ಒಂದೇ ದಿನ 2 ಕಡೆ ಡಬಲ್ ಮರ್ಡರ್..! ಬೆಚ್ಚಿಬಿದ್ದ ಅತ್ತಿಬೆಲೆ ಮತ್ತು ಮೈಸೂರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ಮೈಸೂರು ಹಾಗೂ ಅತ್ತಿಬೆಲೆಯಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.  ಅಕ್ರಮ ಸಂಬಂಧದಿಂದ ಬೇಸತ್ತ ಮಗನೇ ತಂದೆ ಹಾಗೂ ಆತನ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

# ಇಬ್ಬರು ಸ್ನೇಹಿತರ ಕೊಲೆ:

ದುಷ್ಕರ್ಮಿಗಳು ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಕೊಲೆಯಾದ ಯುವಕರನ್ನು ಮಾಯಸಂದ್ರ ಗ್ರಾಮದ ದೀಪಕ್ (45) ಮತ್ತು ಅತ್ತಿಬೆಲೆಯ ಭಾಸ್ಕರ್ (35) ಎಂದು ಗುರುತಿಸಲಾಗಿದೆ.

ಭಾಸ್ಕರ್ ತರಕಾರಿ ವ್ಯಾಪಾರಿ ಮಾಡಿಕೊಂಡು, ದೀಪಕ್ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ಸಂಜೆ ಇವರಿಬ್ಬರು ಸ್ನೇಹಿತರನ್ನು ಮಾತನಾಡಿಸಿಕೊಂಡು ಬರುತ್ತೇವೆಂದು ಹೇಳಿ ತಮಿಳುನಾಡಿಗೆ ಹೋಗಿದ್ದರು. ಈ ನಡುವೆ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕಿನ ಬಳ್ಳೂರು-ಟಿವಿಎಸ್ ರಸ್ತೆ ಮಧ್ಯದ ಅರೆಹಳ್ಳಿ ಗ್ರಾಮದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ಈ ಇಬ್ಬರು ಯುವಕರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಅತ್ತಿಬೆಲೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಇಬ್ಬರು ಯುವಕರನ್ನು ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ನಿಗೂಢವಾಗಿದೆ. ಹಣಕಾಸು ವಿಚಾರವಾಗಿ ಗಡಿ ಭಾಗದ ತಮಿಳುನಾಡಿನವರು ಬಂದು ಇವರಿಬ್ಬರೊಂದಿಗೆ ಜಗಳವಾಡಿ ಕೊಲೆ ಮಾಡಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಹಂತಕರಿಗಾಗಿ ಶೋಧ ಕೈಗೊಂಡಿದ್ದಾರೆ.

# ಮೈಸೂರು ಘಟನೆ:

ಅಪ್ಪನ ಅನೈತಿಕ ಸಂಬಂಧದಿಂದ ಬೇಸತ್ತ ಮಗನೇ ತಂದೆ ಹಾಗೂ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಜಿ ಕೊಪ್ಪಲು ನಿವಾಸಿ ಶಿವಪ್ರಸಾದ್ (56) ಮತ್ತು ಶ್ರೀನಗರದ ನಿವಾಸಿ ಲತಾ (48) ಕೊಲೆಯಾದವರು.

ಶಿವಪ್ರಸಾದ್ ಹಾಗೂ ಲತಾ ಅವರ ಪತಿ ನಾಗರಾಜು ಸ್ನೇಹಿತರು. ಇವರಿಬ್ಬರು ಹಲವು ವರ್ಷಗಳಿಂದ ಒಟ್ಟಿಗೆ ಪಾಟ್ನರ್‍ಶಿಪ್‍ನಲ್ಲಿ ಬ್ಯುಜಿನೆಸ್ ನಡೆಸುತ್ತಿದ್ದರು. 2016ರಲ್ಲಿ ನಾಗರಾಜು ಸಾವನ್ನಪ್ಪಿದ್ದರು. ತದನಂತರ ಬ್ಯುಜಿನೆಸ್ ಮುಂದುವರೆಸಿಕೊಂಡು ತಮ್ಮ ಕುಟುಂಬಕ್ಕೂ ನೆರವಾಗುವಂತೆ ಲತಾ ಅವರು ಶಿವಪ್ರಸಾದ್ ಅವರಿಗೆ ಹೇಳಿದ್ದರು.

ಅಂದಿನಿಂದ ಬ್ಯುಜಿನೆಸ್ ವಿಷಯವಾಗಿ ಮಾತನಾಡಲು ಲತಾ ಅವರ ಮನೆಗೆ ಶಿವಪ್ರಸಾದ್ ಆಗಾಗ್ಗೆ ಹೋಗುತ್ತಿದ್ದರು. ಪದೇ ಪದೇ ಲತಾ ಅವರ ಮನೆಗೆ ಹೋಗುತ್ತಿದ್ದ ವಿಷಯ ತಿಳಿದ ಮಗ ಸಾಗರ್ ತಂದೆ ಜತೆ ಜಗಳವಾಡಿದ್ದಾನೆ. ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಶಿವಪ್ರಸಾದ್ ನಿನ್ನೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಲತಾ ಮನೆಯಲ್ಲೇ ಇರಬಹುದು ಎಂದು ಮಗ ಸಾಗರ್ ಹುಡುಕಿಕೊಂಡು ಶ್ರೀನಗರದ ಲತಾ ಅವರ ಮನೆಗೆ ಹೋಗಿದ್ದಾನೆ. ಲತಾ ಮನೆಯಲ್ಲಿ ತಂದೆ ಶಿವಪ್ರಸಾದ್ ಇರುವುದನ್ನು ಕಂಡು ಕೋಪಗೊಂಡ ಸಾಗರ್ ಜಗಳವಾಡಿದ್ದಾನೆ. ಆ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಕೋಪದಲ್ಲಿ ಮಚ್ಚಿನಿಂದ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.

ನಂತರ ಲತಾ ಮೇಲೆ ಮಚ್ಚಿನಿಂದ ಹೊಡೆಯಲು ಮುಂದಾದಾಗ ಅವರ ಮಗ ನಾಗಾರ್ಜುನ್ ತಡೆಯಲು ಮಧ್ಯ ಬಂದಾಗ ಆತನ ಮೇಲೆ ಹಲ್ಲೆ ನಡೆಸಿ ಲತಾರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ದಕ್ಷಿಣ ಠಾಣೆ ಪೊಲೀಸರು, ಎಸ್‍ಪಿ ಚೇತನ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಾಗರ್ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments