ಡೋರ್ ಲಾಕ್ ಒಡೆದು ಮನೆಗಳ್ಳತನ : ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.1- ಮನೆ ಮಾಲೀಕರು ಹೊರಗೆ ಹೋಗುವುದನ್ನೇ ಕಾದು  ಡೋರ್‍ ಲಾಕ್ ಒಡೆದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿ 6.35 ಲಕ್ಷ ರೂ. ಬೆಲೆಯ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ನೈಸ್ ರಸ್ತೆ ಸಮೀಪದ ಶ್ರೀನಿವಾಸ ಕಾಲೋನಿ, ಜೋಪಡಿಯ ನಿವಾಸಿ ಮಣಿಕಂಠ ಅಲಿಯಾಸ್ ಮಣಿ (35) ಬಂಧಿತ ಆರೋಪಿ.

ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದ ಮಾಲೀಕರನ್ನು ಗಮನಿಸಿ, ನಂತರ ಸಂಚು ರೂಪಿಸಿ ಕಬ್ಬಿಣದ ರಾಡ್‍ನಿಂದ ಮನೆ ಬಾಗಿಲಿಗೆ ಹಾಕಿದ್ದ ಬೀಗ, ಡೋರ್‍ಲಾಕ್ ಒಡೆದು ಕಳ್ಳತನ ಮಾಡುತ್ತಿದ್ದನು. ಈತನ ಬಂಧನದಿಂದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ನಾಲ್ಕು ರಾತ್ರಿ ಕನ್ನಗಳವು ಪ್ರಕರಣಗಳು, ತಲಘಟ್ಟಪುರ ಠಾಣೆ, ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿ ಆರು ಪ್ರಕರಣಗಳು ಪತ್ತೆಯಾದಂತಾಗಿದೆ.

ಆರೋಪಿಯಿಂದ 6.35 ಲಕ್ಷ ಬೆಲೆಯ 131.500 ಗ್ರಾಂ ಚಿನ್ನಾಭರಣ ಮತ್ತು ಹೋಂಡಾ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ನರಸಿಂಹಮೂರ್ತಿ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments