ಎರಡು ಮಾತಿಲ್ಲದೇ ಅರ್ಜುನನ ಪಾತ್ರಕ್ಕೆ ಓಕೆ ಎಂದಿದ್ದ ವರನಟ

ಈ ಸುದ್ದಿಯನ್ನು ಶೇರ್ ಮಾಡಿ

1957ನೆ ಇಸವಿ ಕೆ.ಎಂ.ನಾಗಣ್ಣನವರು ನಂದಿ ಪಿಕ್ಚರ್ಸ್ ಹೆಸರಿನಲ್ಲಿ ಶ್ರೀಕೃಷ್ಣ ಗಾರುಡಿ ಪೌರಾಣಿಕ ಚಿತ್ರ ಮಾಡಲು ಸಿದ್ಧರಾದರು. ಕೆ.ಎಂ.ನಾಗಣ್ಣನವರು ತುಂಬಾ ಸ್ವಾಭಿಮಾನಿ. ಅವರು ಯಾರಿಗೂ ತಲೆ ಬಗ್ಗಿಸ್ತಾ ಇರಲಿಲ್ಲ. ಅವರು ಹೇಳಿದ್ದೇ ನಡೀಬೇಕು.

ಏಳು ಗಂಟೆಗೆ ಷೂಟಿಂಗ್ ಪ್ರಾರಂಭವಾಗಬೇಕು ಅಂದ್ರೆ, ನಟ ನಟಿಯರು ಆ ವೇಳೆಗಾಗಲೇ ಮೇಕಪ್ ಮಾಡಿಸಿಕೊಂಡು ಶೂಟಿಂಗ್ ಸಮಯಕ್ಕೆ ಸರಿಯಾಗಿ ಸಿದ್ಧರಾಗಿರಬೇಕು. ನಾಗಣ್ಣನವರು 7 ಗಂಟೆಗೆ ಸರಿಯಾಗಿ ಶೂಟಿಂಗ್ ನಡೆಯುವ ಫ್ಲೋರ್ ಮುಂದೆ ಕುರ್ಚಿ ಹಾಕಿಕೊಂಡು ಕುಳಿತಿರುತ್ತಿದ್ದರು.

ಚಿತ್ರದ ನಿರ್ದೇಶನಕ್ಕೆ ಒಬ್ಬ ತಮಿಳು ಚಿತ್ರನಿರ್ದೇಶಕರನ್ನು ಗೊತ್ತು ಮಾಡಿಕೊಂಡಿದ್ದರು. ಅವರು ಮೂರು ದಿನಗಳಾದ ಮೇಲೆ ಷೂಟಿಂಗ್ ಸಮಯಕ್ಕೆ ಬರಲೇ ಇಲ್ಲ. ನಾಗಣ್ಣನವರು ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ಬರೆದಂಥಾ ಖ್ಯಾತ ಸಾಹಿತಿ ಹುಣಸೂರು ಕೃಷ್ಣಮೂರ್ತಿಗಳನ್ನು ಕರೆದು ರೀ ಹುಣಸೂರ್‍ರವರೇ ನಿರ್ದೇಶಕರು ಬರಲಿಲ್ಲ, ಏಳೂವರೆ ಆಯಿತು ಜವಾಬ್ದಾರಿ ಇಲ್ಲದ ವ್ಯಕ್ತಿ ನನಗೆ ಬೇಕಿಲ್ಲ.

ಹೇಗಿದ್ದರೂ ನೀವೇ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದಿದ್ದೀರಿ ಹೇಗೂ ನೀವೇ ಕನ್ನಡ ಸಾಹಿತಿ, ಚಿತ್ರ ನಿರ್ದೇಶನ ನೀವೇ ಮಾಡಿ, ನಿಮ್ಮ ಬಗ್ಗೆ ನನಗೆ ತುಂಬಾ ಗೌರವ, ನಿಮಗೆ ಸಮಯಪ್ರಜ್ಞೆ ಇದೆ, ನಟ ನಟಿಯರೆಲ್ಲಾ ನಿಮಗೆ ಗೊತ್ತಿರೋರೆ. ನೀವೇ ಈ ಚಿತ್ರಕ್ಕೆ ನಿರ್ದೇಶಕರು ಎಂದು ಹೇಳಿ (ಹುಣಸೂರು ಕೃಷ್ಣಮೂರ್ತಿಗಳು ನಿರ್ದೇಶಕರಾದುದು ಶ್ರೀಕೃಷ್ಣ ಗಾರುಡಿ ಚಿತ್ರದಿಂದ) ಹುಣಸೂರ್ ಅವರಿಗೆ ನಿರ್ದೇಶನದ ಜವಾಬ್ದಾರಿ ಕೊಟ್ಟರು.

2 ಗಂಟೆಯ ಮೇಲೆ ಎರಡನೆ ಪಾಳಿ ಷೂಟಿಂಗ್ ಪ್ರಾರಂಭ. ಆಗ ರಾಜಕುಮಾರರು ಷೂಟಿಂಗ್‍ಗೆ ಬಂದು ನಾಗಣ್ಣನವರನ್ನು ಮಾತನಾಡಿಸಿದರು. ನನಗೆ ಯಾವ ಪಾತ್ರ ? ಎಂದರು. ರಾಜಕುಮಾರರನ್ನು ಕಂಡರೆ ನಾಗಣ್ಣನವರಿಗೆ ತುಂಬಾ ಗೌರವ. ಆ ವೇಳೆಗಾಗಲೇ ರಾಜಕುಮಾರ್‍ರವರು 5-6 ಚಿತ್ರಗಳಲ್ಲಿ ಹೀರೋ ಆಗಿ ಹೆಸರು ಮಾಡಿದ್ದರು.

ಶ್ರೀಕೃಷ್ಣಗಾರುಡಿ ಚಿತ್ರದಲ್ಲಿ ಕೃಷ್ಣನ ಪಾತ್ರವೇ ಅಲ್ಲದೆ ಅರ್ಜುನ ಭೀಮಸೇನರ ಪಾತ್ರವೂ ಪ್ರಮುಖವಾದದ್ದೆ. ಶ್ರೀಕೃಷ್ಣನ ಪಾತ್ರಕ್ಕೆ ಎಲೆವಾಳ ಸಿದ್ಧಯ್ಯಸ್ವಾಮಿ ಎಂಬ ರಂಗಭೂಮಿಯ ನಟನನ್ನು ಆಯ್ಕೆ ಮಾಡಿ ಎರಡು ದಿನಗಳ ಚಿತ್ರೀಕರಣವೂ ಮುಗಿದಿತ್ತು. ರಾಜಕುಮಾರ್‍ರವರಿಗೇ ಶ್ರೀಕೃಷ್ಣನ ಪಾತ್ರ ನೀಡಲು ನಾಗಣ್ಣನವರು ಅಭಿಪ್ರಾಯಪಟ್ಟಿದ್ದರು.

ಸಿದ್ದಯ್ಯಸ್ವಾಮಿ ಶ್ರೀಕೃಷ್ಣನ ಪಾತ್ರ ಮಾಡಿಬಿಟ್ಟಿದ್ದರು. ಹಿಂದಿನ ನಿರ್ದೇಶಕ ಅವರನ್ನು ಆಯ್ಕೆ ಮಾಡಿದ್ದು ಶ್ರೀಕೃಷ್ಣನ ಪಾತ್ರದಷ್ಟೇ ಪ್ರಮುಖ ಪಾತ್ರ ಅರ್ಜುನನದು. ನಾಗಣ್ಣನವರಿಗೆ ರಾಜಕುಮಾರ್ ಪ್ರಶ್ನಿಸಿದಾಗ, ನೀವೇ ಅರ್ಜುನ, ಶ್ರೀಕೃಷ್ಣ ಸಿದ್ದಯ್ಯಸ್ವಾಮಿ ಆಗಿಬಿಟ್ಟ, ನೀವು ಅರ್ಜುನನ ಪಾತ್ರ ಮಾಡಬೇಕು.

ನಿಮಗೆ ಆ ಪಾತ್ರ ಇಷ್ಟವೇ. ಇಲ್ಲದೇ ಹೋದರೆ ಭೀಮನ ಪಾತ್ರ ಮಾಡಿ, ಎಂದರು ನಗುತ್ತ. ರಾಜಕುಮಾರರು ನಾನು ಯಾವುದೇ ಪಾತ್ರ ಮಾಡಬಲ್ಲೆ, ನೀವು ಹೇಳಿದ ಪಾತ್ರ ಹಾಗೂ ನಿರ್ದೇಶಕರು ನಾನು ಯಾವ ಪಾತ್ರಕ್ಕೆ ಯೋಗ್ಯ ಎಂದು ತೀರ್ಮಾನಿಸಿದರೆ ಅರ್ಜುನನ್ನೇ ನಾನು ಆರಿಸಿಕೊಳ್ತೀನಿ ಎಂದರು.

ನಿರ್ದೇಶಕ ಹುಣಸೂರರು ವೀರಣ್ಣ ಭೀಮನ ಪಾತ್ರಕ್ಕೆ ಸರಿಯಾಗಿದ್ದಾನೆ, ಅರ್ಜುನನೇ ಈ ಚಿತ್ರದಲ್ಲಿ ಕಥಾನಾಯಕ ಅವನ ಮೇಲೆ ಕಥೆ ಸಾಗುತ್ತೆ, ರಾಜಕುಮಾರ್ ಅರ್ಜುನನೇ ಆಗಲಿ, ಅಲ್ಲದೆ ಅರ್ಜುನ ರಾಕ್ಷಸಿ ಪಾತ್ರದ ರೇವತಿ ಅವರನ್ನು ಹೊತ್ತುಕೊಳ್ಳುವ ದೃಶ್ಯವಿದೆ. ಅದು ಇವರಿಗೇ ಸರಿ ಅಂತೀನಿ ಅಂದರು.

ರಾಜ್‍ಕುಮಾರ್ ನಗುತ್ತ ರೇವತಿ ಅವರು ರಾಕ್ಷಸೀನೇ ಅವರನ್ನು ನಾನು ಹೊತ್ಕೋಬೇಕಾಗುತ್ತೆ, ಹೊತ್ತುಕೊಂಡು ಹೋಗೋದು, ಮಾಡೋಣ ಬಿಡಿ ಎಂದಾಗ ನಂದಿ ನಾಗಣ್ಣನವರು ಹೊತ್ತುಕೊಂಡು ಹೋಗೋ ದೃಶ್ಯ ಸ್ವಲ್ಪ ಕಷ್ಟ ಆಯಮ್ಮ ಒಳ್ಳೆ ಸೈಜು ಎಂದರು.

ರಾಜ್‍ಕುಮಾರ್ ಅವರನ್ನ ಕರೆಸಿ ಒಂದು ಸಾರಿ ಅವರ್ನ ಹೊತ್ತುಕೊಂಡು ನೋಡೇಬಿಡೋಣ ಎಂದರು. ಈವಾಗ ಬೇಡ ಕ್ಯಾಮರಾ ಮುಂದೆ ಆಗಲಿ ರಿಹರ್ಸಲ್ ಎಂದು ಅವರೂ ನಕ್ಕರು. ಏನ್ರಪ್ಪ ನಿಮಗೆ ಅರ್ಜುನನ ಪಾತ್ರ ಇಷ್ಟವಾಯ್ತಾ? ಎಂದಾಗ, ರಾಜಕುಮಾರರು ರೇವತಿ ಅವವರನ್ನ ಹೊತ್ಕೊಳ್ಳೊ ಸೀನ್ ನಿಭಾಯಿಸಿದ್ರೆ ನಾನೇ ಅರ್ಜುನ.

ಮಾಡೋಣ ಯಾವ ಪಾತ್ರ ಆದ್ರೇನು ನಾವು ಕಲಾವಿದರು ನಿರ್ದೇಶಕರು ಹೇಳಿದ ಹಾಗೆ ಹೊತ್ತುಕೊಳ್ಳೋದು, ಕೆಳಗೆ ಇಳಿಸು ಅಂದಾಗ ಇಳಿಸೋದು ಎಂದರು.

ಹುಣಸೂರು ಕೃಷ್ಣಮೂರ್ತಿ ಮೊಟ್ಟ ಮೊದಲು ನಿರ್ದೇಶನ ಮಾಡಿದ ಶ್ರೀಕೃಷ್ಣ ಗಾರುಡಿ ಭವ್ಯ ಚಿತ್ರವಾಗಿ ಬಿಡುಗಡೆ ಆಯಿತು. ಅವರಿಗೂ ಒಳ್ಳೆ ಹೆಸರು ಬಂತು. ರಾಜಕುಮಾರ್‍ರವರು ಶ್ರೀಕೃಷ್ಣನನ್ನು ಮೀರಿಸಿ ಅಭಿನಯಿಸಿದ್ದರು. ರಾಜ್‍ಕುಮಾರರು ಅರ್ಜುನನ ಮೇಕಪ್‍ನಲ್ಲಿ ತುಂಬಾ ಚೆನ್ನಾಗೇ ಕಂಡರು.

Facebook Comments

Sri Raghav

Admin