ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ ಸೇವೆಗೆ ಸಂದ ಗೌರವ : ಕಣ್ವ ಡಾ.ಎಚ್.ಎಂ ವೆಂಕಟಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ರಾಜ್ಯ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ತಮಗೆ ನೀಡುತ್ತಿರುವುದು ವೈದ್ಯಕೀಯ ಸೇವೆಗೆ ಸಂದ ಗೌರವವಾಗಿದೆ ಎಂದು ಕಣ್ವ ಡಯೋಗ್ನಾಸ್ಟಿಕ್ ಸರ್ವಿಸಸ್ ವ್ಯವಸ್ಥಾಪಕ ನಿರ್ದೇಶಕ  ಡಾ.ಎಚ್.ಎಂ ವೆಂಕಟಪ್ಪ ಅವರು ತಿಳಿಸಿದರು.

2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ವೆಂಕಟಪ್ಪನವರು ಈ ಸಂಜೆಯೊಂದಿಗೆ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ತಾವು ಸಲ್ಲಿಸಿದ ಸುದೀರ್ಘ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡುತ್ತಿದೆ ಎಂದರು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿರುವುದನ್ನು ಸರ್ಕಾರ ಪರಿಗಣಿಸಿದೆ ಎಂದು ಹೇಳಿದರು.

ವೆಂಕಟಪ್ಪನವರ ಪರಿಚಯ:
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದ ಚೆನ್ನಮ್ಮ ಮತ್ತು ಮಂಚೇಗೌಡರ ಸುಪುತ್ರರಾಗಿ 1945 ಅಕ್ಟೋಬರ್ 2ರಂದು ವೆಂಕಟಪ್ಪ ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹೊಂಗನೂರು ಗ್ರಾಮದಲ್ಲಿ ಪಡೆದ ಅವರು ಪ್ರೌಢ ಶಿಕ್ಷಣವನ್ನು ಚನ್ನಪಟ್ಟಣ ಪ್ರೌಢಶಾಲೆಯಲ್ಲಿ ಪಡೆದು ನಂತರ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದ 2ನೇ ರ್ಯಾಂಕ್ ಅಭ್ಯರ್ಥಿಯಾಗಿ ಪಡೆದಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಷನ್ ವಿಷಯದಲ್ಲಿ ಎಂಡಿ ಪದವಿಯನ್ನು ಗಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಸರ್ಕಾರಿ ಸೇವೆ ಪ್ರಾರಂಭಿಸಿದ್ದರು. ನಂತರ ಸರ್ಕಾರಿ ಸೇವೆಯಲ್ಲಿ 24 ವರ್ಷ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡಿ 1994ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ 1978ರಿಂದ 1989ರವರೆಗೆ 11 ವರ್ಷಗಳ ಸತತ ದೀರ್ಘಾವಧಿಯಲ್ಲಿ ಗ್ರಾಮಾಂತರ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆಯನ್ನು ಸಲ್ಲಿಸಿರುತ್ತಾರೆ.

1989 ರಿಂದ 1992ರವರೆಗೆ ಸಾರ್ವಜನಿಕ ಆಸ್ಪತ್ರೆ ಚನ್ನಪಟ್ಟಣದಲ್ಲಿ ವೈದ್ಯಾಧಿಕಾರಿಯಾಗಿದ್ದರು. ಆ ಸಮಯದಲ್ಲಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸೌಲಭ್ಯಗಳ ಕೊರತೆಯನ್ನು ಗಮನಿಸಿ ಆಸ್ಪತ್ರೆಯ 50 ಹಾಸಿಗೆಗಳಿಂದ ಕೂಡಿದ ಸೌಲಭ್ಯವನ್ನು 100 ಹಾಸಿಗೆಗಳ ಸೌಲಭ್ಯಕ್ಕೆ ಅಭಿವೃದ್ಧಿ ಪಡಿಸಲು ಕಾರಣರಾಗಿದ್ದರು.

24 ವರ್ಷಗಳ ಸುದೀರ್ಘವಾದ ವೈದ್ಯಕೀಯ ವೃತ್ತಿಯಲ್ಲಿ ತಮ್ಮ ಅನುಭವ ಮತ್ತು ಅಗತ್ಯಗಳ ಕೊರತೆಯನ್ನು ಗಮನಿಸಿ ತಮ್ಮದೆಯಾದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಜನಸಾಮಾನ್ಯರಿಗೆ ಕೈಗೆಟುಕುವ ರೀತಿಯಲ್ಲಿ ಸೌ¯ಭ್ಯಗಳನ್ನು ದೊರಕಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯಿಂದ 1996ರಲ್ಲಿ ಬೆಂಗಳೂರು ನಗರದ ಹೃದಯ ಭಾಗವಾದ ರಾಜಜಿನಗರದಲ್ಲಿ ಕಣ್ವ ಡಯಾಗ್ನಾಸ್ಟಿಕ್ ಸರ್ವೀಸಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಕಣ್ವ ಡಯಾಗ್ನಾಸ್ಟಿಕ್ ಸಂಸ್ಥೆಯ ಉತ್ತಮ ಗುಣಮಟ್ಟದ ಸೇವೆಯನ್ನು ಸಾರ್ವಜನಿಕರು ಗಮನಿಸಿ ಕೇವಲ ಎರಡು-ಮೂರು ವರ್ಷಗಳಲ್ಲಿ ಒಂದು ಅದ್ಭುತವಾದ ಸಂಸ್ಥೆಯಾಗಿ ಬೆಳವಣಿಗೆ ಪಡೆದಿದೆ.
ನಂತರ 2002ರಲ್ಲಿ ರಾಜಜಿನಗರದ ಡಾ.ರಾಜ್‍ಕುಮಾರ್ ರಸ್ತೆಯಲ್ಲಿ ಒಂದು ನೂತನವಾದ ಸಂಸ್ಥೆಯನ್ನು ಅಂತರ ರಾಷ್ಟ್ರೀಯ ಗುಣಮಟ್ಟದ ಎಲ್ಲಾ ಸೌಲಭ್ಯಗಳೊಂದಿಗೆ ಆರಂಭಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆಂಬ ಹೆಗ್ಗಳಿಕೆಗೆ ವೆಂಕಟಪ್ಪ ಅವರು ಭಾಜನರಾಗಿದ್ದಾರೆ.

Facebook Comments