ಕನ್ನಡಿಗರ ಪ್ರೀತಿ-ಅಭಿಮಾನದ ಚಿಪ್ಪಿನಲ್ಲಿ ಮೂಡಿದ ಅಪೂರ್ವ ಮುತ್ತೇ ಮುತ್ತುರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಅನೇಕ ಜನ್ಮಗಳ ಸಂಸ್ಕಾರದಿಂದ ಮನುಷ್ಯರಾಗಿ ಜನಿಸುತ್ತೇವೆ. ಹಾಗೆಯೇ ಕೆಲವರು ಪೂರ್ವ ಜನ್ಮದ ಪುಣ್ಯದಿಂದಲೇ ಜನ್ಮ ತಾಳಿರುತ್ತಾರೆ. ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ,ವರನಟನಾಗಿ ನಟಸಾರ್ವಭೌಮನಾಗಿ ಕರ್ನಾಟಕದ ಜನ ಮಾನಸದಲ್ಲಿ ಪ್ರತಿಷ್ಠಿತರಾಗಿದ್ದು ಸಾಮಾನ್ಯ ಮಾತಲ್ಲ.

ಡಾ.ರಾಜ್‍ಕುಮಾರ್ ಅವರಿಗೆ ಜನ್ಮ ನೀಡಿದ್ದು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಪೂರ್ವಾಜಿತ ಪುಣ್ಯ. ಕಡು ಕಷ್ಟದಲ್ಲಿ ಬಾಲ್ಯ ಕಳೆದ ಮುತ್ತುರಾಜ್, ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮಿಂಚಿದವರು.

ನಾಟಕ ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿರುವುದರಿಂದ ಒಳಿತಾಗಲಿದೆ ಎಂಬ ಕಾರಣಕ್ಕೆ ಪುಟ್ಟಸ್ವಾಮಯ್ಯ ಮಗ ಮುತ್ತುರಾಜ್, 2ನೇ ಮಗ ವರದರಾಜ್ ಮತ್ತು ಮಗಳು ಶಾರದಮ್ಮನನ್ನು ತನ್ನೊಂದಿಗೆ ನಾಟಕ ರಂಗಕ್ಕೆ ಪ್ರವೇಶಿಸಿದರು.

ತಂದೆಯ ಜೊತೆಯಲ್ಲೇ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ಪ್ರಹ್ಲಾದ, ಮಾರ್ಕಂಡೇಯ, ಚಂದ್ರಹಾಸ ಮೊದಲಾದ ಬಾಲ ಪಾತ್ರಗಳನ್ನು ನಿರ್ವಹಿಸುತ್ತಾ ಮುತ್ತುರಾಜ್ ಅವರು ರಂಗಭೂಮಿ ಸೇವೆಯಲ್ಲೇ ಹೆಸರಾದ ಗುಬ್ಬಿ ಕಂಪನಿಗೆ ಸೇರಿದರು.

ಇಲ್ಲಿಂದಲೇ ಡಾ.ರಾಜ್(ಮುತ್ತುರಾಜ್)ಗೆ ಸಂಗೀತ ಅಭ್ಯಾಸ, ಗುರುಹಿರಿಯರಲ್ಲಿ ವಿನಯದಿಂದ ಇರಬೇಕಾದ ವಿದ್ಯೆ ಸೇರಿದಂತೆ ಶ್ರದ್ಧೆ, ಸಾಧನೆ, ಕನ್ನಡ ವಿದ್ಯಾಭ್ಯಾಸ ಎಲ್ಲವೂ ಗುರುಕುಲ ವಿದ್ಯಾಭ್ಯಾಸದಂತೆ ಕರಗತವಾಗುತ್ತಿತ್ತು. ಇದು ಬದುಕಿನ ಭವ್ಯತೆಗೂ ಬುನಾದಿಯಾಯಿತು.

ಅಲ್ಲಿಂದ ಅವರ ಕಲಾಸೇವೆ ದಿ.ಸುಬ್ಬಯ್ಯನಾಯ್ಡು ಅವರ ಕಂಪನಿಯಲ್ಲಿ ಮುಂದುವರೆದಾಗ ರಾಜ್‍ಕುಮಾರ್ ಅವರಿಗೆ ದೊಡ್ಡ ದೊಡ್ಡ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶದೊಂದಿಗೆ ಸಂಗೀತ ಅಭ್ಯಾಸ, ಏಕಲವ್ಯನಂತೆ ಜ್ಞಾನ ಸಂಪಾದನೆ, ರಂಗಭೂಮಿಯ ಶುದ್ಧ ಕನ್ನಡ ಭಾಷೆ ಸಹಿತವಾಗಿ ಸಾಕಷ್ಟು ಅನುಭವವನ್ನು ಗಳಿಸಿದರು.

ತಂದೆಯ ಅಕಾಲ ಮರಣದಿಂದ ಸಂಸಾರದ ನಿರ್ವಹಣೆ ಜವಾಬ್ದಾರಿ ಹೊತ್ತ ಅವರಿಗೆ ಗುರಿ ಸಾಧನೆ ಮತ್ತು ತಮ್ಮ ಕೆಲಸದಲ್ಲಿದ್ದ ಶ್ರದ್ಧೆಯಿಂದಾಗಿ ಕಾಲಘಟ್ಟದೊಂದಿಗೆ ಅದೃಷ್ಟದ ದಿನಗಳು ಅವರ ಕೈ ಹಿಡಿದವು.

ಬೇಡರ ಕಣ್ಣಪ್ಪ ಚಿತ್ರದೊಂದಿಗೆ ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಟ್ಟ ರಾಜ್‍ಕುಮಾರ್ ಅವರ ಶಬ್ದವೇದಿ ಚಿತ್ರದವರೆಗೂ ಕಲಾ ಸರಸ್ವತಿಯ ಹಸ್ತ ವರವಾಗಿತ್ತು.

ಎಷ್ಟೇ ಎತ್ತರಕ್ಕೆ ಬೆಳೆದರೂ ಸಹನೆ, ತಾಳ್ಮೆ ಸದ್ಗುಣಗಳನ್ನೇ ವಜ್ರ ಕವಚಗಳನ್ನಾಗಿ ಮಾಡಿಕೊಂಡು ಅಭಿಮಾನಿಗಳನ್ನು ದೇವರು ಎಂದು ಸಂಬೋಧಿಸಿ ಎತ್ತರೆತ್ತರಕ್ಕ ಬೆಳೆದರೂ ರಂಗಭೂಮಿಯ ಮುತ್ತುರಾಜ್ ಆಗೆ ಮೆರೆದರು.

ಅವರೊಬ್ಬ ಗಾನಗಂಧರ್ವ, ನಟಸಾರ್ವಭೌಮ, ಕನ್ನಡ ನಾಡಿನ ಸಾಂಸ್ಕøತಿಕ ರಾಯಭಾರಿ ಹಾಗೂ ಅಭಿಮಾನಿಗಳ ದೇವರಾಗಿಯೇ ಎಂದಿಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

ರಾಜ್ ಅವರ ಜನ್ಮ ದಿನ ಹಾಗೂ ಅವರು ನಮ್ಮನ್ನೆಲ್ಲ ಅಗಲಿದ ದಿನವನ್ನು ಕನ್ನಡಿಗರು ಎಂದಿಗೂ ಮರೆಯಲಾರರು. ಪ್ರತಿ ವರ್ಷವೂ ಈ ಎರಡು ದಿನಗಳಂದು ರಾಜ್ ಅಭಿಮಾನಿಗಳು, ಕುಟುಂಬಸ್ಥರು, ಆತ್ಮೀಯರು ಅವರ ವಿಶೇಷ ವ್ಯಕ್ತಿತ್ವವನ್ನು , ಅವರೊಂದಿಗೆ ಕಳೆದ ದಿನಗಳನ್ನು, ಅವರ ಅಭಿಮಾನವನ್ನು ನೆನಪಿಸಿಕೊಳ್ಳದೆ ಇರಲಾರರು.

ಅಂತಹ ಸುಸಂದರ್ಭ ಮತ್ತೆ ಬಂದಿದೆ. ಇಂದು ಏಪ್ರಿಲ್ 24. ರಾಜ್ ಅವರ ಜನ್ಮದಿನ. ಚಿತ್ರರಂಗದಲ್ಲಿ ಒಬ್ಬ ನಾಯಕ ನಟರಾಗಿ ಪರಿಚಿತರಾಗುವುದಕ್ಕೂ ಮುನ್ನ ರಾಜ್ ಅವರ ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಒಂದು ಸಂದರ್ಭವನ್ನು ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಸಿ.ವಿ.ಶಿವಶಂಕರ್ ಸ್ಮರಿಸಿಕೊಂಡಿದ್ದಾರೆ.

ಕನ್ನಡ ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಕಮೀಡಿಯನ್ ಗುಗ್ಗು ಅವರ ಚೆನ್ನೈನ ಚಿಕ್ಕ ಕೊಠಡಿಯನ್ನು ಗುಗ್ಗು ಮಹಲ್ ಎಂದೇ ಕರೆಯಲಾಗುತ್ತಿತ್ತು.
ಡಾ.ರಾಜ್‍ಕುಮಾರ್, ರತ್ನಾಕರ, ಬಾಲಕೃಷ್ಣ, ಅಶ್ವಥ್,ಶಿವಶಂಕರ್,ಎಚ್.ಆರ್.ಶಾಸ್ತ್ರಿಗಳು, ಕೃಷ್ಣ ಶಾಸ್ತ್ರಿಗಳು ಮೊದಲಾದವರೆಲ್ಲ ತಮ್ಮ ಬಿಡುವಿನ ವೇಳೆ ಇಲ್ಲಿಗೆ ಬಂದು ಜಮಾಯಿಸುತ್ತಿದ್ದರು. ಚಿತ್ರ ತಯಾರಿಸುವ ನಿರ್ಮಾಪಕರು ಯಾರು, ಅವರ ಚಿತ್ರವನ್ನು ಯಾರು ನಿರ್ದೇಶಿಸುತ್ತಿದ್ದಾರೆ, ಅವರ ವಿಳಾಸವೇನು? ಈ ಎಲ್ಲ ವಿಚಾರಗಳು ಇಲ್ಲಿ ಸಂಗ್ರಹವಾಗುತ್ತಿದ್ದವು.

ಏ.24 ರಾಜ್(ಮುತ್ತುರಾಜ್) ಅವರ ಹುಟ್ಟುಹಬ್ಬ ಎಂಬುದು ಅವರಿಗೆ ಪರಿಚಯವಿದ್ದ ಎಲ್ಲರಿಗೂ ತಿಳಿದಿತ್ತು. ಅಂದು ರೂಮ್‍ಗೆ ಬಂದ ರಾಜ್ ಅವರನ್ನು ಗುಗ್ಗು ಅವರು ಮಲಗುತ್ತಿದ್ದ ಹಗ್ಗದ ಮಂಚದ ಮೇಲೆ ಕೂರಿಸಿ ಕ್ಷೇಮ ಸಮಾಚಾರ ವಿಚಾರಿಸಿದರು. ರಾಜ್ ಎಂದಿನಂತೆ ನಗುಮೊಗದಿಂದ ನಾನು ಚೆನ್ನಾಗಿದ್ದೇನೆ ನೀವು ಹೇಗಿದ್ದೀರಿ. ಇವತ್ತು ಯಾವುದೂ ಶೂಟಿಂಗ್ ಇಲ್ವೆ ಎಂದು ಕೇಳಿದರು.

ಶೂಟಿಂಗ್ ಇತ್ತು. ವಿಠ್ಠಲಾಚಾರ್ಯ ನಿರ್ದೇಶನದ ಚಿತ್ರ. ಹೊಸ ಹಿರೋಯಿನ್ ಬಂದಿದ್ಲು. ಅವಳು ಚೆನ್ನಾಗಿಲ್ಲ ಅವಳ ಜೊತೆ ನಾನು ಅಭಿನಯಿಸೋಲ್ಲ ಎಂದು ಹೇಳಿ ಸ್ಟುಡಿಯೋದಿಂದ ಬಂದುಬಿಟ್ಟೆ ಎಂದು ಗುಗ್ಗು ಹೇಳಿದರು.

ಒಳ್ಳೆ ಕೆಲಸಾನೆ ಮಾಡಿದ್ದೀರಿ. ನಿಮ್ಮ ಮುಖದ ಸೌಂದರ್ಯಕ್ಕೆ ತಕ್ಕವಳಲ್ಲದ ಹಿರೋಯಿನ್ ಜೊತೇಲಿ ಅಭಿನಯಿಸಿದ್ರೆ ನಿಮ್ಮ ಹೆಸರಿಗೇ ಅವಮಾನ ವಲ್ಲವೇ..? ಕಮೆಡಿಯನ್ ಗುಗ್ಗು ಎಂದ್ರೇನು?ಅವರ ಸೌಂದ್ಯರ ಏನು? ಕಮೆಡಿಯನ್ ಗುಗ್ಗುನಂತಹ ಹಿರೋಯಿನ್ ಜೊತೆಲೇ ನೀವು ಅಭಿಯಿಸಬೇಕು. ಇಲ್ಲದೇ ಇದ್ದರೆ ನೀವು ಕಾಲ್‍ಶೀಟ್ ಯಾರಿಗೂ ಕೊಡಬಾರದು ಎಂದು ರಾಜ್ ನಗುತ್ತಲೇ ಹೇಳಿದರು.

ಇವತ್ತು ಕಾಲ್‍ಶೀಟ್ ಕ್ಯಾನ್ಸಲ್ ಮಾಡಿಕೊಂಡು ಬಂದಿದ್ದೇಕೆ ಗೊತ್ತೆ…? ನಿನ್ನೆನೇ ಚಿದಂಬರ ಹೇಳಿದ ಮುತ್ತುರಾಜು ಅವರ ಹುಟ್ಟಿದ ಹಬ್ಬ ಏ.24 ಅಂತ. ಅದಕ್ಕೆ ನಾನು ನಿಮಗೆ ಸ್ವೀಟ್ ಕೊಡಬೇಕಂತ ಯಾರಿಗೂ ನನ್ನ ಕಾಲ್‍ಶೀಟ್ ಕೊಡಲಿಲ್ಲ. ನೀವು ನಮ್ಮ ಮನೆಗೆ ಬಂದಿದ್ದೀರಿ. ಹುಟ್ಟು ಹಬ್ಬದ ಶುಭಾಷಯಗಳು ನಿಮಗೆ ಎಂದು ರೂಮ್‍ನ ಎದುರುಗಡೆ ಇದ್ದ ಉಡುಪಿ ಹೋಟೆಲ್‍ನಿಂದ ಕೇಸರಿಬಾತ್, ಉಪ್ಪಿಟ್ಟು ತರಿಸಿ ಬಡ ಗುಗ್ಗಿವಿನ ಸೇವೆ ಇಷ್ಟೇ ಎಂದರು.

ಈ ವೇಳೆ ಅಲ್ಲೇ ಕುಳಿತಿದ್ದ ಶಿವಶಂಕರ, ಅಶ್ವಥ್ ನಾರಾಯಣಶೆಟ್ಟರಿಗೆ ಕನ್ನಡ ಚಿತ್ರರಂಗದ ನಟ ನಟಿಯರ ಹುಟ್ಟಿದ ಹಬ್ಬ ತಾರೀಖೆಲ್ಲ ಗೊತ್ತಿರುತ್ತೆ. ಇವರು ಅಸಾಧ್ಯ ಗುಗ್ಗು ಎಂದು ಹಾಸ್ಯ ಮಾಡಿದರು.

ಗುಗ್ಗು ಅವರ ಹೃದಯ ವೈಶಾಲ್ಯತೆಗೆ ಹರ್ಷ ಪಟ್ಟ ರಾಜ್, ನಾನು ಇವತ್ತೆ ಬರಬೇಕಿತ್ತೆ ನಿಮ್ಮ ಗುಗ್ಗು ಮಹಲ್‍ಗೆ ಎಂದಾಗ, ಕಮೆಡಿಯನ್ ಗುಗ್ಗು ಮಧ್ಯಪ್ರವೇಶಿಸಿ ನನ್ನ ಮುಖ ಒಂಥರ ಆಯಸ್ಕಾಂತ ಇದ್ದ ಹಾಗೆ ನಿಮ್ಮೆಲ್ಲರನ್ನು ಸೆಳೆಯೋ ಶಕ್ತಿ ನನ್ನ ಮುಖಕ್ಕೆ ಇದೆ. ಅದಕ್ಕೆ ನನ್ನನ್ನು ಗುಗ್ಗು ಎಂದು ಕರೆಯುವುದು ಎಂದು ನಕ್ಕರು.

ರಾಜ್‍ಕುಮಾರ್‍ರಂಥ ಕನ್ನಡ ಚಿತ್ರರಂಗದ ನಾಯಕ ನಟರು ಗುಗ್ಗು ಅವರ ಜೊತೆ ನಟಿಸುವಾಗಲೆಲ್ಲ ಇವತ್ತು ಏಕೆ ಕೇಸರಿಬಾತ್ ತರಲಿಲ್ಲಾಂತ ಕೇಳ್ತಾ ಇದ್ದರು. ಇವರಿಬ್ಬರ ನಗುಮುಖದ ಸಂಭಾಷಣೆ ಕೇಳುತ್ತಾ ಅವರ ಸಂಸತಸದಲ್ಲಿ ಭಾಗಿಯಾಗಿದ್ದ ನನಗೆ ಆ ದಿನ ರಾಜ್‍ಕುಮಾರರ ಹುಟ್ಟುಬ್ಬದ ಆಚರಣೆ ಸದಾ ನೆನಪಾಗಿತ್ತಿರುತ್ತದೆ ಎಂದು ಸ್ಮರಿಸಿದರು.

-ಸಿ.ವಿ.ಶಿವಶಂಕರ್

Facebook Comments