ಆ್ಯಪ್ ಬಳಕೆ ಮಾಡಿ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.15- ನಗರದಲ್ಲಿನ ಬೀದಿ ನಾಯಿಗಳಿಗೆ ವಲ್ರ್ಡ್ ವೈಡ್ ವೆಟರ್ನರಿ ಸರ್ವೀಸಸ್ (ವಿಶ್ವ ಪಶು ವೈದ್ಯಕೀಯ ಸೇವಾ ಸಂಸ್ಥೆ) ಆ್ಯಪ್ ಬಳಸಿ ರೇಬಿಸ್ ಚುಚ್ಚುಮದ್ದು ನೀಡುವ ಪ್ರಾಯೋಗಿಕ ಯೋಜನೆಯನ್ನು ಮತ್ತಷ್ಟು ವಾರ್ಡ್‍ಗಳಿಗೆ ವಿಸ್ತರಿಸಲು ಪಾಲಿಕೆ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಹೇರೋಹಳ್ಳಿ, ನಾಗರಬಾವಿ ಮತ್ತು ಬಿನ್ನಿಪೇಟೆ ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ವಿಶ್ವ ಪಶು ವೈದ್ಯಕೀಯ ಸೇವಾ ಸಂಸ್ಥೆಯ ಆ್ಯಪ್ ಬಳಸಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವುದರ ಜೊತೆಗೆ ಈ ವಾರ್ಡ್‍ಗಳಲ್ಲಿ ನಾಯಿಗಳು ಎಲ್ಲೆಲ್ಲಿ ಇವೆ ಎಂಬುದನ್ನು ಗುರುತಿಸಲು ಮ್ಯಾಪಿಂಗ್ ಕಾರ್ಯ ಸಹ ಪ್ರಾರಂಭಿಸಲಾಗಿತ್ತು.

ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರತಿ ವಲಯದಿಂದ ಒಂದು ನಿರ್ದಿಷ್ಟ ವಾರ್ಡ್ ಆಯ್ಕೆ ಮಾಡಿಕೊಂಡು ಅಲ್ಲಿ ರೇಬಿಸ್ ಚುಚ್ಚುಮದ್ದು ನೀಡುವುದು ಮತ್ತು ನಾಯಿಗಳಿಗೆ ಚುಚ್ಚು ಮದ್ದು ನೀಡುವ ವಿವರವನ್ನು ಆ್ಯಪ್‍ನಲ್ಲಿ ದಾಖಲಿಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಮಾಹಿತಿಯನ್ನು ದಾಖಲಿಸಿಕೊಳ್ಳುವುದರ ಜೊತೆಗೆ ಆ್ಯಪ್ ಬಳಸಿ ಮ್ಯಾಪಿಂಗ್ ಸಹ ಮಾಡಲಾಗುತ್ತಿದೆ.

ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ:
ನಗರದಲ್ಲಿ ಕೊರೊನಾ ಸೋಂಕಿನಿಂದ ಕ್ಷೀಣಿಸಿದ್ದ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಈ ವರ್ಷ ಏಪ್ರಿಲ್‍ನಿಂದ ನವೆಂಬರ್ ಅಂತ್ಯದ ವರೆಗೆ 21,962 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

20,863 ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಗಿದೆ. ನಾಯಿಗಳಿಗೆ ಎಬಿಸಿ ಮತ್ತು ರೇಬಿಸ್ ಚುಚ್ಚುಮದ್ದು ನೀಡುವುದಕ್ಕೆ ಪಾಲಿಕೆ ಒಟ್ಟು 2,93,50,340 ರೂ. ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments