ಇಂದು ಅಣ್ಣಾವ್ರ 14ನೇ ವರ್ಷದ ಪುಣ್ಯಸ್ಮರಣೆ, ಮನೆ-ಮನಗಳಲ್ಲಿ ಅಪ್ಪಾಜಿ ಜಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.12- ಕನ್ನಡಿಗರ ಅಭಿಮಾನಿ ದೇವರು, ವರನಟ, ಪದ್ಮಭೂಷಣ, ಡಾ.ರಾಜ್‍ಕುಮಾರ್ ಅವರ 14 ನೇ ವರ್ಷದ ಪುಣ್ಯ ಸ್ಮರಣೆ ದಿನವಾದ ಇಂದು ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇವಲ ರಾಜ್ ಕುಟುಂಬ ವರ್ಗದವರು ಮಾತ್ರ ಅಪ್ಪಾಜಿಯವರ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಇಡೀ ವಿಶ್ವದಾದ್ಯಂತ ಕೊರೋನಾ ಹಾವಳಿ ಪ್ರತಿಯೊಬ್ಬರನ್ನು ಕಂಗಾಲಾಗಿಸಿದೆ. ಜನರು ಜೀವವನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಇದರ ನಡುವೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪುಣ್ಯ ಸ್ಮರಣೆಯನ್ನು ಅವರಿರುವ ಸ್ಥಳದಲ್ಲೇ ನೆರವೇರಿಸಲು ನಿರ್ಧರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮಾತನಾಡಿ, ಪ್ರತಿ ವರ್ಷವೂ ನಾವು ಅಪ್ಪಾಜಿಯವರ ಪುಣ್ಯ ಸ್ಥಳಕ್ಕೆ ಹೋಗಿ ಪೂಜೆ ಮಾಡಿ ಅನ್ನದಾನ ಮತ್ತಿತರ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೆವು. ಆದರೆ ಈ ಬಾರಿ ಲಾಕ್‍ಡೌನ್ ಇರುವುದರಿಂದ ಸರಳವಾಗಿ ಪೂಜೆ ಮಾಡಿದ್ದೇವೆ. ಅಭಿಮಾನಿಗಳು ಯಾರು ಪುಣ್ಯ ಸ್ಮರಣೆ ಜಾಗಕ್ಕೆ ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಮಾಸ್ಕ್ ವಿತರಣೆ: ಪುಣ್ಯಸ್ಮರಣೆಯ ದಿನದ ಪ್ರಯುಕ್ತ ರಕ್ತದಾನ, ಅನ್ನದಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ನಂದಿನಿ ಬಡಾವಣೆಯಲ್ಲಿರುವ ರಾಜು ಎಂಬ ಟೈಲರ್ ಮೋದಿ ಚಾರಿಟಬಲ್ ಟ್ರಸ್ಟ್ ಸಹಭಾಗಿತ್ವದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಸ್ಕ್ ಹಾಗೂ ಹ್ಯಾಂಡ್ ಗೋಸ್ಲ್ ತಯಾರಿಸಿ ಉಚಿತವಾಗಿ ಜನರಿಗೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ನೀಡಿ ಅಭಿಮಾನ ವ್ಯಕ್ತಪಡಿಸುವುದು ವಿಶೇಷ.

ಈ ರೀತಿ ಅಭಿಮಾನವನ್ನು ವ್ಯಕ್ತಪಡಿಸಿರುವ ರೀತಿ ಬಹಳ ವಿಶೇಷವಾದದ್ದು , ಇದು ಜನರಲ್ಲಿ ಜಾಗೃತಿಯೂ ಕೂಡ ಮೂಡಿಸಿದಂತಾಗುತ್ತದೆ.

Facebook Comments

Sri Raghav

Admin