ಡೇನಿಲ್ ಮೆಡ್ವೆಡೆವ್ ಎಟಿಪಿ ಚಾಂಪಿಯನ್

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ನ.23- ಟೆನ್ನಿಸ್ ಲೋಕದ ಟಾಪ್ 2 ಆಟಗಾರ ರಾಫೆಲ್ ನಡಾಲ್‍ರನ್ನು ಸೆಮಿಫೈನಲ್‍ನಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದ ರಷ್ಯಾದ ಡೇನಿಲ್ ಮೆಡ್ವೆಡೆವ್ ಅವರು ನೂತನ ಎಟಿಪಿ ಚಾಂಪಿಯನ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಫೈನಲ್‍ನಲ್ಲಿ ಡೇನಿಲ್ ಅವರು ಯುಎಸ್ ಓಪನ್ ಚಾಂಪಿಯನ್ ಹಾಗೂ ಟಾಪ್ 3 ಆಟಗಾರ ಡೊಮಿನಿಕ್ ಥೀಮ್ ಅವರ ಸವಾಲನ್ನು ಎದುರಿಸಿದ್ದರಿಂದ ಆಟವು ರೋಚಕತೆಯಿಂದ ಕೂಡಿತ್ತು.

ಫೈನಲ್ಸ್‍ನಲ್ಲಿ ವಿಶ್ವ ಶ್ರೇಯಾಂಕಿತ ಟಾಪ್ 3 ಹಾಗೂ ಟಾಪ್ 4 ಆಟಗಾರರು ಸ್ರ್ಪಸಿದ್ದರಿಂದ ಫೈನಲ್ಸ್ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಡೇನಿಲ್ ಹಾಗೂ ಥೀಮ್ ಆರಂಭಿಕ ಸೆಟ್‍ನಿಂದ ರೋಚಕತೆಯನ್ನು ಮೂಡಿಸಿಕೊಂಡು ಬಂದರು.

ಪ್ರಥಮ ಸೆಟ್‍ನಲ್ಲಿ ಡೊಮಿನಿಕ್ ವಿರುದ್ಧ 4-6ರ ಅಂತರದಿಂದ ಸೋಲು ಕಂಡರೂ ಛಲ ಬಿಡದೆ ಹೋರಾಡಿದ ಡೇನಿಲ್ ದ್ವಿತೀಯ ಸೆಟ್‍ನಲ್ಲಿ ಕಠಿಣ ಸವಾಲನ್ನು ಎದುರಿಸಿದರಾದರೂ ಅಂತಿಮವಾಗಿ 7-6 ಹಾಗೂ ಅಂತಿಮ ಸೆಟ್‍ನಲ್ಲಿ 6-4 ರಿಂದ ಗೆಲ್ಲುವ ಮೂಲಕ ನೂತನ ಎಟಿಪಿ ಚಾಂಪಿಯನ್ಸ್ ಮುಕುಟವನ್ನು ಗೆದ್ದು ಬೀಗಿದರು.

ಎಟಿಪಿ ಚಾಂಪಿಯನ್ಸ್ ಕ್ರೀಡಾಕೂಟವೆಂದರೆ ಅಲ್ಲಿ ಹೆಚ್ಚಾಗಿ ಎಟಿಪಿ ವಿಶ್ವ ನಂ.1 ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೋಕೋವಿಚ್ ಹಾಗೂ ನಂ.2 ಆಟಗಾರ ಸ್ಪೇನ್‍ನ ನಡಾಲ್‍ರ ವೈಭವವೇ ಹೆಚ್ಚಾಗಿರುತ್ತಿದ್ದು ಈ ಬಾರಿಯೂ ಇಬ್ಬರಲ್ಲಿ ಒಬ್ಬರು ಚಾಂಪಿಯನ್ಸ್ ಆಗುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ ಸೆಮಿಫೈನಲ್‍ನಲ್ಲಿ ಜೋಕೋವಿಚ್, ಥೀಮ್ ವಿರುದ್ಧ 5-7,7-6,6-7 ಸೆಟ್‍ಗಳಿಂದ ಸೋಲುಕಂಡರೆ ನಡಾಲ್, ಡೇನಿಲ್ ಮೆಡ್ವೆಡೆವ್ ವಿರುದ್ಧ 6-3,6-7, 3-6 ಸೆಟ್‍ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು.

Facebook Comments