ಕೃಷ್ಣ, ಕಾವೇರಿ ಶುದ್ಧೀಕರಣಕ್ಕೆ ಬೃಹತ್ ಯೋಜನೆ : ಸುರೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ಗಂಗಾ ನದಿಯ ಪುನಶ್ಚೇತನದ ಮಾದರಿಯಲ್ಲೇ ಕರ್ನಾಟಕದ ಕೃಷ್ಣ, ಕಾವೇರಿ ಸೇರಿದಂತೆ ದೇಶದ 13 ನದಿಗಳನ್ನು ಅರಣ್ಯಾಭಿವೃದ್ಧಿ ಮೂಲಕ ಪುನಶ್ಚೇತನಗೊಳಿಸಲು ಬೃಹತ್ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತಿನ ಮಹಾನಿರ್ದೇಶಕ ಡಾ.ಸುರೇಶ್ ಗೈರೋಲ ಹೇಳಿದರು.

ನಗರದ ಮರವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾನದಿಯ ಪುನಶ್ಚೇತನಕ್ಕಾಗಿ ಮರವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿತ್ತು. ಗಂಗಾ ಯೋಜನೆ ಯಶಸ್ವಿಯಾಗಿದ್ದು, ಈಗ ಅದೇ ಮಾದರಿಯಲ್ಲಿ ದೇಶಾದ್ಯಂತ 13ಕ್ಕೂ ಹೆಚ್ಚು ಪ್ರಮುಖ ನದಿಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಅದರಲ್ಲಿ ಕೃಷ್ಣ, ಕಾವೇರಿ ಕೂಡ ಸೇರಿವೆ ಎಂದರು.

ನದಿಯ ಎರಡೂ ಕಡೆಯ ದಂಡೆಗಳಲ್ಲಿ ಮರಗಳನ್ನು ಬೆಳೆಸುವುದು, ಅಂತರ್ಜಲ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನದಿಗಳ ಪುನಶ್ಚೇತನ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಳಿವಿನ ಅಂಚಿನಲ್ಲಿರುವ ಮರಗಳ ಪ್ರಭೇದಗಳನ್ನು ಗುರುತಿಸಿ ಅವುಗಳ ಬೀಜ ಹಾಗೂ ಕಾಂಡಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯನ್ನು ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಆ ಯೋಜನೆ 2020ರ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಅದನ್ನು ದೇಶಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.

ಕರ್ನಾಟಕದಲ್ಲಿರುವ ಅಪರೂಪದ ಮರದ ತಳಿಗಳನ್ನು ರಕ್ಷಿಸುವ ಯೋಜನೆಯ ಬಗ್ಗೆ ಈಗಾಗಲೇ ಕಾರ್ಯ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದು ಅವರು ಹೇಳಿದರು. ಹೊಸ ಅರಣ್ಯ ನೀತಿಯನ್ನು ಈಗಾಗಲೇ ತಯಾರಿಸಲಾಗುತ್ತಿದೆ. 1988ರಲ್ಲಿ ರಚಿಸಲಾಗಿದ್ದ ನೀತಿಯನ್ನು ಮಾರ್ಪಡಿಸಿ ಹೊಸ ನೀತಿ ರೂಪಿಸಲಾಗಿದೆ. ಇದರಲ್ಲಿ ಹವಾಮಾನ ಬದಲಾವಣೆ, ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸುವ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ ಕರಡು ನೀತಿ ಸಿದ್ಧಗೊಂಡಿದ್ದು, ಶೀಘ್ರವೇ ಅಧಿಕೃತವಾಗಿ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಶ್ರೀಗಂಧ ಹಾಗೂ ಇತರ ಬೆಲೆ ಬಾಳುವ ಮರಗಳ ಕಳ್ಳತನ ತಪ್ಪಿಸಲು ಚಿಪ್ ಅಳವಡಿಸುವ ಯೋಜನೆಯನ್ನು ಕಾಫಿ ಸಂಸ್ಥೆಯ ಸಹಯೋಗದಲ್ಲಿ ಜಾರಿಗೊಳಿಸಲಾಗಿತ್ತು. ಆದರೆ, ಈ ಚಿಪ್‍ಗಳಿಂದ ಸಂದೇಶಗಳು ತಲುಪುವ ವೇಳೆಗೆ ಕಳ್ಳರು ಮರಗಳನ್ನು ಕಳ್ಳತನ ಮಾಡುತ್ತಿದ್ದರು. ಹೀಗಾಗಿ ಸಂದೇಶ ತಲುಪುವ ಅವಧಿಯನ್ನು ಮತ್ತಷ್ಟು ವೇಗಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಮರವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ನಿರ್ದೇಶಕ ಡಾ.ಎಂ.ಪಿ.ಸಿಂಗ್ ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments