“ತರಬೇತಿ ಇಲ್ಲದೆ ವೈದ್ಯ ವಿದ್ಯಾರ್ಥಿಗಳನ್ನು ಕೊರೋನಾ ಹೋರಾಟಕ್ಕಿಳಿಸುವುದು ಅಪಾಯಕಾರಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಗಳನ್ನು ಹಾಗೂ ಇಂಟರ್ನಿಗಳನ್ನು ಕೋವಿಡ್ ಸೇವೆಗೆ ನಿಯೋಜನೆ ಮಾಡಿಕೊಳ್ಳುವುದಕ್ಕೆ ಮುನ್ನ ಅವರಿಗೆ ಸೂಕ್ತ ತರಬೇತಿ ನೀಡುವುದು ಹಾಗೂ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸುವುದನ್ನು ಸರ್ಕಾರ ಖಾತರಿ ಪಡಿಸಿಕೊಳ್ಳಬೇಕು ಎಂದು ಹೆಸರಾಂತ ನರಶಸ್ತ್ರಚಿಕಿತ್ಸಾ ತಜ್ಞ ಡಾ.ಎನ್.ಕೆ.ವೆಂಕಟರಮಣ ಅವರು ಹೇಳಿದ್ದಾರೆ.

‘ವೈದ್ಯಕೀಯ ಯದ್ಧ’ದ ಇಂತಹ ಸನ್ನಿವೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಮತ್ತು ಇಂಟರ್ನಿಗಳನ್ನು ಸೇವೆಗೆ ಬಳಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಕರೆ ಸ್ವಾಗತಾರ್ಹ. ಆದರೆ ತರಬೇತಿ ನೀಡದೆ ಹಾಗೂ ಪರಿಕರಗಳನ್ನು ಲಭ್ಯವಾಗಿಸದೆ ಅವರನ್ನು ಬಳಸಿಕೊಳ್ಳಲು ಮುಂದಾದರೆ ನಾವು ನಮ್ಮ ವೈದ್ಯಕೀಯ ಸಂಪನ್ಮೂಲವನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಬಳಕೆಗೆ ಸೂಕ್ತವಾದ ಗಾಗಲ್ಸ್, ಹೆಡ್ ಕವರ್, ಫೇಸ್ ಷೀಲ್ಡ್, ಪ್ರಮಾಣೀಕೃತ ಮಾಸ್ಕ್, ಪಿಪಿಇ, ಲೆಗ್ ಕವರ್ ಮತ್ತು ಕೈಗವಸುಗಳನ್ನು ಎಲ್ಲಾ ಆಸ್ಪತ್ರೆಗಳಿಗೂ ಒದಗಿಸಬೇಕು. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಸಣ್ಣ ಆಸ್ಪತ್ರೆ, ದೊಡ್ಡ ಆಸ್ಪತ್ರೆ ಎಂಬ ಭೇದವಿಲ್ಲದೆ ಇವು ಎಲ್ಲೆಡೆಯೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಇವುಗಳನ್ನು ವ್ಯವಸ್ಥೆ ಮಾಡದೆ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇಂಟರ್ನಿಗಳನ್ನು ಕೋವಿಡ್ ಸೇವೆಗೆ ನಿಯೋಜಿಸಿದರೆ ನಮ್ಮ ಮಾನವ ಸಂಪನ್ಮೂಲವನ್ನು ಜೀವಾಪಯಕ್ಕೆ ದೂಡುವ ಅಪಾಯವಿರುತ್ತದೆ ಎಂದು ವೆಂಕಟರಮಣ ಎಚ್ಚರಿಸಿದ್ದಾರೆ.

ಅದೇ ರೀತಿಯಾಗಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇಂಟರ್ನಿಗಳನ್ನು ಕೋವಿಡ್ ಸೇವೆಗೆ ನಿಯೋಜಿಸುವ ಮುನ್ನ ಅವರಿಗೆ ತರಬೇತಿ ನೀಡುವುದು ಅತ್ಯವಶ್ಯ. ಇಲ್ಲದಿದ್ದರೆ ಅದು ಬಂದೂಕುಗಳನ್ನು ಬಳಸಲು ಗೊತ್ತಿಲ್ಲದ ಸೈನ್ಯದಂತಾಗುತ್ತದೆ. ತರಬೇತಿ ನೀಡುವುದರಿಂದ ಅವರಿಗೆ ತಮ್ಮನ್ನು ಹೇಗೆ ಸೋಂಕು ತಾಗದಂತೆ ನೋಡಿಕೊಳ್ಳಬೇಕು ಎಂಬುದರ ಜೊತೆಗೆ ಇತರರಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂಬುದೂ ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದ ವೈದ್ಯಕೀಯ ವೃತ್ತಿಪರರಾದ ಇವರಿಗೆ ಜಾಗತಿಕ ಪ್ರಮಾಣೀಕೃತ ವಿಧಿವಿಧಾನಗಳ ಬಗ್ಗೆ ತರಬೇತಿ ಕೊಡಬೇಕು. ಎಷ್ಟೋ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಗತಿಕ ವಿಧಿವಿಧಾನಗಳ ಬಗ್ಗೆ ಅರಿವು ಗೊತ್ತಿರುವುದಿಲ್ಲ. ಆದ್ದರಿಂದ ಅವರಿಗೆ ಈ ಕುರಿತು ತಿಳಿವಳಿಕೆ ಮೂಡಿಸಬೇಕು. ಅದೇ ರೀತಿಯಾಗಿ, ರಾಷ್ಟ್ರೀಯ ವೈದ್ಯಕೀಯ ಮಾರ್ಗದರ್ಶಿ ಸೂತ್ರಗಳು, ಸಾರ್ವಜನಿಕ ಮಾರ್ಗದರ್ಶಿ ಸೂತ್ರಗಳು ಹಾಗೂ ಆರೋಗ್ಯ ಕಾರ್ಯಕರ್ತರ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದಿದ್ದಾರೆ.

Facebook Comments

Sri Raghav

Admin