ಹುಷಾರಾಗಿರಿ, ಲಸಿಕೆ ಪಡೆದರೂ ತಪ್ಪಲ್ಲ ಕೊರೋನಾ ಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.2- ಕೋವಿಡ್ ಲಸಿಕೆ ಪಡೆದವರಿಗೂ ಸೋಂಕು ಹರಡುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಲಸಿಕೆ ಪಡೆದವರಿಗೆ ಸೋಂಕು ಬಂದರೂ ಅದರ ತೀವ್ರತೆ ಕಡಿಮೆ ಇದ್ದು, ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಲಸಿಕೆ ಪಡೆದಿದ್ದೇವೆ ಎಂದು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಸರ್ಕಾರ ಜಾರಿ ಮಾಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಸರ್ಕಾರ ಕಾಲಕಾಲಕ್ಕೆ ಜಾರಿಮಾಡುವ ಮಾರ್ಗಸೂಚಿ ಮತ್ತು ನಿಯಮಗಳನ್ನು ಪಾಲಿಸಲು ಜನರು ಸಹಕರಿಸಬೇಕು. ಇಲ್ಲದಿದ್ದರೆ ಕೋವಿಡ್ ಮೂರನೆ ಅಲೆ ಬೇಗ ಬರಲು ಆಹ್ವಾನ ಮಾಡಿದಂತೆ ಆಗುತ್ತದೆ ಎಂದು ಅವರು ಹೇಳಿದರು. ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಸರ್ಕಾರದಷ್ಟೇ ಸಾಮಾಜಿಕ ಜವಾಬ್ದರಿ ಪ್ರತಿಯೊಬ್ಬ ಪ್ರಜೆಗೂ ಇರಬೇಕು.

ಕೋವಿಡ್ ಮೂರನೆ ಅಲೆ ಮಕ್ಕಳಿಗೆ ಹರಡುತ್ತದೆ. ದೊಡ್ಡವರಿಗೆ ಬರುವುದಿಲ್ಲ ಎಂಬ ಉದಾಸೀನ ಬೇಡ. ಮಕ್ಕಳಿಗೆ ಲಸಿಕೆ ನೀಡದ ಕಾರಣ ಸೋಂಕು ಹೆಚ್ಚು ಹರಡಬಹುದೆಂಬ ಅಭಿಪ್ರಾಯವಿದೆ. ಈಗಾಗಲೇ ಶೇ.5ರಿಂದ 6ರಷ್ಟು ಮಕ್ಕಳಿಗೆ ಕೋವಿಡ್ ಬಂದು ಹೋಗಿದೆ. ಮುಂಬೈನಲ್ಲಿ ಈ ಬಗ್ಗೆ ಅಧ್ಯಯನವೂ ನಡೆದಿದ್ದು, ಎರಡರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಬಂದಿದೆ.

ಆದರೂ ದೊಡ್ಡವರಷ್ಟು ತೀವ್ರತೆ ಇರುವುದಿಲ್ಲ ಮತ್ತು ಸಾವಿನ ಪ್ರಮಾಣವು ಕಡಿಮೆ ಇರುತ್ತದೆ. ಅಂದ ಮಾತ್ರಕ್ಕೆ ನಿರ್ಲಕ್ಷ್ಯ ಮಾಡದೆ ತಂದೆ-ತಾಯಿ ಹಾಗೂ ಪೋಷಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕೋವಿಡ್ ಎರಡನೇ ಅಲೆಯ ಕೊನೆಯ ಹಂತದಲ್ಲಿದ್ದೇವೆ. ಆದರೂ ನಿತ್ಯ ಮೂರರಿಂದ ನಾಲ್ಕು ಸಾವಿರ ಕೊರೊನಾ ಸೋಂಕಿತರ ಪ್ರಮಾಣ ಕಂಡು ಬರುತ್ತಿದೆ. ಇದು ನಿರ್ಣಾಯಕವಾಗಿ ಕಡಿಮೆಯಾಗಬೇಕು. ಇಂಗ್ಲೆಂಡ್, ಸ್ಪೇನ್, ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಕೋವಿಡ್ ಎರಡನೆ ಅಲೆ ಬಂದ ಮೂರ್ನಾಲ್ಕು ತಿಂಗಳ ಅಂತರದಲ್ಲಿ ಮೂರನೇ ಅಲೆ ಬಂದಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಆಗಬಹುದೆಂಬ ಅಂದಾಜಿದೆ.

ದೆಹಲಿ, ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಮೊದಲು ಕಂಡು ಬರುತ್ತದೆ. ಕೋವಿಡ್ ಮೊದಲ ಮತ್ತು ಎರಡನೆ ಅಲೆಯ ಸೋಂಕುಗಳು ಈ ರಾಜ್ಯಗಳಲ್ಲೇ ಮೊದಲು ಕಂಡು ಬಂದವು. ಈ ರಾಜ್ಯಗಳಲ್ಲಿ ಸೋಂಕು ಶುರುವಾದ ಎರಡು ತಿಂಗಳ ಅಂತರದಲ್ಲಿ ನಮ್ಮ ರಾಜ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಅಕ್ಟೋಬರ್, ನವೆಂಬರ್ ವೇಳೆಗೆ ನಮ್ಮ ರಾಜ್ಯಕ್ಕೆ ಮೂರನೆ ಅಲೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಡಿಸೆಂಬರ್ ಅಂತ್ಯದವರೆಗೂ ಗುಂಪು ಸೇರುವಂತಹ ಊರ ಹಬ್ಬ, ರಥೋತ್ಸವ, ಧಾರ್ಮಿಕ ಸಭೆ ಇತರೆ ಸಭೆ-ಸಮಾರಂಭಗಳನ್ನು ನಿಷೇಧಿಸಬೇಕು. ಮದುವೆಗಳಿಗೂ 40ರಿಂದ 60 ಮಂದಿಗೆ ಮಾತ್ರ ಸೀಮಿತಗೊಳಿಸಬೇಕು. ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು ನಮ್ಮ ದಿನಚರಿಯಾಗಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಮುಂದೆ ನಾಲ್ಕನೆ ಅಲೆ ಬರುತ್ತೋ ಇಲ್ಲವೋ ಗೊತ್ತಿಲ್ಲ ಎಂದರು.

ರುಚಿ ಗೊತ್ತಾಗದೇ ಇರುವುದು, ಶೀತ, ಕೆಮ್ಮು, ಜ್ವರ, ಹೊಟ್ಟೆನೋವು, ಬೇಧಿಯಂತಹ ಲಕ್ಷಣಗಳು ಕಂಡು ಬಂದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಉದಾಸೀನ ಮಾಡುವುದು ಬೇಡ ಎಂದು ಅವರು ಹೇಳಿದರು.

ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಐದರಿಂದ ಆರು ವಿಧವಾದ ಲಸಿಕೆಗಳು ಲಭ್ಯವಾಗಲಿವೆ. ಈಗ ನೀಡುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಸುರಕ್ಷಿತವಾಗಿವೆ.

ಲಸಿಕೆ ಪಡೆದಾಗ ಸಣ್ಣ ಪ್ರಮಾಣದ ಜ್ವರ, ನೋವು ಕಾಣಿಸಿಕೊಳ್ಳುವುದು ಅಡ್ಡಪರಿಣಾಮವಲ್ಲ. ಲಸಿಕೆ ಕಾರ್ಯನಿರ್ವಹಿಸುತ್ತಿರುವುದರ ಪರಿಣಾಮ ಎಂದ ಅವರು, ಇದುವರೆಗೆ ದೇಶದಲ್ಲಿ 25 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅದರಲ್ಲಿ ಕೋವಿಡ್‍ನಿಂದಲೇ ಮೃತಪಟ್ಟಿರುವುದು ಇಬ್ಬರು ಮಾತ್ರ ಎಂದರು.

ಹೀಗಾಗಿ ಲಸಿಕೆ ವಿಚಾರದಲ್ಲಿ ಯಾವುದೇ ರೀತಿಯ ವದಂತಿಗಳಿಗೆ ಕಿವಿಕೊಡದೆ ಸಕಾಲದಲ್ಲಿ ಲಸಿಕೆ ಪಡೆಯುವುದರಿಂದ ಕೋವಿಡ್‍ನಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

Facebook Comments