ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಹೃದ್ರೋಗ ತಜ್ಞ ಡಾ.ಮಂಜುನಾಥ್..!
ಬೆಂಗಳೂರು ನಗರದ ಕೃಷಿ ವಿವಿ ಜಿಕೆವಿಕೆಯಲ್ಲಿ ಆಯೋಜಿಸಿದ್ದ 107 ನೇ ವಿಜ್ಞಾನ ಕಾಂಗ್ರೆಸ್ನಲ್ಲಿ ಜೀವನ ಪದ್ಧತಿ ಮತ್ತು ಖಾಯಿಲೆಗಳು ವಿಷಯವಾಗಿ ಉಪನ್ಯಾಸ ಮಂಡಿಸಿದ ಜಯದೇವ ಮೆಡಿಕಲ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಡಾ.ಮಂಜುನಾಥ್, ಹಲವು ಕುತೂಹಲಕಾರಿ ಮಾಹಿತಿಗಳನ್ನು ಉಪನ್ಯಾಸದುದ್ದಕ್ಕೂ ಹಂಚಿಕೊಂಡರು. ಸಾಮಾಜಿಕ ವ್ಯವಸ್ಥೆ, ತಂತ್ರಜ್ಞಾನದ ಬದಲಾವಣೆ, ಹವಾಮಾನ ಇನ್ನತರೆ ಸಂಗತಿಗಳು ಹೇಗೆ ಮಾನವನ ಆರೋಗ್ಯವನ್ನು ಗಣನೀಯವಾಗಿ ಕ್ಷೀಣಿಸುವಂತೆ ಮಾಡುತ್ತವೆ ಎಂಬುದನ್ನು ತಿಳಿಸಿಕೊಟ್ಟ ಮಂಜುನಾಥ್, ‘ಮೂರು ದಶಕಗಳ ಹಿಂದೆ ನಲವತ್ತು ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು, ಆದರೆ ಈಗ ಪೋಷಕರು ತಮ್ಮ ಯುವಕ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ವ್ಯಥೆ ವ್ಯಕ್ತಪಡಿಸಿದರು.
# ಹೃದ್ರೋಗ ತಜ್ಞ ಡಾ.ಮಂಜುನಾಥ್ ಹೇಳಿದ ಹೃದಯದ ಕತೆ-ವ್ಯಥೆ :
ಭಾರತದ ಬಹುತೇಕರು ಹೇಗೆ ನಮ್ಮ ಜೀವನ ಶೈಲಿಯಿಂದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಅತ್ಯಂತ ಸರಳ ಉದಾಹರಣೆಯೊಂದಿಗೆ ಹೇಳಿದ ಮಂಜುನಾಥ್ ಅವರು, ‘ಒಂದು ಗಂಟೆ ಟಿವಿ ಮುಂದೆ ಕೂತಿರುವುದಕ್ಕೂ ಒಂದು ಸಿಗರೇಟು ಸೇದುವುದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ’ ಎಂದರು.
‘ನಾಲ್ಕು ಗಂಟೆ ಕೂತಲ್ಲಿಯೇ ಕೂತರೆ ಜೀವನದ 20 ನಿಮಿಷ ಆಯುಷ್ಯ ಕಡಿಮೆಯಾದಂತೆ’ ಎಂದ ಮಂಜುನಾಥ್ ಇದೇ ರೀತಿ ಸರಳ ಉದಾಹರಣೆಗಳ ಮೂಲಕ ಜೀವನ ಶೈಲಿ ಹೇಗಿರಬಾರದು ಎಂಬುದನ್ನು ಎಳೆ-ಎಳೆಯಾಗಿ, ಪರಿಣಾಮಕಾರಿಯಾಗಿ ಕೇಳುಗರ ಮುಂದಿಟ್ಟರು.
# ಸ್ಕ್ರೀನ್ ಅಡಿಕ್ಷನ್ ಸಹ ಕಾಯಿಲೆಯೇ :
ಮೊಬೈಲ್, ಟಿವಿ, ಕಂಪ್ಯೂಟರ್ ಗೀಳು ಮಾನವನ ದೇಹದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ ಎಂದು ಸಿಟ್ಟಿನಿಂದಲೇ ಹೇಳಿದ ಮಂಜುನಾಥ್, ಸ್ಕ್ರೀನ್ ಅಡಿಕ್ಷನ್ ಸಹ ಒಂದು ಖಾಯಿಲೆ ಎಂದು ಇತ್ತೀಚೆಗಷ್ಟೆ ಪಾಶ್ಚಿಮಾತ್ಯದ ಕೆಲವು ದೇಶಗಳು ಘೋಷಿಸಿಯಾಗಿದೆ. ಈ ಖಾಯಿಲೆ ನಮ್ಮ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ ಮತ್ತು ವೇಗವಾಗಿ ವ್ಯಾಪಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
# ಮಹಿಳೆಯರಿಗೂ ಹೃದಯಾಘಾತ ಆಗುತ್ತಿದೆ :
ಮುಂಚೆ ಐವತ್ತು ದಾಟಿದವರಲ್ಲಿ ಮಾತ್ರವೇ ಕಾಣುತ್ತಿದ್ದ ಹೃದಯಾಘಾತ ಈಗ ಹದಿನಾರರ ಎಳೆಯರಿಗೂ ಬರುತ್ತಿದೆ. ಹಾರ್ಮೋನ್ಗಳ ಕಾರಣದಿಂದ ಮಹಿಳೆಯರಿಗೆ ಹೃದಯಾಘಾತ ಆಗುತ್ತಲೇ ಇರಲಿಲ್ಲ, ಆದರೆ ಈಗ ಅದೂ ಇಲ್ಲದಾಗಿದೆ, ಮಹಿಳೆಯರೂ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಮುಂಚೆ ನಗರ ಪ್ರದೇಶಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ಸಕ್ಕರೆ ಖಾಯಿಲೆ, ಹೃದಯಾಘಾತದಂತಹಾ ಖಾಯಿಲೆಗಳು ಗ್ರಾಮೀಣ ಭಾಗಕ್ಕೂ ವ್ಯಾಪಿಸಿವೆ ಎಂದು ಆತಂಕ ತುಂಬಿದ ಧ್ವನಿಯಲ್ಲಿ ಹೇಳಿದರು.
# ಹವಾಮಾನವೂ ಸಹ ಆರೋಗ್ಯ ಸಮಸ್ಯೆ ಪ್ರಮುಖ ಕಾರಣ :
ಬದಲಾಗುತ್ತಿರುವ ಹವಾಮಾನದ ಬಗ್ಗೆಯೂ ತೀವ್ರ ಆತಂಕ ವ್ಯಕ್ತಪಡಿಸಿದ ಡಾ.ಮಂಜುನಾಥ್, ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಅತಿದೊಡ್ಡ ಆರೋಗ್ಯ ಸಮಸ್ಯೆಯ ಮೂಲವಾಗಿ ಕಾಡುತ್ತಿದೆ. ವಾಯು ಮಾಲಿನ್ಯವೊಂದರಿಂದಲೇ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
# ‘ಮಧುಮೇಹದ ರಾಜಧಾನಿ ಆಗಿದೆ, ಹೃದಯಾಘಾತದ ರಾಜಧಾನಿ ಆಗಲಿದೆ’
ಭಾರತದ ಅನಾರೋಗ್ಯ ಪ್ರಮಾಣದ ಅಂಕಿ-ಅಂಶವನ್ನು ಇತರೆ ದೇಶಗಳೊಂದಿಗೆ ಹೋಲಿಸಿ ಅಂಕಿ-ಅಂಶ ಸಮೇತ ಮಾಹಿತಿ ನೀಡಿದ ಮಂಜುನಾಥ್, ಭಾರತ ಈಗಾಗಲೇ ಮಧುಮೇಹದ ರಾಜಧಾನಿ ಆಗಿದೆ, ಹೃದಯಾಘಾತದ ರಾಜಧಾನಿ ಆಗುವತ್ತ ಸಾಗಿದೆ ಎಂದರು.
# ‘ಹೆಚ್ಚು ಸಂಬಳದ ಆಸೆಗೆ ಒತ್ತಡ ಮೈಮೇಲೆ ಹಾಕಿಕೊಳ್ಳಬೇಡಿ’
ಒತ್ತಡದ ಜೀವನ ವಿಧಾನದ ಬಗ್ಗೆ ಮಾತನಾಡಿದ ಮಂಜುನಾಥ್ ಅವರು, ‘ಹೆಚ್ಚು ಸಂಬಳದ ಆಸೆಗೆ ಒತ್ತಡ ತುಂಬಿದ ಕೆಲಸ ನಿರ್ವಹಿಸಿ, ಗಳಿಸಿದ ಹಣವನ್ನೆಲ್ಲಾ ಆಸ್ಪತ್ರೆಗೆ ಖರ್ಚು ಮಾಡಿದರೆ ದುಡಿದು ಲಾಭವೇನು? ಬದಲಿಗೆ ಕಡಿಮೆ ಸಂಬಳ ಬಂದರೂ ಒತ್ತಡ ರಹಿತವಾದ ಜೀವನ ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ’ ಎಂದರು.
# ‘ಸಂತಸದಿಂದಿರಿ, ರೋಗಗಳು ಬಳಿಗೆ ಬರುವುದೇ ಇಲ್ಲ’ :
ಆಲಸಿ ಜೀವನ ಪದ್ಧತಿ ಬಿಟ್ಟು, ಸಮತೋಲಿತ ಆಹಾರ ಸೇವನೆ ಮಾಡಿದರೆ ಹಲವು ಖಾಯಿಲೆಗಳಿಂದ ದೂರ ಉಳಿಯಬಹುದು ಎಂಬ ಸರಳ ಸೂತ್ರ ನೀಡಿದ ಅವರು, ‘ನೆರೆ-ಹೊರೆಯವರನ್ನು ಪ್ರೀತಿಸಿ, ಜನರೊಂದಿಗೆ ಸಂತೋಷದಿಂದ ಬೆರೆಯಿರಿ, ಖುಷಿಯಿಂದ ದಾನ ಮಾಡಿ, ಕೂಡಿ ಬಾಳಿರಿ, ಎಲ್ಲರನ್ನೂ ಪ್ರೀತಿಸಿರಿ, ಸಂತಸದಿಂದಿರುವ ವ್ಯಕ್ತಿಯ ಹತ್ತಿರ ಯಾವ ಖಾಯಿಲೆಯೂ ಸುಳಿಯಲಾರದು, ಮಿತ ಸಿರಿವಂತಿಕೆಯ ಜೀವನ ನಡೆಸಿರಿ’ ಎಂದು ಮಂಜುನಾಥ್ ಹೇಳಿದರು…..