ಡಬಲ್ ಇಂಜಿನ್ ಸರ್ಕಾರ ನಿಂತು ಹೋಗಿದೆ, ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ: ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ಕೋವಿಡ್ ಲಸಿಕಾ ಅಭಿಯಾನದ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕು. ರಾಜ್ಯ ಸರ್ಕಾರ ತನ್ನಲ್ಲಿರುವ ಹಣವನ್ನು ಲಾಕ್ ಡೌನ್ ನಿಂದ ನಷ್ಟು, ಸಂಕಷ್ಟ ಅನುಭವಿಸಿದವರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಖರ್ಚು ವೆಚ್ಚಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಕೇಂದ್ರ ಸರ್ಕಾರ ತನ್ನ ಹಣದಲ್ಲೇ ದೇಶಾದ್ಯಂತ ಪೋಲೀಯೋ ಅಭಿಯಾನವನ್ನು ನಡೆಸಿದೆ. ಈಗಿನ ಸರ್ಕಾರವೂ ಅದೇ ಮಾದರಿಯಲ್ಲಿ ಕೋವಿಡ್ ಲಸಿಕಾ ಅಭಿಯಾನವನ್ನು ನಡೆಸಬೇಕು. ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಖರ್ಚಿನಲ್ಲೇ ಲಸಿಕೆ ಹಾಕಿಸುತ್ತಿವೆ. ಮೋದಿ ಅವರ ಸರ್ಕಾರ ಮಾತ್ರ 45 ವರ್ಷಕ್ಕಿಂತ ಕೆಳಗಿನವರಿಗೆ ರಾಜ್ಯ ಸರ್ಕಾರಗಳೇ ಲಸಿಕೆ ಖರೀದಿಸಿಕೊಡಬೇಕು ಎಂದು ಹೇಳಿ ಜವಾಬ್ದಾರಿಯಿಂದ ನುಣಚಿಕೊಂಡಿದೆ ಎಂದು ಕಿಡಿಕಾರಿದರು.

ಮೊದಲನೇ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಪೂರೈಕೆ ಮಾಡಲಾಗದ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಎಷ್ಟು ಲಸಿಕೆ ಪೂರೈಕೆಯಾಗುತ್ತಿದೆ ಎಂದು ಗೋತ್ತಿತ್ತು. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ಬೋರಿಂಗ್ ಆಸ್ಪತ್ರೆಯಲ್ಲಿ ಒಂದು ಹುಡುಗಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಲಸಿಕೆ ಹಾಕಿದಿ ಉದ್ಘಾಟಿಸಿದರು. ರಾಜ್ಯದಿಂದ ಗೆದ್ದಿರುವ ಬಿಜೆಪಿಯ 25 ಸಂಸದರಿಗೆ ಕೇಂದ್ರ ಸರ್ಕಾರದ ಬಳಿ ಹೋಗಿ ಮಾತನಾಡಲು ತಾಕತ್ತಿಲ್ಲ. ಯಾರು ಬಾಯಿ ಬಿಚ್ಚುತ್ತಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರ ಸಂಸದನೊಬ್ಬ ಮಾತನಾಡಲು ಹೋಗಿ ಅಪಘಾತ ಮಾಡಿಕೊಂಡಿದ್ದಾನೆ ಎಂದು ಲೇವಡಿ ಮಾಡಿದರು.

ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಭಾರೀ ಅನುಕೂಲವಾಗಲಿದೆ ಎಂದು ಪ್ರಚಾರ ಮಾಡಿದರು. ಇಲ್ಲಿ ಡಬಲ್ ಇಂಜಿನ್ ಸರ್ಕಾರ ನಿಂತು ಹೋಗಿದೆ, ಸಿಂಗಲ್ ಇಂಜಿನ್ ಸರ್ಕಾರವಾಗಿ. ಆಮ್ಲಜನಕದ ವಿಷಯದಲ್ಲಿ ಹೈಕೋರ್ಟ್ ಆದೇಶ ನೀಡಿದ್ದರಿಂದ ಸಾಕಷ್ಟು ಪೂರೈಕೆಯಾಗಿದೆ. ಅದನ್ನು ಪ್ರಧಾನಿ ಮೋದಿ ಅವರೇ ಪೂರೈಕೆ ಮಾಡುತ್ತಿದ್ದಾರೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಲಸಿಕೆ ವಿಷಯದಲ್ಲೂ ಅನ್ಯಾಯವಾಗಿದೆ. ಇವರಿಗೆ ಯಾವುದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು.

ಲಸಿಕೆಗೆ ಕೇಂದ್ರ ಸರ್ಕಾರವೇ ಹಣ ಖರ್ಚು ಮಾಡಬೇಕು. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಲಾಕ್ ಡೌನ್ ನಿಂದ ನಷ್ಟ ಅನುಭವಿಸಿದ ಹಣ್ಣು ತರಕಾರಿ, ಹೂ ಬೆಳೆಗಾರರ ನಷ್ಟ ಅನುಭವಿಸಿದವರಿಗೆ ಕೊಡಬೇಕು. ವೃತ್ತಿ ಆಧರಿತ ಜನರಿಗೆ ತಲಾ 10 ಸಾವಿರ ನೀಡಿ ಸಂಕಷ್ಟ ಸಮಯದಲ್ಲಿ ನೆರವಾಗಬೇಕು ಎಂದು ಒತ್ತಾಯಿಸಿದರು.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಎರಡು ಲಕ್ಷ ಬೆಡ್ ಹಾಕುತ್ತೇವೆ ಎಂದಿದ್ದರು. ಈಗ 25 ಸಾವಿರ ಮಾತ್ರ ಮಾಡುತ್ತಿದ್ದಾರೆ. ಔಷಧಿ ಹಾಗೂ ಇತರ ಸಲಕರಣೆಗಳ ಖರೀದಿಗೆ ಜಾಗತಿಕ ಟೆಂಡರ್ ಕರೆಯುವುದಾಗಿ ಹೇಳುತ್ತಿದ್ದಾರೆ. ಟೆಂಡರ್ ನೀಡಲು ಯಾರ ಜೊತೆ ಇವರು ಮಾತುಕತೆ ನಡೆಸುತ್ತಿದ್ದಾರೆ ಎಂದು ನಾವು ಕಾದು ನೋಡುತ್ತಿದ್ದೇವೆ ಎಂದರು.

ಲಾಕ್ ಡೌನ್ ಘೋಷಿಸಿರುವ ರಾಜ್ಯ ಸರ್ಕಾರ ಜನರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಬೇಕು. ಬ್ಯಾಂಕರ್ ಗಳ ಸಭೆ ಕರೆದು ಬಡ್ಡಿ ಮನ್ನಾ ಮಾಡಬೇಕು. ಆಸ್ಪತ್ರೆಗಳಲ್ಲಿನ ಚಿಕಿತ್ಸಾ ಬಿಲ್ ಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿಯ ಕೊಲೆಗೆ ಸರ್ಕಾರವೇ ನೇರ ಹೊಣೆ ಎಂದು ಹೈಕೋರ್ಟ್ ನೇಮಿಸಿದ ನ್ಯಾಯಾದೀಶರ ಪ್ಯಾನಲ್ ವರದಿ ನೀಡಿದೆ. ನಮ್ಮ ಬಳಿ ಕೂಡ ಕೆಲ ದಾಖಲೆಗಳಿದ್ದವು, ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿದ್ದರಿಂದ ನಾವು ಸುಮ್ಮನಾದೇವು. 24 ಮಂದಿ ಸತ್ತಿದ್ದು ನಿಜ ಎಂದು ವರದಿಯಾಗಿದೆ. ಅದರ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು ಎಂದರು.

ರಸಗೊಬ್ಬರದ ಬೆಲೆಯೂ ಹೆಚ್ಚಾಗಿದೆ. ರೈತರನಂತೂ ದೇವರೇ ಕಾಪಾಡಬೇಕು ಎಂದು ಹೇಳಿದರು.

Facebook Comments