ಅಪ್ಪಾಜಿಯ ಪರಿಪೂರ್ಣ ವ್ಯಕ್ತಿತ್ವ, ಪ್ರತಿಯೊಬ್ಬರಿಗೂ ಮಾದರಿ

ಈ ಸುದ್ದಿಯನ್ನು ಶೇರ್ ಮಾಡಿ

– ಎನ್.ಎಸ್.ರಾಮಚಂದ್ರ

ಕನ್ನಡ ಕಲಾ ಲೋಕದ ಧೃವತಾರೆ, ಕರುನಾಡಿನ ಸುಸಂಪನ್ನ ಸಂಸ್ಕøತಿಯ ರಾಯಭಾರಿ, ವಿನಯವಂತಿಕೆಯ ಪ್ರತೀಕದಂತಿದ್ದ ವರನಟ ಡಾ.ರಾಜ್‍ಕುಮಾರ್ ಅವರ 91ನೆ ಜನ್ಮ ದಿನಾಚರಣೆಯ ಸುದಿನವಿದು. ಡಾ.ರಾಜ್‍ಕುಮಾರ್ ಅವರು ಅಸಂಖ್ಯಾತ ಕನ್ನಡಿಗರ ಆರಾಧ್ಯ ದೈವರಾಗಿದ್ದರು. ಅದಕ್ಕೆ ಕಾರಣ ಅವರ ಅನುಪಮ ವ್ಯಕ್ತಿತ್ವ.

ರಾಜ್‍ಕುಮಾರ್ ಅವರ ಬಗ್ಗೆ ಕನ್ನಡಿಗರಿಗೆ ಇರುವ ಪ್ರೀತಿ, ಅಭಿಮಾನ ಶಾಶ್ವತ ಅದಕ್ಕೆ ಸಾವಿಲ್ಲ. ದಂತಕಥೆಯ ರೀತಿಯಲ್ಲಿ ಬದುಕಿದ ಡಾ.ರಾಜ್‍ಕುಮಾರ್ ಅವರು ಕನ್ನಡ ಕಲಾ ಲೋಕಕ್ಕೆ ಮಾತ್ರವಲ್ಲ. ಇತರ ಎಲ್ಲಾ ಕ್ಷೇತ್ರಗಳಿಗೂ ಸ್ಫೂರ್ತಿ, ಮಾದರಿ.

ಬೇಡರ ಕಣ್ಣಪ್ಪನಾಗಿ ಬೆಳ್ಳಿ ತೆರೆಗೆ ಬಂದ ಡಾ.ರಾಜ್‍ಕುಮಾರ್ ಕನ್ನಡ ಕಲಾ ಲೋಕದಲ್ಲಿ ಐದು ದಶಕಗಳ ಕಾಲ ಅನಭಿಷಿಕ್ತ, ಸಾಮ್ರಾಟನಾಗಿ ವಿಜೃಂಭಿಸಿದರು. ಅವರ ಅಭಿನಯದ ಒಂದೊಂದು ಚಿತ್ರಗಳೂ ಅನರ್ಘ್ಯ ರತ್ನಗಳು. ಭಕ್ತ ಕುಂಬಾರ, ಭಕ್ತ ಚೇತ, ಸತ್ಯ ಹರಿಶ್ಚಂದ್ರ, ಭಕ್ತ ಕನಕದಾಸ, ರಣಧೀರ ಕಂಠೀರವ, ಇಮ್ಮಡಿ ಪುಲಕೇಶಿ, ಶ್ರೀ ಕೃಷ್ಣ ದೇವರಾಯ , ಭಕ್ತ ಪ್ರಹ್ಲಾದ, ಮಯೂರ ಮುಂತಾದ ಒಂದೊಂದು ಚಿತ್ರಗಳೂ ಅವಿಸ್ಮರಣೀಯ. ಅವರ ಅಭಿನಯದ ಎಲ್ಲಾ ಚಿತ್ರಗಳಿಗೂ ಯು ಅರ್ಹತಾ ಪತ್ರ ಬಂದಿರುವುದು ಜಾಗತಿಕ ದಾಖಲೆ, ಸದಭಿರುಚಿಯ ಸಂಕೇತ.

ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಹೀಗೆ ಎಲ್ಲಾ ಪ್ರಾಕಾರದ ಚಿತ್ರಗಳಲ್ಲೂ ನಟಿಸಿದ ಅವರು ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಾಯಕ ನಟ. ಗಾಯನವಾಗಲಿ, ಅಭಿನಯವಾಗಲೀ, ಡಾ.ರಾಜ್‍ಕುಮಾರ್ ಅವರದು ಅನನ್ಯ ನಿಷ್ಠೆ. ಅವರು ಎಂದೂ ಪಾತ್ರವನ್ನು ಮೀರಿ ಬೆಳೆಯಲಿಲ್ಲ. ಮಣ್ಣಿನ ಮಗ, ಅಣ್ಣ ತಂಗಿ, ಚಂದವಳ್ಳಿಯ ತೋಟ, ದೂರದ ಬೆಟ್ಟ, ಮೇಯರ್ ಮುತ್ತಣ್ಣ ಮುಂತಾದ ಹಲವು ಚಿತ್ರಗಳಲ್ಲಿ ಡಾ.ರಾಜಕುಮಾರ್ ಅವರ ಪಾತ್ರಗಳೊಂದಿಗೆ ಪ್ರೇಕ್ಷಕರು ತಮ್ಮನ್ನು ಗುರುತಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಸುಮಾರು 75 ಮಂದಿ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಡಾ.ರಾಜ್‍ಕುಮಾರ್ ಅವರು ತಮ್ಮ ವಿಧೇಯತೆಯಿಂದ, ಕರ್ತವ್ಯ ನಿಷ್ಠೆಯಿಂದ ಪ್ರತಿಯೊಬ್ಬರನ್ನೂ ಗೆದ್ದಿದ್ದಾರೆ. ಈ ವಿಷಯದಲ್ಲಿ ರಾಜ್‍ಕುಮಾರ್‍ಗೆ ರಾಜ್‍ಕುಮಾರ್ ಅವರೇ ಸಾಟಿ.

ಒಬ್ಬ ಕಲಾವಿದನಾಗಿ ಸಮಸ್ತ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರನಾದ ಡಾ.ರಾಜ್‍ಕುಮಾರ್ ಅವರು ರಾಜಕೀಯ ಕ್ಷೇತ್ರದ ಉನ್ನತ ಸಿಂಹಾಸನವನ್ನು ಏರಬಹುದಾಗಿತ್ತು. ಅಂತಹ ಕೆಲ ಅವಕಾಶಗಳು ಅರಸಿಕೊಂಡು ಬಂದವು. ಆದರೆ ಡಾ.ರಾಜ್‍ಕುಮಾರ್ ಅವರು ಕಲಾರಾಧನೆಯಿಂದ ವಿಚಲಿತರಾಗಲಿಲ್ಲ. ಕಲೆಯೇ ನನ್ನ ಬದುಕು ಎಂಬ ನಿಲುವನ್ನು ಸಡಿಲಗೊಳಿಸಲಿಲ್ಲ. ಆದರೆ ನಾನು ಕಲಾವಿದ, ಅಭಿನಯ ಮಾಡುವುದಷ್ಟೇ ನನ್ನ ಕೆಲಸ ಅಂದುಕೊಂಡು ಸುಮ್ಮನೆ ಕೂರಲಿಲ್ಲ.

ಕನ್ನಡ ನೆಲ, ಜಲ, ಭಾಷೆಗೆ ಆಪತ್ತು ಎರಗಿದಾಗಲೆಲ್ಲಾ ಅವರು ಅದರ ರಕ್ಷಣೆಗೆ ಮುಂದಾದರು. ಪ್ರವಾಹ, ಬರ ಮುಂತಾದ ಪ್ರಾಕೃತಿಕ ವಿಕೋಪಗಳು ಎದುರಾದಾಗ ರಾಜ್ಯದ ಜನತೆಗೆ ನೆರವಾದರು. ಆ ಕಾರಣದಿಂದ ಡಾ.ರಾಜ್‍ಕುಮಾರ್ ಅವರದು ಪರಿಪೂರ್ಣ ವ್ಯಕ್ತಿತ್ವ ಎಂದು ನಿಸ್ಸಂದೇಹವಾಗಿ ಹೇಳಬಹುದು.

ತಮ್ಮ ಕ್ಷೇತ್ರದಲ್ಲಿ ಮೇರು ಮಟ್ಟಕ್ಕೆ ಏರಿದರೂ ಕೂಡ ನಾನಿನ್ನೂ ವಿದ್ಯಾರ್ಥಿ. ಕಲಿಕೆಯ ಹಂತದಲ್ಲಿದ್ದೇನೆ ಎಂದು ಅವರು ಹೇಳುತ್ತಿದ್ದರು.ಅಭಿಮಾನಿಗಳನ್ನು ದೇವರು ಎಂದು ಸಂಭೋಧಿಸುತ್ತಿದ್ದ ಅವರು ಒಮ್ಮೆಯೂ ನಾನು ಅನ್ನುತ್ತಿರಲಿಲ್ಲ. ನೀವು, ನಿಮ್ಮಿಂದ ಅನ್ನುತ್ತಿದ್ದ ಡಾ.ರಾಜ್‍ಕುಮಾರ್ ಅವರು ಆ ಕಾರಣದಿಂದಾಗಿಯೇ ಬೆಳೆದು ಅತ್ಯುನ್ನತ ಮಟ್ಟಕ್ಕೆ ಏರಿದರು.

ಈ ರಾಜಕುಮಾರ ಏನನ್ನೂ ಬಯಸುವುದಿಲ್ಲ. ತಾನಾಗಿಯೇ ಎಲ್ಲವೂ ಬರುತ್ತಿವೆ ಎಂದು ಹೇಳುತ್ತಿದ್ದ ಅವರಿಗೆ ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಬಂದಿವೆ. ಅದನ್ನೆಲ್ಲಾ ಅವರು ತಮ್ಮ ಅಭಿಮಾನಿ ದೇವರುಗಳಿಗೆ ಅರ್ಪಿಸಿದ್ದಾರೆ.

ಕನ್ನಡ ಕಲೆ ಹಾಗೂ ಸಾಂಸ್ಕøತಿಕ ಲೋಕಕ್ಕೆ ಡಾ.ರಾಜ್‍ಕುಮಾರ್ ಇಂದಿಗೂ ಪ್ರಸ್ತುತ. ಸಮಸ್ತ ಕಲಾವಿದರಿಗೂ ಅವರ ಹೆಸರೇ ದೊಡ್ಡ ಸ್ಫೂರ್ತಿ. ರಾಜ್‍ಕುಮಾರ್ ಅವರನ್ನು ಉದಹರಿಸದೆ ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಅಪೂರ್ಣ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿರುವ ಡಾ.ರಾಜ್‍ಕುಮಾರ್ ಅಮರ. ಆ ದಿವ್ಯ ಚೇತನಕ್ಕೆ ನೂರು ನಮನ.

Facebook Comments

Sri Raghav

Admin