ರಾಜ್‍ಕುಮಾರ್ ಕಣ್ಣಲ್ಲಿ ಆನಂದ ಬಾಷ್ಪ ತರಿಸಿತ್ತು ಆ ಘಟನೆ..!

ಈ ಸುದ್ದಿಯನ್ನು ಶೇರ್ ಮಾಡಿ

– ಸಿ.ವಿ. ಶಿವಶಂಕರ್,
ಚಿತ್ರಸಾಹಿತಿ, ನಿರ್ದೇಶಕ, ನಿರ್ಮಾಪಕ
ರಾಧಾಕೃಷ್ಣ ಎಂಬ ನಿರ್ಮಾಪಕರು ಸುಂದರರಾವ್ ನಾಡಕರ್ಣಿ ಎಂಬ ನಿರ್ದೇಶಕರನ್ನು ಸಂತ ತುಕಾರಾಂ ಚಿತ್ರಕ್ಕೆ ಗೊತ್ತು ಮಾಡಿಕೊಂಡು ಮರಾಠಿ ಸಂತ ತುಕಾರಾಂ ಚಿತ್ರ ಚಿತ್ರೀಕರಣವಾಗಿದ್ದ ಮಹಾರಾಷ್ಟ್ರದ ಪರಿಸರದಲ್ಲೆ ತುಕಾರಾಂ ಕನ್ನಡ ಚಿತ್ರವನ್ನು ನಿರ್ಮಿಸಲು ವಿ. ಶಾಂತಾರಾಂರವರ ಶಾಲಿನಿ ಸ್ಟುಡಿಯೋಕ್ಕೆ ಕರೆದುಕೊಂಡು ಹೋದರು. ಕೊಲ್ಲಾಪುರದಲ್ಲಿದ್ದ ಆ ಸ್ಟುಡಿಯೋದಲ್ಲಿ ಸಂತ ತುಕಾರಾಂ ಷೂಟಿಂಗ್ ಪ್ರಾರಂಭವಾಯಿತು.

ರಾಜ್‍ಕುಮಾರ್, ಲೀಲಾವತಿ, ಪಂಢರಿಬಾಯಿ, ಬಾಲಕೃಷ್ಣ, ಕೆ.ಎಸ್.ಅಶ್ವತ್ಥ್, ಶಿವಶಂಕರ್, ವಾದಿರಾಜ್ ಇವರೆಲ್ಲರನ್ನು ಸ್ಟುಡಿಯೋ ಪಕ್ಕದಲ್ಲಿದ್ದ ಒಂದು ದೊಡ್ಡ ಹಾಲಿನಲ್ಲಿ (ಆಸ್ಪತ್ರೆಯಂತಿದ್ದ ವಾರ್ಡ್) 20 ಮಂಚಗಳನ್ನು ಸಿದ್ಧಪಡಿಸಿ ಕಲಾವಿದರಿಗೆ ಅದನ್ನೆ ವಸತಿಗೃಹವನ್ನಾಗಿ ಮಾಡಿದ್ದರು. ಪಕ್ಕದಲ್ಲೆ ಒಂಡು ಅಡಿಗೆ ಮನೆ. ಆದರೆ ಮೊದಲ ನಾಲ್ಕು ದಿನ ರಾಜ್‍ಕುಮಾರ್ ಷೂಟಿಂಗ್ ಇರಲಿಲ್ಲ. ಅವರು ಮದ್ರಾಸಿನಿಂದ ಬರಲಿಲ್ಲ.

ಬಾಲಕೃಷ್ಣ, ವಾದಿರಾಜ್, ಸಿ.ವಿ.ಶಿವಶಂಕರ್‍ರವರ ಚಿತ್ರೀಕರಣ. ಚಿ.ಉದಯಶಂಕರ್‍ರವರು ಸಾಹಿತ್ಯ ಬರೆದ ಮೊದಲನೇ ಚಿತ್ರ. ಡಿ.ವಿ.ರಾಜÁರಾಂರವರೇ ಛಾಯಾಗ್ರಾಹಕರು.  ಮಹಾರಾಷ್ಟ್ರ ಪರಿಸರದಲ್ಲೇ ಕನ್ನಡ ಸಂತ ತುಕಾರಾಮ ಸಿದ್ಧವಾಗಬೇಕೆಂದು ಹಠ ಹಿಡಿದಿದ್ದ ಸುಂದರರಾವ್ ನಾಡಕರ್ಣಿರವರು ಕೆಲಸ ಮಾಡುವುದರಲ್ಲಿ ತುಂಬಾ ನಿಧಾನ. ಬಾಗಿಲು ಹಾಕಿದ್ದ ಸ್ಟುಡಿಯೋವನ್ನು ರೀ ಓಪನ್ ಮಾಡಿದರು. ಧೂಳು ಹಿಡಿದಿದ್ದ ಡಬರಾ ಕ್ಯಾಮರಾವನ್ನು ಷೂಟಿಂಗ್‍ಗೆ ಸಿದ್ಧಪಡಿಸಿಕೊಂಡರು.

ಮೊದಲನೆ ದಿನ ಬಾಲಕೃಷ್ಣ, ವಾದಿರಾಜ್, ಶಿವಶಂಕರರ ಷೂಟಿಂಗ್. ಬಾಲಕೃಷ್ಣರಿಗೆ ಅಂಟಿಸಿದ್ದ ಗಡ್ಡವನ್ನು ಸ್ಕೇಲ್ ಹಿಡಿದು ಇಷ್ಟೇ ಇರಬೇಕು ಗಡ್ಡ ಸ್ವಲ್ಪ ಕಡಿಮೆ ಇದೆ. ಉದ್ದ ಮಾಡಿಸಿಕೊಂಡು ಬನ್ನಿ ಎಂದು ತಕರಾರು ತೆಗೆದರು. ಕಲಾವಿದರು ಮೇಕಪ್ ಆದ ಮೇಲೆ ಸೈನ್ಯಕ್ಕೆ ಸೇರುವ ಯುವಕರನ್ನು ಪರೀಕ್ಷಿಸುವಂತೆ ತಮ್ಮ ಎದುರಿಗೆ ನಿಲ್ಲಿಸಿಕೊಂಡು ಅವರು ಪಾತ್ರದ ಉಡಿಗೆ ತೊಡಿಗೆ ಒಪ್ಪಿಗೆಯಾಗಿದೆ ಎಂದ ಮೇಲೆ ಷೂಟಿಂಗ್ ಅಂಥಾ ಮಿಲ್ಟ್ರಿ ನಿರ್ದೇಶಕರು ನಾಡಕರ್ಣಿಯವರು.
ಇವರ ಮೇಲ್ವಿಚಾರಣೆಯಿಂದ ಕಲಾವಿದರಿಗೆ ತುಂಬಾ ಬೇಸರವಾಗುತ್ತಿತ್ತು.

ಬಾಲಕೃಷ್ಣರವರಿಗಂತೂ ನಿರ್ದೇಶಕರ ಎದುರಿಗೆ ನಿಂತು ಪೆರೇಡ್ ಮಾಡೋದು ಇಷ್ಟವಿರಲಿಲ್ಲ. ರಾಜ್‍ಕುಮಾರರು ಪಾಂಡುರಂಗ ಎಂದು ತಂಬೂರಿ ಮೀಟಿಕೊಂಡು ಹೇಳುವಾಗ ಹೀಗೆ ಹೇಳಿ ಹಾಗೆ ಹೇಳಿ ಎಂದು ಸಂಗೀತ ಜ್ಞಾನವಿರುವ ರಾಜ್‍ಕುಮಾರ್‍ರವರಿಗೇ ಶೃತಿ ಸೇರಿಸಿ ಹೇಳಿ ಅಂತ ಸರ್ಕಸ್ ಮಾಡಿಸುತ್ತಿದ್ದರು.

ತುಕಾರಾಮ ಅಭಂಗಗಳನ್ನು ನೀರಿನಲ್ಲಿ ಮುಳುಗಿಸುವಾಗ ಒಂದು ಕೊಳಚೆ ಹೊಂಡದಲ್ಲಿ ಅವರನ್ನು ನಿಲ್ಲಿಸಿ ತಾವು ಬೇರೆಲ್ಲಿಗೋ ಹೋಗಿ ಬಿಡುತ್ತಿದ್ದರು. ರಾಜ್‍ಕುಮಾರ್‍ರವರು ತನ್ಮಯತೆಯಿಂದ ಹೊಂಡದಲ್ಲಿ ಜಿಗಣೆ ಮೀನುಗಳಿಂದ ಕಡಿಸಿಕೊಂಡರೂ ನೀರಿನಲ್ಲಿ ನಿಂತುಕೊಂಡೇ ಪಾತ್ರ ಮಾಡಬೇಕಿತ್ತು. ರಾಜ್‍ಕುಮಾರರಿಗೆ ಬೇಸರವಾದರು ತುಕಾರಾಮನ ಪಾತ್ರಕ್ಕೆ ಎಲ್ಲಿಯೂ ಅಪಚಾರವಾಗದಂತೆ ಅಭಿನಯಿಸುತ್ತಿದ್ದರು.

ಸ್ಟುಡಿಯೋದಿಂದ ಹೊರಗೆ ಜೋಳದ ಹೊಲದಲ್ಲಿ ರಾಜ್ ತನ್ಮಯರಾಗಿ ಅಭಿನಯಿಸುತ್ತಿರುವಾಗ ಅವರ ಪಕ್ಕದಲ್ಲಿ ಬೆಂಕಿ ಹತ್ತಿಕೊಂಡರೂ ರಾಜ್‍ರವರು ಅಭಿನಯದಲ್ಲಿ ತಲ್ಲೀನರಾಗಿರುತ್ತಿದ್ದರು. ದುರಾದೃಷ್ಟ ಕೊಲ್ಲಾಪುರದ ಸ್ಟುಡಿಯೋ ಡಬರಾ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಿದ ನೆಗೆಟೀವ್‍ಗಳು ಕೆಟ್ಟು ಹೋಗಿದ್ದವು. ಮತ್ತೆ ಮದ್ರಾಸಿನಲ್ಲಿ ವಾಹಿನಿ ಸ್ಟುಡಿಯೋದಲ್ಲಿ ಸೆಟ್ ಹಾಕಿ ಮತ್ತೊಮ್ಮೆ ಕೊಲ್ಲಾಪುರದಲ್ಲಿ ತೆಗೆದ ದೃಶ್ಯಗಳನ್ನು ರೀಷೂಟ್ ಮಾಡಬೇಕಾಯಿತು. ರಾಜ್‍ಕುಮಾರ್‍ರವರು, ಕೆ.ಎಸ್. ಅಶ್ವತ್ಥ್‍ರವರು, ಲೀಲಾವತಿ, ಪಂಢರಿಬಾಯಿ, ಬಾಲಕೃಷ್ಣ ಇವರು ಅಭಿನಯಿಸಿದ ದೃಶ್ಯಗಳನ್ನು ನಿರ್ದೇಶಕರು ಮತ್ತೊಮ್ಮೆ ಚಿತ್ರೀಕರಿಸಿದರು.

ಚಿತ್ರವು ಸಿದ್ಧವಾದ ಮೇಲೆ ವಾಹಿನಿ ಸ್ಟುಡಿಯೋದಲ್ಲಿ ಎಲ್ಲ ಕಲಾವಿದರಿಗೆ ತಂತ್ರಜ್ಞರಿಗೆ ಮೊದಲನೇ ಪ್ರದರ್ಶನ ಏರ್ಪಡಿಸಿದ್ದರು. ಯಾವುದೇ ಕನ್ನಡ ಚಿತ್ರ ಸಿದ್ಧವಾಗಿ ಬೆಂಗಳೂರಿಗೆ ಕಳಿಸುವ ಮೊದಲು ಆ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರಿಗೆ ತಂತ್ರಜ್ಞರಿಗೆ ತೋರಿಸುತ್ತಾರೆ. ಆಗ ಕಲಾವಿದರು ಅವರ ಕುಟುಂಬದ ಸದಸ್ಯರನ್ನು ಕರೆದುಕೊಂಡು ಬಂದು ಚಿತ್ರ ತೋರಿಸುತ್ತಾರೆ. ಅದೇ ರೀತಿ ಸಂತ ತುಕಾರಾಂ ಚಿತ್ರ ಸೆನ್ಸಾರ್ ಆಗಿ ಮೊದಲನೇ ಪ್ರತಿ ವಾಹಿನಿ ಸ್ಟುಡಿಯೋದಲ್ಲಿ ಪ್ರದರ್ಶನ ಮಾಡಲಾಯಿತು.

ನಿರ್ದೇಶಕ ಸುಂದರರಾವ್ ನಾಡಕರ್ಣಿ, ನಿರ್ಮಾಪಕ ರಾಧಾಕೃಷ್ಣನ್‍ರವರು ರಾಜ್‍ಕುಮಾರ್, ಬಾಲಕೃಷ್ಣ, ಪಂಢರಿಬಾಯಿ, ಶಿವಶಂಕರ, ವಾದಿರಾಜ್, ಉದಯಕುಮಾರ್, ಕೆ.ಎಸ್. ಅಶ್ವತ್ಥ್‍ರವರು, ಚಿ. ಉದಯಶಂಕರ್, ಡಿ.ವಿ.ರಾಜÁರಾಂ ಅನೇಕ ತಂತ್ರಜ್ಞರು ಎಲ್ಲರೂ ಚಿತ್ರ ನೋಡಲು ಕುಳಿತಿದ್ದಾರೆ. ಸಂತ ತುಕಾರಾಂ ಕನ್ನಡ ಚಿತ್ರ ಪರದೆಯ ಮೇಲೆ ಪ್ರತ್ಯಕ್ಷವಾಯಿತು.

ರಾಜ್‍ಕುಮಾರ್‍ರವರು, ರಾಜಶ್ರೀ, ಬಾಲಕೃಷ್ಣ, ಪಂಢರಿಬಾಯಿ, ಲೀಲಾವತಿ ಅವರೆಲ್ಲ ಅಭಿನಯಿಸಿದ್ದ ಪ್ರತಿಯೊಂದು ದೃಶ್ಯಗಳೂ ಅದ್ಭುತವಾಗಿ ಮೂಡಿಬಂದಿತ್ತು. ರಾಜ್‍ಕುಮಾರ್‍ರವರ ಪಾತ್ರವಂತೂ (ಪ್ರತಿಯೊಂದು ದೃಶ್ಯಗಳೂ) ಹೃದಯಕ್ಕೆ ತಾಕಿ ಪುಳಕಿತಗೊಳಿಸುತ್ತಿತ್ತು. ರಾಜ್‍ಕುಮಾರ್‍ರವರ ಅವರ ಪಾತ್ರವನ್ನು ನೋಡುತ್ತಾ ಅವರೇ ಅಚ್ಚರಿಗೊಂಡು ತನ್ಮಯರಾಗಿ ಚಿತ್ರ ನೋಡುತ್ತಿದ್ದರು.

ಚಿತ್ರವನ್ನು ನಿರ್ದೇಶಿಸಿದ್ದ ಸುಂದರರಾವ್ ನಾಡಕರ್ಣಿ ಅವರು ಚಿತ್ರೀಕರಣದ ವೇಳೆಯಲ್ಲಿ ಕಲಾವಿದರನ್ನು ಸತಾಯಿಸಿ ಅವರಿಂದ ತಮಗೆ ಬೇಕಾದಂತೆ ಪಾತ್ರ ಮಾಡಿಸಿದ್ದರು. ಅದರಿಂದ ಕೆಲವು ಕಲಾವಿದರಿಗೆ ಚಿತ್ರೀಕರಣದ ವೇಳೆಯಲ್ಲಿ ಬೇಸರವಾಗಿತ್ತು. ರಾಜ್‍ಕುಮಾರ್‍ರವರು ಚಿತ್ರವನ್ನು ಕಣ್ಣು ಮಿಟಿಕಿಸದಂತೆ ನೋಡುತ್ತಿದ್ದರು. ಅವರ ಪಾತ್ರವನ್ನು ನೋಡಿ ಅವರ ಕಣ್ಣುಗಳಲ್ಲೇ ಹನಿ ಉದುರುತ್ತಿತ್ತು.

ಕಡೇ ದೃಶ್ಯದಲ್ಲಿ ತುಕಾರಾಮ ವೈಕುಂಠಕ್ಕೆ ಹೋಗುವ ಪುಷ್ಪಕ ವಿಮಾನದ ದೃಶ್ಯದಲ್ಲಿ ನಮಸ್ಕಾರ ಎಂದು ಹೇಳುವ ದೃಶ್ಯದಲ್ಲಿ ಅವರು ಬಿಕ್ಕಳಿಸಿಕೊಂಡು ಅತ್ತುಬಿಟ್ಟರು. ಪಕ್ಕದಲ್ಲೇ ಕುಳಿತಿದ್ದ ಸುಂದರರಾವ್ ನಾಡಕರ್ಣಿ ಅವರು ಯಾಕೆ ತುಕಾರಾಂ ನಿಮ್ಮ ಕಣ್ಣಲ್ಲಿ ನೀರು ಎಂದರು.

ರಾಜ್‍ಕುಮಾರ್‍ರವರು ಇದು ಕಣ್ಣೀರಲ್ಲ ಆನಂದ ಬಾಷ್ಪ. ನನ್ನಂಥ ಸಾಮಾನ್ಯನ ಕೈಲಿ ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡಿಸಿದ್ದೀರಾ ನನಗೆ ಬಾಯಲ್ಲಿ ಮಾತೇ ಹೊರಡ್ತಾ ಇಲ್ಲ. ನಮ್ಮ ಅಪ್ಪಾಜಿ ಈ ಚಿತ್ರ ನೋಡಿದ್ದಿದ್ರೆ ಅವರೂ ತುಕಾರಾಂ ಆಗಿಬಿಡ್ತಿದ್ರು. ನಿಮ್ಮ ಶ್ರದ್ಧೆಗೆ ಸಾಷ್ಟ್ರಾಂಗ ವಂದನೆಗಳು. ನಾನು ಚಿತ್ರೀಕರಣದ ವೇಳೆ ನಿಮಗೆ ತುಂಬಾ ತೊಂದ್ರೆ ಕೊಟ್ಟಿದ್ದೇನೆ. ಈಗ ಚಿತ್ರ ನೋಡಿದಾಗ ನಿಮ್ಮ ತಲೇಲಿದ್ದ ತುಕಾರಾಮನನ್ನು ನೀವು ಪ್ರತ್ಯಕ್ಷ ಮಾಡಿಬಿಟ್ಟಿದ್ದೀರಿ. ಎಲ್ಲ ಕಲಾವಿದರಲ್ಲೂ ನಿಮ್ಮ ಇಷ್ಟ ಪ್ರಕಾರ ಕೆಲಸ ಮಾಡಿಸಿದ್ದೀರಿ.

ನಿಮ್ಮ ತಾಳ್ಮೆ ದೂರದೃಷ್ಟಿ, ಚಿಂತನೆಗಳ ಬಗ್ಗೆ ನಮಗೆ ಏನು ಹೇಳಬೇಕೂಂತಲೇ ತಿಳೀತಿಲ್ಲ. ಚಿತ್ರ ನೋಡಿದ ಮೇಲೆ ನಮ್ಮ ಬಾಯಿಂದ ಒಂದೇ ಮಾತು ಸುಂದರರಾವ್ ನಾಡಕರ್ಣಿಗಳೇ ಸಂತ ತುಕಾರಾಂ ಅಂತ ಹೇಳಿ ನಾಡಕರ್ಣಿಗಳಿಗೆ ಕೈಮುಗಿದರು. ನಿರ್ಮಾಪಕ ರಾಧಾಕೃಷ್ಣರವರು ನಮ್ಮ ನಿರ್ದೇಶಕರು ಮರಾಠಿ ತುಕಾರಾಂ ಚಿತ್ರಕ್ಕಿನ್ನ ಕನ್ನಡ ಸಂತ ತುಕಾರಾಮನನ್ನು ಸುಂದರವಾಗೇ ಮಾಡಿದ್ದಾರೆ ಎಂದರು.

ಆ ವೇಳೆಗೆ ಬಾಲಕೃಷ್ಣರವರು ನಟಿ ರಾಜಶ್ರೀಗೆ ನೀನು ಬೇಡ ಕೃಷ್ಣ ಅಂತ ಕುಣಿದೆಂತೆಲ್ಲಾ ಆ ಹಾಡು ಸೊಗಸಾಗಿದೆ ಎಂದು ಹೇಳ್ತಾ ಇದ್ದ ಮಾತು ಸುಂದರರಾವ್ ನಾಡಕರ್ಣಿಗಳ ಕಿವಿಗೆ ಬಿತ್ತು. ಬಾಲಕೃಷ್ಣರವರಿಗೆ ನನ್ನ ಮೇಲೆ ತುಂಬಾ ಕೋಪ ಷೂಟಿಂಗ್‍ನಲ್ಲಿ ನಾನು ಅವರಿಗೆ ಬೇಜಾರು ಮಾಡಿದ್ದೇನೆ ಎಂದರು. ಬಾಲಕೃಷ್ಣರು ಸುಮ್ಮನೆ ನಕ್ಕರು. ಚಿತ್ರ ನೋಡಿ ಹೋದ ಎರಡು ದಿನದವರೆಗೂ ರಾಜ್‍ಕುಮಾರ್ ಅವರಿಗೆ ಅವರ ತುಕಾರಾಮನ ಪಾತ್ರವೇ ಕಣ್ಣೆದುರಿಗೆ ಬರುತ್ತಿತ್ತು. ನಿರ್ದೇಶಕರ ದೂರದೃಷ್ಟಿ, ತಾಳ್ಮೆ ಮೆಚ್ಚಬೇಕಾದ್ದೇ ಎನ್ನುತ್ತಿದ್ದರಂತೆ.

Facebook Comments

Sri Raghav

Admin