50 ಸ್ಫೋಟಗಳ ಕುಖ್ಯಾತ ಡಾ.ಬಾಂಬ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ/ಮುಂಬೈ, ಜ.18-ಪರೋಲ್(ಜೈಲಿನಿಂದ ರಜೆ) ಪಡೆದ ನಂತರ ಮುಂಬೈನಿಂದ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಹಲವು ಸ್ಫೋಟಗಳ ರೂವಾರಿ ಡಾ.ಅಲೀಸ್ ಅನ್ಸಾರಿ ಅಲಿಯಾಸ್ ಡಾ. ಬಾಂಬ್‍ನನ್ನು ಆತ ನಾಪತ್ತೆಯಾದ 48 ಗಂಟೆಗಳಲ್ಲಿ ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ.  ದೇಶದ ವಿವಿಧೆಡೆ ಐವತ್ತಕ್ಕೂ ಹೆಚ್ಚು ಸ್ಫೋಟಗಳನ್ನು ನಡೆಸಿ ಹಲವರ ಸಾವಿಗೆ ಕಾರಣನಾಗಿದ್ದ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಡಾ.ಬಾಂಬ್(69) ಪರೋಲ್(ಜೈಲಿನಿಂದ ರಜೆ) ಪಡೆದ ನಂತರ ಪರಾರಿಯಾಗಿದ್ದ.

ಅಪಾಯಕಾರಿಯಾಗಿದ್ದ ಡಾ. ಬಾಂಬ್ ನಾಪತ್ತೆಯಾಗಿರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಈತ ಪತ್ತೆ ಮತ್ತು ಸೆರೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹದಳ (ಎಟಿಎಸ್), ಕ್ರೈಂ ಬ್ರಾಂಚ್ ಮತ್ತು ಮುಂಬೈ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು.  ಉತ್ತರಪ್ರದೇಶದ ಕಾನ್ಪುರದಲ್ಲಿ ಡಾ.ಬಾಂಬ್‍ನನ್ನು ಬಂಧಿಸಲಾಗಿದೆ.

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ರೈಲು ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮತ್ತೊಂದು ಸ್ಥಳಕ್ಕೆ ಪರಾರಿಯಾಗಲು ಈತ ಯತ್ನಿಸುತ್ತಿದ್ದಾಗ ಉತ್ತರಪ್ರದೇಶ ವಿಶೇಷ ತಂಡದ ಪೊಲೀಸರು ಬಂಧಿಸಿದರು. ಜೈಲಿನಿಂದ 21 ದಿನಗಳ ಪರೋಲ್ ಮೇಲೆ ಬಂದಿದ್ದ ಡಾ. ಬಾಂಬ್, ಮರುದಿನ ಬೆಳಗ್ಗೆಯಿಂದಲೇ ನಾಪತ್ತೆಯಾಗಿದ್ದ. ಮಧ್ಯ ಮುಂಬೈನ ಮೊಮಿನ್‍ಪುರದತನ್ನ ಮನೆಯಿಂದ ಮುಂಜಾನೆ ಡಾ.ಅನ್ಸಾರಿ ಹೊರಹೋಗಿದ್ದು, ಹಿಂದಿರುಗಿಲ್ಲಎಂದು ಆತನ ಕುಟುಂಬದವರು ತಿಳಿಸಿದ್ದರು.

ಎಂಬಿಬಿಎಸ್ ವೈದ್ಯನಾದ ಈತ 1993ರಲ್ಲಿ ರಾಜಸ್ತಾನದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ 1994ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಜ್ಮೀರ್ ಜೈಲಿನಲ್ಲಿ ಸಜೆ ಅನುಭವಿಸುತ್ತಿದ್ದ.  ದೇಶದ ವಿವಿಧೆಡೆ ನಡೆದ 50ಕ್ಕೂ ಹೆಚ್ಚು ಸ್ಫೋಟಗಳಲ್ಲಿ ಈತನ ಕೈವಾಡವಿದೆ. ಬಾಂಬ್‍ಗಳ ತಯಾರಿಕೆ ಮತ್ತು ಅವುಗಳನ್ನು ಸ್ಫೋಟಿಸುವಲ್ಲಿ ಪರಿಣಿತಿ ಪಡೆದಿರುವ ಈ ಕುಖ್ಯಾತ ಅಪರಾಧಿ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿತ್ತು.

Facebook Comments