ಡಬಲ್ ಎಂಜಿನ್ ಸರ್ಕಾರಕ್ಕೆ ಡಿಕೆಶಿ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಜ.18- ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬ್ಬಲ್ ಎಂಜಿನ್ ಸರ್ಕಾರ ಮಹದಾಯಿ ಯೋಜನೆಯನ್ನು ಜಾರಿಗೊಳಿಸಲಿ. ಕೃಷ್ಣಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. ಕಲಬುರಗಿ ವಿಭಾಗೀಯ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿನ್ನೆ ಬೆಳಗಾವಿಯ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಡಬ್ಬಲ್ ಎಂಜಿನ್ ಸರ್ಕಾರ ಇದೆ. ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ಡಬ್ಬಲ್ ಎಂಜಿನ್ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲಿ ಎಂದು ಸವಾಲು ಹಾಕಿದರು. ಮಹದಾಯಿ ವಿಚಾರ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದೆ. ನ್ಯಾಯಾದೀಕರಣದ ಅಂತಿಮ ತೀರ್ಪನ್ನು ಅನುಷ್ಠಾನಗೊಳಿಸುವ ಮೂಲಕ ತನ್ನ ಬದ್ಧತೆಯನ್ನು ಸಾಬೀತುಪಡಿಸಲಿ. ನಂಜುಂಡಪ್ಪ ವರದಿ ಅನುಸಾರ ಅತಿ ಹೆಚ್ಚು ಹಿಂದುಳಿದ ಪ್ರದೇಶಗಳನ್ನು ಹೊಂದಿರುವ ಕಲ್ಯಾಣ ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಭಾರೀ ತಾರತಮ್ಯವಾಗಿದೆ.

ಈ ಭಾಗದಲ್ಲಿ ಕಾಂಗ್ರೆಸ್‍ನಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕಾಗಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಮೊದಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪ್ರಕಟಿಸುವ ಮೂಲಕ ಡಬ್ಬಲ್ ಎಂಜಿನ್ ಸರ್ಕಾರ ರಾಜ್ಯದ ಜನರಿಗೆ ಅನುಕೂಕ ಮಾಡಿಕೊಡಲಿ. ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‍ಠಾಕ್ರೆ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಮಹಾಜನ್ ವರದಿಯೇ ಅಂತಿಮ. ಇದು ಕಾಂಗ್ರೆಸ್‍ನ ನಿಲುವು ಉದ್ದವ್ ಠಾಕ್ರೆ ಅವರು ರಾಜಕಾರಣಕ್ಕಾಗಿ ಮಾತನಾಡಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚಿಸಿರಬಹುದು. ಆದರೆ, ಉದ್ದವ್ ಠಾಕ್ರೆ ಅವರ ಚಿಂತನೆಯೇ ಬೇರೆ. ರಾಜ್ಯದ ನೆಲ, ಜಲ ವಿಷಯ ಬಂದಾಗ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ನಮ್ಮ ರಾಜ್ಯ ಸರ್ಕಾರ ಕೂಡ ಇದಕ್ಕೆ ಬದ್ಧವಾಗಿರಬೇಕೆಂದು ಹೇಳಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆ ಕಾರಣಕ್ಕಾಗಿಯೇ ನಾವು ಸುವರ್ಣ ಸೌಧ ನಿರ್ಮಿಸಿದ್ದೇವೆ. ಪ್ರಾದೇಶಿಕ ಭಾವನೆಗಳು ಬಂದಾಗ ರಾಜಕಾರಣ ಮಾಡಬಾರದು ಎಂದರು.
ಇದೇ ಸಂದರ್ಭದಲ್ಲಿ ಕಲಬುರಗಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂಘಟನೆಯವರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಗಳನ್ನು ಜ.27ರಿಂದ ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ನೀವು ಈ ಸರ್ಕಾರವನ್ನು ಕಿತ್ತೊಗೆಯಲು ಹೋರಾಟ ಮಾಡಬೇಕೆಂದು ಮನವಿ ಮಾಡಿದರು.

Facebook Comments