ಗಾಂಧೀಜಿ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಮಾತನಾಡುವುದು ಖಂಡನೀಯ : ದೊರೆಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 20-ಗಾಂಧೀಜಿಯವರು ಸಾಮಾನ್ಯ ಸೇವೆಯಿಂದ ಮಹಾತ್ಮ್ಮ ಎಂದು ಕರೆಸಿಕೊಂಡವರು. ಅವರ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಮಾತನಾಡುತ್ತಿರುವುದು ಖಂಡನೀಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ತಿಳಿಸಿದರು.

ನಗರದಲ್ಲಿಂದು ಕುಮಾರಕೃಪಾದ ಗಾಂಧಿ ಭವನ ಆವರಣದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ, ಸಬ ಕೋ ಸನ್ಮತಿ ದೇ ಭಗವಾನ್ ಎಂಬ ಮೌನ ಸತ್ಯಾಗ್ರಹದ ನೇತೃತ್ವವಹಿಸಿ ಮಾತನಾಡಿದ ಅವರು, ಗಾಂಧಿಯವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಅವರಿಗೆ ಅಪಮಾನ ಮಾಡಲಾಗುತ್ತಿದೆ.

ನಾತೂರಾಮ್ ಗೋಡ್ಸೆ ದೇಶ ಭಕ್ತ ನೆಂದು ಹೇಳುತ್ತಿದ್ದಾರೆ ಅವರು ಗಾಂಧಿಯನ್ನ ಹತ್ಯೆ ಮಾಡಿದ್ದಾರೆ ಹೊರತು ಅವರ ವಿಚಾರವನ್ನಲ್ಲ. ಗಾಂಧಿಯವರ ಸತ್ಯ, ಆದರ್ಶಗಳು ಎಂದಿಗೂ ಜೀವಂತ ಎಂದು ಹೇಳಿದರು.

ಗೋಡ್ಸೆ ಪುಸ್ತಕ ಬಂದಿದೆ. ಅದರಲ್ಲಿ ಆತ, ಗಾಂಧಿ ಅವರು ಮಹಮ್ಮದೀಯರ ಪರವಾಗಿ ಇರುವುದರಿಂದ ಕೊಲೆ ಮಾಡಿದೆ ಎನ್ನುತ್ತಾರೆ ಎಂದು ಹೇಳಲಾಗಿದೆ. ಆದರೆ, ಇದರಲ್ಲಿ ಸತ್ಯ ಇಲ್ಲ ಎಂದ ಅವರು, ಯಾರು ಸಹ ಇತಿಹಾಸವನ್ನು ಬದಲಾಯಿಸುವುದು ಸರಿಯಲ್ಲ ಎಂದರು.

ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್, ಜೈಲಿನಿಂದ ಬಿಡುಗಡೆಯಾಗಲು ಬ್ರಿಟಿಷರ ಮುಂದೆ ಅಂಗಲಾಚಿದ್ದ.ಅಷ್ಟೇ ಅಲ್ಲದೆ, ತನ್ನನ್ನು ಬಿಡುಗಡೆಗೊಳಿಸಿದರೆ ಹಾಗೂ ಕ್ಷಮಿಸುವುದಾದರೆ ಕ್ಷಮೆ ಕೋರುವುದಾಗಿ ಬ್ರಿಟಿಷ್ ವಸಾಹತು ಆಡಳಿತಗಾರರಿಗೆ ಸಾವರ್ಕರ್ ಪತ್ರ ಬರೆದಿದ್ದ. ಹೀಗಾಗಿ, ಆತ ಹೇಡಿ.ಆದರೆ, ಭಗತ್ ಸಿಂಗ್ ಅವರನ್ನು ನೇಣಿಗೆ ಹಾಕಿದರೂ ಎಂದೂ ಬ್ರಿಟಿಷರಿಗೆ ತಲೆಬಾಗಿಲ್ಲ ಎಂದು ದೊರೆಸ್ವಾಮಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಇತಿಹಾಸದ ಬಗ್ಗೆ ಪೂರ್ಣವಾಗಿ ಓದಿಕೊಂಡಿಲ್ಲ.ಜತೆಗೆ, ಅವರು ಜ್ಞಾನವೂ ಇಲ್ಲ. ಹೀಗಾಗಿ, ಅವರು, ಗಾಂಧಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಾರೆ ಎಂದರು.

ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ಗಾಂಧಿಯವರದ್ದು ಗ್ರಾಮಾಭಿವೃದ್ಧಿ ರಾಮ ರಾಜ್ಯ ಕಲ್ಪನೆಯಾದರೆ, ಗೋಡ್ಸೆಯದ್ದು, ಪುರೋಹಿತಶಾಹಿ, ಬ್ರಾಹ್ಮಣನೀಯ ರಾಮ ರಾಜ್ಯ ಕಲ್ಪನೆಯಾಗಿತ್ತು. ಹೀಗಾಗಿ, ನಾವು ಯಾವ ಕಲ್ಪನೆ ಇಂದು ನಮ್ಮ ದೇಶಕ್ಕೆ ಅವಶ್ಯಕ ಎಂಬುದನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕೇ ಹೊರತು ಗಾಂಧಿ ಮೂರ್ತಿ ಧ್ವಂಸ, ಅವಹೇಳನಕಾರಿ ಮಾತು, ವಿರೋಧಿ ನಡೆಯಿಂದಲ್ಲ ಎಂದು ನುಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಮಾತನಾಡಿ, ಭಾರತ ಎಂದರೆ ಗಾಂಧಿ ಎನ್ನುವ ಕೂಗು ದಟ್ಟವಾಗಿದೆ.ಹೀಗಾಗಿ, ಯುವ ಸಮುದಾಯ ಮೊದಲು ಗಾಂಧಿ ಕುರಿತು, ಓದಿಕೊಳ್ಳಬೇಕು. ಆಗ ಮಾತ್ರ ಅವರ ಬಗ್ಗೆ ಗೌರವ ಬರುತ್ತದೆ ಎಂದು ಹೇಳಿದರು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಸಾಹಿತಿ ಡಾ.ಬೈರಮಂಗಲರಾಮೇಗೌಡ, ಗಾಂಧಿ ಭವನ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಜಲ ತಜ್ಞ ರಾಜೇಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ