ಅಣ್ಣಾವ್ರ ಬದುಕಿನಲ್ಲಿ ಆ ಕರಾಳ ಘಟನೆ ನಡೆದು 20 ವರ್ಷವಾಯ್ತು..!

ಈ ಸುದ್ದಿಯನ್ನು ಶೇರ್ ಮಾಡಿ

– ಎನ್.ಎಸ್.ರಾಮಚಂದ್ರ
ಜುಲೈ 30, 2000… ಆ ದಿನದ ನೆನಪು ಮಾಡಿಕೊಂಡರೇ ಮೈ ಜುಮ್ಮೆನ್ನುತ್ತದೆ. ಕನ್ನಡಿಗರ ಆರಾಧ್ಯ ದೈವ, ಸಾಂಸ್ಕøತಿಕ ರಾಯಭಾರಿ, ವಿನಯವಂತಿಕೆಯ ಪ್ರತಿಮೂರ್ತಿ, ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರು ನರಹಂತಕ ವೀರಪ್ಪನ್‍ನಿಂದ ಅಪಹೃತರಾದ ದಿನ ಅದು. ಆ ಕರಾಳ ಘಟನೆ ನಡೆದು ಇಂದಿಗೆ 20 ವರ್ಷ ತುಂಬಿತು.

ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರಿಗೆ ಗಾಜನೂರು ಪರಮಪ್ರಿಯವಾದ ಸ್ಥಳ. ತಮ್ಮ ಜಮೀನಿನಲ್ಲಿ ಸ್ವಚ್ಛಂದವಾಗಿ ವಿಹರಿಸಿ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದು ತಾವು ತೋಡಿಸಿದ ಬಾವಿಯ ತಣ್ಣೀರನ್ನು ಕುಡಿದು ಆನಂದಿಸುತ್ತಿದ್ದರು. ಗಾಜನೂರಿನಲ್ಲಿ ಅವರ ಪೂರ್ವಿಕರ ಮನೆ ಇದೆ. ಅದೇ ಊರಿನಲ್ಲಿ ಸುಸಜ್ಜಿತವಾದ ತೋಟದ ಮನೆಯನ್ನೂ ಕಟ್ಟಿಸಿದ್ದರು.

ವರನಟ ಡಾ.ರಾಜ್‍ಕುಮಾರ್ ಅವರು ಕುಟುಂಬ ಸಮೇತ ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಪಡೆದು ಬೆಂಗಳೂರಿಗೆ ಮರಳುತ್ತಿರುವಾಗ ಗಾಜನೂರಿಗೆ ಹೋಗಿ ಒಂದೆಡು ದಿನ ಇರೋಣವೇ ಎಂದು ತಮ್ಮ ಪತ್ನಿ ಪಾರ್ವತಮ್ಮನವರನ್ನು ಕೇಳಿದರು.

ಕಾಡುಗಳ್ಳನಿಂದ ವರನಟನಿಗೆ ಅಪಾಯವಿದೆ ಎಂಬ ಸೂಚನೆ ಇತ್ತು. ಆದರೂ ಪತಿಯ ಆಸೆಗೆ ತಣ್ಣೀರೆರಚಬಯಸದ ಪಾರ್ವತಮ್ಮನವರು ಕುಟುಂಬ ಸಮೇತ ಗಾಜನೂರಿಗೆ ಬಂದರು. ಮಕ್ಕಳು ಮಾತ್ರ ಬೆಂಗಳೂರಿನಲ್ಲಿದ್ದರು.

ತಮ್ಮ ಹಳ್ಳಿಗೆ ಬಂದ ಡಾ.ರಾಜ್‍ಕುಮಾರ್ ಅವರಿಗೆ ಆನಂದವೋ ಆನಂದ. ಪುಟ್ಟ ಮಗುವಿನ ಹಾಗೆ ಖುಷಿ ಪಟ್ಟರು. ಜುಲೈ 30ರ ರಾತ್ರಿ ಎಲ್ಲರೊಂದಿಗೆ ನಗುನಗುತ್ತಾ ಊಟ ಮಾಡಿ ಮುಗಿಸಿ ತಾಂಬೂಲ ಮೆಲ್ಲುತ್ತ ಕುಳಿತಿದ್ದರು.

ಆಗ ಆ ದಟ್ಟ ಇರುಳಿನಲ್ಲಿ ನರಹಂತಕನು ತನ್ನ ಸಹಚರರೊಂದಿಗೆ ವರನಟನ ಮನೆಯಲ್ಲಿ ಪ್ರತ್ಯಕ್ಷನಾದ. ಆತನನ್ನು ಕಂಡು ರಾಜ್‍ಕುಮಾರ್ ಕುಟುಂಬಸ್ಥರ ಜಂಘಾಬಲ ಉಡುಗಿ ಹೋಯಿತು. ಆದರೆ, ಡಾ.ರಾಜ್‍ಕುಮಾರ್ ಮಾತ್ರ ಎಂದಿನಂತೆ ಪ್ರಶಾಂತವಾಗಿದ್ದರು. ಅಂತ ಮುಖಮುದ್ರೆಯನ್ನು ನೋಡಿ ನರಹಂತಕನ ಕಠಿಣ ಹೃದಯವೂ ಮೆತ್ತಗಾಯಿತು.

ಆತ ಅತ್ಯಂತ ಗೌರವದಿಂದ ಮಾತನಾಡುತ್ತ, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ನಾನು ಡಾ.ರಾಜ್‍ಕುಮಾರ್ ಅವರ ಅಪಹರಣ ಮಾಡುತ್ತಿದ್ದೇನೆ, ನನ್ನಿಂದ ಅವರಿಗೆ ಕಿಂಚಿತ್ತೂ ಅಪಾಯ ಆಗುವುದಿಲ್ಲ ಎಂದು ಹೇಳಿದ.

ಕಾಡುಗಳ್ಳನ ಮಾತಿಗೆ ಪ್ರತಿಯಾಡದ ಡಾ.ರಾಜ್ ಅವರು ನಡಿ ನಿನ್ನೊಂದಿಗೆ ಬರುತ್ತೇನೆ ಅಂದರು. ರಾಜ್‍ಕುಮಾರ್ ಅವರೊಂದಿಗೆ ಎಸ್.ಎ.ಗೋವಿಂದರಾಜ್, ನಾಗೇಶ್, ನಾಗಪ್ಪ ಅವರನ್ನು ಕರೆದುಕೊಂಡು ಆ ನರಹಂತಕನು ಅರಣ್ಯದ ಕಗ್ಗತ್ತಲಿನಲ್ಲಿ ಮಾಯವಾದ. ಈ ಘಟನೆಯಿಂದ ಪಾರ್ವತಮ್ಮ ರಾಜ್‍ಕುಮಾರ್ ಮತ್ತಿತರರು ವಿಚಲಿತರಾದರು.

ಕೋಟ್ಯಂತರ ಜನರ ಅಭಿಮಾನ, ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾಗಿದ್ದ ಕರುನಾಡಿನ ಕಣ್ಮಣಿ ಡಾ.ರಾಜ್‍ಕುಮಾರ್ ಅವರ ಅಪಹರಣವಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಲಕ್ಷ ಲಕ್ಷ ಅಭಿಮಾನಿಗಳು ಭಯ ವಿಹ್ವಲರಾದರು. ಉಭಯ ಸರ್ಕಾರಗಳು ನಡುಗಿ ಹೋದವು.

ಆ ಕಾಡುಗಳ್ಳನನ್ನು ಮಟ್ಟ ಹಾಕಿ ನಮ್ಮ ದೇವರನ್ನು ವಾಪಸ್ ಕರೆತರುತ್ತೇವೆ ಎಂದು ನಿರ್ಧರಿಸಿದ ಸಾವಿರಾರು ಜನರು ಅರಣ್ಯದತ್ತ ಧಾವಿಸಿದರು. ಇಡೀ ರಾಜ್ಯದಲ್ಲಿ ಆತಂಕದ ಜ್ವಾಲೆ ವ್ಯಾಪಿಸಿತು. ಅದನ್ನು ಹತೋಟಿಗೆ ತರಲು ಸರ್ಕಾರ ಹರಸಾಹಸ ಪಡಬೇಕಾಯಿತು.

ಆಗ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ವೀರಪ್ಪನ್ ನೀಡಿದ ಕ್ಯಾಸೆಟ್‍ನೊಂದಿಗೆ ಪಾರ್ವತಮ್ಮನವರು ಆ ನಡುರಾತ್ರಿಯಲ್ಲೇ ಬೆಂಗಳೂರಿಗೆ ಹೊರಟರು. ದೂರವಾಣಿ ಮೂಲಕ ತಮ್ಮ ಪುತ್ರರಿಗೆ ವಿಷಯ ತಿಳಿಸಿದರು. ಬೆಂಗಳೂರಿಗೆ ಬಂದ ಪಾರ್ವತಮ್ಮನವರು ಮುಖ್ಯಮಂತ್ರಿಗಳ ಭೇಟಿ ಮಾಡಿದರು.

ಅಜಾತಶತ್ರು ಡಾ.ರಾಜ್‍ಕುಮಾರ್ ಅವರನ್ನು ಬಂಧಮುಕ್ತಗೊಳಿಸುವ ಸಕಲ ಪ್ರಯತ್ನಗಳೂ ಪ್ರಾರಂಭವಾದವು. ಆ ವೇಳೆಗೆ ರಾಜ್ಯದ ಜನಜೀವನ ಸ್ತಬ್ಧವಾಗಿತ್ತು. ಎಲ್ಲಿ ನೋಡಿದರಲ್ಲಿ ಪ್ರತಿಭಟನೆ. ವೀರಪ್ಪನ್ ವಿರುದ್ಧ ತೀವ್ರ ಆಕ್ರೋಶ. ವರನಟನನ್ನು ಮುಟ್ಟುವ ಮೂಲಕ ವೀರಪ್ಪನ್ ಮೃತ್ಯುವನ್ನು ಮೈಮೇಲೆ ಎಳೆದುಕೊಂಡಿದ್ದ.

ಮುಖ್ಯಮಂತ್ರಿ ಕೃಷ್ಣ ಅವರು ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿ ಮಾಡುವ ಸಲುವಾಗಿ ಚೆನ್ನೈಗೆ ಹೊರಟರು. ನರಹಂತಕನನ್ನು ಬಗ್ಗುಬಡಿಯುವ ಸಲುವಾಗಿ ವಿಶೇಷ ಕಾರ್ಯಪಡೆ ರಚನೆ ಆಯಿತು.

ಎಷ್ಟೇ ಪ್ರಯತ್ನಿಸಿದರೂ ವೀರಪ್ಪನ್‍ನ ಅಡಗುದಾಣದ ಸುಳಿವು ಸಿಗಲಿಲ್ಲ. ಅವನ ಕಡೆಯಿಂದ ಕ್ಯಾಸೆಟ್ ರೂಪದಲ್ಲಿ ವಿಧವಿಧವಾದ ಬೇಡಿಕೆಗಳು ಮಾತ್ರ ಬರುತ್ತಿದ್ದವು. ಆ ಪೈಕಿ ಹಲವು ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಿದವು. ವರನಟನ ಸುರಕ್ಷಿತ ಬಿಡುಗಡೆಯೇ ಏಕಮಾತ್ರ ಗುರಿಯಾಗಿತ್ತು.

ಡಾ.ರಾಜ್‍ಕುಮಾರ್ ಅವರ ಬಿಡುಗಡೆ ವಿಳಂಬವಾಗುತ್ತಿದ್ದಂತೆ ನಾಗರಿಕರ ಆಕ್ರೋಶ ಎಲ್ಲೆ ಮೀರತೊಡಗಿತು. ಒಂದಲ್ಲ ಎರಡಲ್ಲ 108 ದಿನಗಳು ಉರುಳಿದವು. ಅಷ್ಟು ದಿನ ಆತಂಕದಲ್ಲೇ ಕಳೆಯಿತು. ಸಿನಿಮಾ ಚಟುವಟಿಕೆಗಳು ನಿಂತುಹೋಗಿದ್ದವು.

ರಾಜ್ಯದ ವಿವಿಧ ದೇವಾಲಯಗಳು, ಮಠ-ಮಾನ್ಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದವು. ಪುರೋಹಿತರು ಪ್ರಸಾದದೊಂದಿಗೆ ರಾಜ್ ನಿವಾಸಕ್ಕೆ ಬಂದು ಅದನ್ನು ಪಾರ್ವತಮ್ಮನವರಿಗೆ ನೀಡಿ ರಾಜ್‍ಕುಮಾರ್ ಅವರಿಗೆ ದೈವರಕ್ಷೆ ಇದೆ ಎಂದು ಹೇಳಿ ಹಿಂದಿರುಗುತ್ತಿದ್ದರು. ಗಣ್ಯಾತಿಗಣ್ಯರು ಹಿಂಡುಹಿಂಡಾಗಿ ಬಂದು ಹೋಗುತ್ತಿದ್ದರು.

ಶ್ರೀರಾಮಚಂದ್ರನು 14 ವರ್ಷ ವನವಾಸ ಅನುಭವಿಸಿದ ರೀತಿಯಲ್ಲಿ ಗಂಧರ್ವ ಪುರುಷ ಡಾ.ರಾಜ್‍ಕುಮಾರ್ ಅವರು ಅಜ್ಞಾತ ಅರಣ್ಯದಲ್ಲಿ 108 ದಿನ ಕಳೆದರು. ಅಲ್ಲೂ ಅವರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಿದ್ದರು. ನೀತಿಕಥೆಗಳನ್ನು ಹೇಳುತ್ತಿದ್ದರು.

ನಾನು ಎಂತಹ ಮಹಾ ಪುರುಷನನ್ನು ಕರೆತಂದಿದ್ದೇನೆ ಎಂದು ಸ್ವತಃ ವೀರಪ್ಪನ್‍ಗೇ ವಿಸ್ಮಯ ಆಗಿದ್ದಿರಬಹುದು. ಕಾರ್ಕೋಟಕವನ್ನು ಆಪೆÇೀಷನ ಮಾಡಿದ ನೀಲಕಂಠನ ರೀತಿಯಲ್ಲಿ ಡಾ.ರಾಜ್‍ಕುಮಾರ್ ಅವರು ಕಠೋರ ವನವಾಸವನ್ನು ಸಹಿಸಿಕೊಂಡರು.

ದೈವಶಕ್ತಿಯ ಎದುರು ದೈತ್ಯಶಕ್ತಿಯು ಮಣಿಯಲೇಬೇಕಾಯಿತು. 2000ರ ನವೆಂಬರ್ 15ರಂದು ಡಾ.ರಾಜ್‍ಕುಮಾರ್ ಅವರು ಗ್ರಹಣ ಮುಕ್ತ ಸೂರ್ಯನ ಹಾಗೆ ಅರಣ್ಯದಿಂದ ಹೊರಬಂದರು.

ಕನ್ನಡನಾಡಿನ ಗರಿಮೆಯಾಗಿದ್ದ ವರನಟನ ಬಿಡುಗಡೆಯಿಂದ ಇಡೀ ದೇಶವು ಸಂಭ್ರಮಿಸಿತು. ಕನ್ನಡ ಚಿತ್ರರಂಗಕ್ಕೆ ಮರಳಿ ಜೀವ ಬಂತು. ಈ ಅಪಹರಣದಿಂದ ರಾಜ್‍ಕುಮಾರ್ ಅವರಲ್ಲಿದ್ದ ದೈವೀಶಕ್ತಿಯನ್ನು ಇಡೀ ಜಗತ್ತೇ ನೋಡುವಂತಾಯಿತು. ಆ ಮಹಾ ಪುರುಷನಿಗೆ ಅನಂತಾನಂತ ನಮನಗಳು.

# ಭಾರತ ರತ್ನ ನೀಡಿ :
ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತ ಡಾ.ರಾಜ್‍ಕುಮಾರ್ ಅವರು ಬರೀ ಚಿತ್ರನಟರಾಗಿರಲಿಲ್ಲ. ಅವರು ಕನ್ನಡನಾಡಿನ ಹಿರಿಮೆ, ಗರಿಮೆಯಾಗಿದ್ದರು. ಶ್ರೇಷ್ಠ ಸಂಸ್ಕøತಿಯ ಪ್ರತೀಕವಾಗಿದ್ದರು. ಅವರ ಹುಟ್ಟು, ಬದುಕಿನ ಘಟನೆಗಳು ಇಂದಿಗೂ ಅಸಂಖ್ಯಾತ ಜನರ ಸ್ಫೂರ್ತಿ. ನಾಡು-ನುಡಿಗಾಗಿ ಅವರು ಮಾಡಿದ ಸೇವೆ, ತ್ಯಾಗ ಅಮೋಘ, ಅನನ್ಯ.

ಕನ್ನಡಿಗರ ಆರಾಧ್ಯ ದೈವವಾಗಿರುವ ಡಾ.ರಾಜ್‍ಕುಮಾರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಬಹಳ ದಿನಗಳಿಂದ ಕೇಳಿಬರುತ್ತಿದೆ. ಈ ವರ್ಷವೂ ಹಲವು ಗಣ್ಯರು ಒಕ್ಕೊರಲಿನಿಂದ ಈ ಒತ್ತಾಯ ಮಾಡಿದ್ದಾರೆ. ಇದು ಸಮಸ್ತ ಕನ್ನಡಿಗರ ಆಗ್ರಹ ಕೂಡ. ಆ ಬೇಡಿಕೆ ಶೀಘ್ರವಾಗಿ ಈಡೇರುವಂತಾಗಲಿ.

Facebook Comments

Sri Raghav

Admin