ನೂರಾರು ನಾಯಿಗಳ ತಲೆಬುರುಡೆ ಪತ್ತೆ, ಮಾಂಸ ದಂಧೆಗೆ ಬಲಿಯಾಗಿವೆಯೇ ಮೂಖ ಪ್ರಾಣಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಆ.30- ನೂರಾರು ಸಂಖ್ಯೆಯಲ್ಲಿ ನಾಯಿಗಳ ತಲೆಬುರುಡೆಗಳು ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ಪತ್ತೆಯಾಗಿದ್ದು, ಜನ ಹೌಹಾರಿದ್ದರೆ ಮಾಂಸದ ದಂಧೆ ನಡೆದಿದೆಯೇ ಎಂಬ ಅನುಮಾನ ಮೂಡಿಸಿದೆ.

ಕುರಿ ಮಾಂಸ ಎಂದು ಹೇಳಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದಾರಾ ಎಂಬ ಶಂಕೆ ಮೂಡಿದ್ದು ನಾಯಿ ಬುರುಡೆಗಳು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯ ಜನ ದಿಗ್ಭ್ರಾಂತಗೊಳಗಾಗಿದ್ದಾರೆ.

ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಸಮೀಪದ ಕೊಲ್ಲಿಹಳ್ಳ ಎಂಬ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ನಾಯಿಗಳ ತಲೆಬುರುಡೆಗಳು ಪತ್ತೆಯಾಗಿವೆ. ಮಾಂಸಕ್ಕಾಗಿ ನಾಯಿಗಳನ್ನು ಸಾಗಿಸಲಾಗಿದೆಯೇ ಅಥವಾ ಇದರ ಹಿಂದೆ ಯಾವ ಉದ್ದೇಶ ಇದೆ ಎಂಬುದು ನಿಗೂಢವಾಗಿದೆ.

ಈ ನಿರ್ಜನ ಪ್ರದೇಶದಲ್ಲಲಿ ನಾಯಿಗಳನ್ನು ಬೇರೆ ಕಡೆಯಿಂದ ತಂದು ಸಾಯಿಸಿ ಮಾಂಸವನ್ನು ತೆಗೆದು ಬುರುಡೆಗಳನ್ನು ಅಲ್ಲಿಯೇ ಎಸೆದಿದ್ದಾರೆಯೇ? ಕುರಿ, ಮೇಕೆ ಮಾಂಸದ ಜತೆ ಶ್ವಾನ ಮಾಂಸವನ್ನು ಬೆರಕೆ ಮಾಡಲು ಈ ರೀತಿ ಮಾಡಿರಬಹುದೇ ಎಂಬ ಹಲವು ಅನುಮಾನಗಳು ಸ್ಥಳೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪ್ರಾಣಿಪ್ರಿಯರ ಆಕ್ರೋಶ: ಶ್ವಾನಗಳ ಮಾರಣ ಹೋಮ ಪ್ರಾಣಿ ಪ್ರಿಯರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ. ಪಟ್ಟಣದ ಮಾಂಸ ಪ್ರಿಯರು ನಾಯಿಗಳ ತಲೆಬುರುಡೆ ಕಂಡು ಕಂಗಾಲಾಗಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ತನಿಖೆ ನಡೆಸಿ ನಾಯಿಗಳ ಮಾರಾಣ ಹೋಮ ನಡೆಸುತ್ತಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Facebook Comments

Sri Raghav

Admin