ಮೃತ ಡಾ.ನಾಗೇಂದ್ರ ಕುಟುಂಬಕ್ಕೆ 50 ಲಕ್ಷ ರೂ. ಚೆಕ್ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು: ಕೊರೋನಾ ಸಂಕಷ್ಟದ ಕಾಲದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಡಾ. ನಾಗೇಂದ್ರ ಅವರ ಕುಟುಂಬಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ರಾಜ್ಯ ಸರ್ಕಾರದ ಪರವಾಗಿ 50 ಲಕ್ಷ ರೂ. ಚೆಕ್ ಅನ್ನು ಮೃತರ ತಂದೆ ಟಿ.ಎಸ್.ರಾಮಕೃಷ್ಣ, ತಾಯಿ ಸುಲೋಚನಾ ಹಾಗೂ ಪತ್ನಿ ಬಿ.ಆರ್.ಅನಿತಾ ಮತ್ತು ಪುತ್ರಿ ಚಿನ್ಮಯಿ ಅವರಿಗೆ ಹಸ್ತಾಂತರಿಸಿದರು.

ಸೂಕ್ತ ಹುದ್ದೆ ನೀಡುವ ಬಗ್ಗೆ ಕುಟುಂಬದವರು ಬೇಡಿಕೆ ಇಟ್ಟಿದ್ದರಿಂದ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಕೆಲಸ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ವರದಿ ಬರಲಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ, ಬಿಜೆಪಿ ನಗರಾಧ್ಯಕ್ಷರಾದ ಟಿ.ಎಸ್. ಶ್ರೀವತ್ಸ ಹಾಗೂ ಇತರ ಅಧಿಕಾರಿಗಳು ಇದ್ದರು.

# ತಾಯಿ, ಪತ್ನಿ, ಪುತ್ರಿ ಹೆಸರಲ್ಲಿ 50 ಲಕ್ಷ ರೂ. ಡೆಪಾಸಿಟ್
ಮುಖ್ಯಮಂತ್ರಿಗಳು ಘೋಷಣೆ ಮಾಡಿದಂತೆ 50 ಲಕ್ಷ ರೂಪಾಯಿಯನ್ನು ಮೃತ ಡಾ. ನಾಗೇಂದ್ರ ಅವರ ತಾಯಿ, ಪತ್ನಿ ಹಾಗೂ ಮಗಳ ಹೆಸರಿನಲ್ಲಿ ಡೆಪಾಸಿಟ್ ಮಾಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಸರ್ಕಾರ ಮಾತು ಕೊಟ್ಟಂತೆ ಸೂಕ್ತ ಹುದ್ದೆಯನ್ನು ಕೊಡಿಸಲಾಗುವುದು. ಸರ್ಕಾರದ ನಿಯಮದ ಪ್ರಕಾರ ಗ್ರೂಪ್ ಸಿ ಕೆಟಗರಿಯಲ್ಲಿ ಅವಕಾಶವಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ. ಒಟ್ಟು 7 ದಿನಗಳಲ್ಲಿ ವರದಿ ಕೈಸರಲಿದೆ. ನಿಧಾನಗತಿಯಾಗಿ ತನಿಖೆ ನಡೆಯುತ್ತಿಲ್ಲ. ಇಂತಹ ಪ್ರಕರಣಗಳಿಗೆ ಪರ-ವಿರೋಧ ಚರ್ಚೆಗಳು ಇರುತ್ತವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನು ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳು ಮಡಿಕೇರಿ ಭಾಗಕ್ಕೆ ಭೇಟಿ ನೀಡಿ ಮಳೆಹಾನಿ ಪರಿಶೀಲನೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ದಸರಾ ಆಚರಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕರಾದ ತನ್ವೀರ್ ಸೇಠ್ ಆರೋಪದಲ್ಲಿ ಹುರುಳಿಲ್ಲ. ಗ್ರೂಪ್ ಡಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೇ ನೇರ ಅಧಿಕಾರವನ್ನು ನೀಡಲಾಗಿದೆ. ಅಲ್ಲದೆ, ನೇಮಕಾತಿ ಪ್ರಕ್ರಿಯೆಗಳೂ ನಡೆಯುತ್ತಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments

Sri Raghav

Admin