರದರ್ಶಿಸುತ್ತದೆ.

ಬೋಸ್ಟನ್ ಡೈನಾಮಿಕ್ಸ್‍ನಿಂದ ಶ್ವಾನವನ್ನು ಹೋಲುವ ಎರಡು ರೋಬೋಗಳನ್ನು ಫೋರ್ಡ್ ಸಂಸ್ಥೆ ಗುತ್ತಿಗೆ ಪಡೆದಿದೆ. ಒಂದು ಡಾಗ್ ರೋಬೋಗೆ ಎಂಜಿನಿಯರ್‍ಗಳು ಫ್ಲಫ್ಫಿ ಎಂಬ ಹೆಸರಿಟ್ಟಿದ್ದಾರೆ.

ಇದು ಈಗ ಅಮೆರಿಕದ ಮಿಚಿಗನ್ ಪ್ರಾಂತ್ಯದ ಸ್ಟರ್ಲಿಂಗ್ ಹೈಟ್ಸ್ ಪ್ರದೇಶದ ವ್ಯಾನ್ ಡೈಕ್ ಟ್ರಾನ್ಸ್‍ಮಿಷನ್ ಕೈಗಾರಿಕಾ ಘಟಕದಲ್ಲಿ ಅತ್ಯಂತ ನಿಖರ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಘಟಕಕ್ಕೆ ಇಂಜಿನಿಯರ್‌ಗಳು ಬಂದಾಗ ಅವರ ಅಜ್ಞಾಗಳನ್ನು ಪಾಲಿಸುತ್ತಾ ಹೇಳಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ನೆರವೇರಿಸುತ್ತದೆ.

ತನ್ನ ಕೈಗಾರಿಕಾ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯನ್ನು ಉನ್ನತೀಕರಣಗೊಳಿಸಲು ಉದ್ದೇಶಿಸಿರುವ ಫೋರ್ಡ್ ಸಂಸ್ಥೆಯ ರೀಟೂಲ್ ಕೈಗಾರಿಕಾ ಘಟಕಗಳಿಗೆ ಈ ಡಾಗ್ ರೋಬೊನನ್ನು ಬಳಸಿಕೊಳ್ಳಬಹುದು.  ಫ್ಲಫ್ಫಿ ಐದು ಕ್ಯಾಮೆರಾಗಳನ್ನು ಹೊಂದಿದ್ದು, ಇದು ಗಂಟೆಗೆ ಸುಮಾರು 5 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

ಬ್ಯಾಟರಿ ಚಾಲಿತ ಡಾಗ್ ರೋಬೋ ಎರಡು ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ರಿಮೋಟ್ ಕಂಟ್ರೋಲ್ ರೀತಿಯ ಸಾಧನದಿಂದ ಇದನ್ನು ಎಂಜಿನಿಯರ್ ನಿಯಂತ್ರಿಸಬಹುದು.

ಫ್ಲಫ್ಲಿ ಜತೆ ಇರುವ ಮತ್ತೊಂದು ಡಾಗ್ ರೋಬೊ ಹೆಸರು ಸ್ಕೌಟರ್, ಇದು ಕೂಡ ಫ್ಲಫ್ಫಿಯಂತೆಯೇ ಕಾರ್ಯನಿರ್ವಹಿಸುತ್ತದೆ. ಈ ಶ್ವಾನ ಯಂತ್ರಮಾನವರು ಕಾರ್ಖಾನೆಯಲ್ಲಿ ಅಡ್ಡಾಡುತ್ತಾ ಎಂಜಿನಿಯರ್‍ಗಳು ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.

ಇವು ಮೆಟ್ಟಿಲುಗಳನ್ನು ಏರುವ ಮತ್ತು ಇಳಿಯುವ ಸಾಮಥ್ರ್ಯ ಹೊಂದಿವೆ. ಮನುಷ್ಯರು ಹೋಗಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಇವು ಹೋಗಿ ಕಾರ್ಯನಿರ್ವಹಿಸಬಲ್ಲದು.

ರೋಬೊಗಳು ಕೈಗಾರಿಕಾ ಘಟಕಗಳಲ್ಲಿ ಇದ್ದರೆ ಸಮಯ ಉಳಿತಾಯವಾಗಿ ಶ್ರಮ ತಪ್ಪುತ್ತದೆ. ಕಾರ್ಖಾನೆಯ ಒಂದು ಸ್ಥಳದಿಂದ ಇನ್ನೊಂದು ಸ್ಳಳಕ್ಕೆ ನೌಕರರು ಪದೇ ಪದೇ ಹೋಗಬೇಕಾದ ಅಗತ್ಯವನ್ನು ಇವು ತಪ್ಪಿಸುತ್ತವೆ.

ಈ ರೋಬೊಗಳು ಸ್ಕ್ಯಾನ್ ಮಾಡುವ ಸಾಮಥ್ರ್ಯ ಹೊಂದಿದ್ದು, ಇದರಿಂದ ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಮಾನವರಿಂದ ಪ್ರತಿಯೊಂದು ಫ್ಯಾಕ್ಟರಿ ಸ್ಕ್ಯಾನ್ ಮಾಡಲು ಅಂದಾಜು 3 ಲಕ್ಷ ಡಾಲರ್ ವೆಚ್ಚವಾಗುತ್ತದೆ. ಆದರೆ ಡಾಗ್ ರೋಬೋ ಬಳಕೆಯಿಂದ ಈ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಫೋರ್ಡ್ ಸಂಸ್ಥೆ ತಿಳಿಸಿದೆ.

Facebook Comments