ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಕಾಳಜಿ ತೋರದ ಸರ್ಕಾರದ ವಿರುದ್ಧ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಕೆಂಗೇರಿ, ಸೆ.18- ಆಡಳಿತಾರೂಢ ಸರ್ಕಾರಗಳು ಕನ್ನಡದ ಶ್ರೇಷ್ಠ ನಟ ಡಾ.ವಿಷ್ಣುವರ್ಧನ್ ಅವರಿಗೆ ಕೊಡಬೇಕಾದ ಹಾಗೂ ಗೌರವಿಸ ಬೇಕಾದ ಕನಿಷ್ಠ ಕಾಳಜಿಯನ್ನು ತೋರದೆ ನಿರ್ಲಕ್ಷ್ಯ ವಹಿಸಿವೆ ಎಂದು ಚಿತ್ರ ನಿರ್ಮಾಪಕ ಕೆ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲತ್ತಹಳ್ಳಿ ಹಿತೈಷಿ ಡಾ.ವಿಷ್ಣು ವರ್ಧನ್ ಅಭಿಮಾನಿ ಬಳಗ, ಶೃಂಗಾರ ಶಿಲ್ಪಿ ಅಭಿಮಾನಿ ಸಂಘ ಹಾಗೂ ಕೆಂಗೇರಿ ಡಾ.ಸಾಹಸ ಸಿಂಹ ಡಾ.ವಿಷ್ಣುವರ್ಧನ ಅಭಿಮಾನಿಗಳ ಸಂಯುಕ್ತಾಶ್ರಯದಲ್ಲಿ ಕೆಂಗೇರಿ ಸಮೀಪದ ಅಭಿಮಾನ್ ಸ್ಟುಡಿಯೋದ ವಿಷ್ಣು ಸ್ಮಾರಕದಲ್ಲಿ ಡಾ.ವಿಷ್ಣು ವರ್ಧನ ರವರ 69ನೇ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಮಾರಕ ನಿರ್ಮಾಣಕ್ಕೆ ಹತ್ತು ವರ್ಷಗಳು ಕಳೆದರೂ ಸರ್ಕಾರಗಳು ಸ್ಪಂದಿಸದೇ ಇರುವುದು ನೋವಿನ ಸಂಗತಿ. ಜಾಗದ ವಿಚಾರದಲ್ಲಿ ಗೊಂದಲವಿದೆ. ಆದರೇ ಸರ್ಕಾರ ಮನಸ್ಸು ಮಾಡಿದರೆ ಎರಡು ನಿಮಿಷದಲ್ಲಿ ಸಮಸ್ಯೆ ಬಗೆಹರಿಸಬಹುದು. ಯಾವ ಕಾರಣಕ್ಕೆ ಸರ್ಕಾರಗಳು ಮೌನ ವಹಿಸಿವೆ ಎಂಬುದು ಅರ್ಥವಾಗುತ್ತಿಲ್ಲ ಈ ಕುರಿತು ಸರ್ಕಾರಗಳು ಪ್ರಯತ್ನ ನಡೆಸದೇ ಇರುವುದು ವಿಷ್ಣು ಅಭಿಮಾನಿಗಳಿಗೆ ಬೇಸರ ತರಿಸಿದೆ ಎಂದು ನೊಂದು ನುಡಿದರು.

ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡಿ, ಸರ್ಕಾರ ಡಾ.ವಿಷ್ಣು ವರ್ಧನ್ ರವರ ಸ್ಮಾರಕವನ್ನು ಉಳಿಸಿ ಕೊಟ್ಟು ಅಭಿಮಾನಿಗಳ ಆಶಯ ಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.  ಮಲ್ಲತ್ತಹಳ್ಳಿ ಹಿತೈಷಿ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಲೋಕೇಶ್ ಗೌಡ , ಸಂಘದ ಅಧ್ಯಕ್ಷ ಸಂಜೀವ್ ಕುಮಾರ್, ಚಿತ್ರ ನಟ ಲೋಕೇಶ್ ಸೂರ್ಯ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ರಕ್ತದಾನ ಶಿಬಿರ ಮತ್ತು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

#ಸಿಎಂ ಯಡಿಯೂರಪ್ಪ ಸ್ಮರಣೆ :
ಬೆಂಗಳೂರು, ಸೆ.18-ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಟ್ವೀಟರ್ ಮೂಲಕ ಶುಭಾಶಯ ಕೋರಿದ್ದಾರೆ. ಕನ್ನಡ ಚಿತ್ರರಂಗ ಕಂಡ ಮಹಾನ್ ನಟರಲ್ಲೊಬ್ಬರಾದ ಡಾ.ವಿಷ್ಣುವರ್ಧನ್ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಮುಖ್ಯಮಂತ್ರಿಯವರು ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ.

#ವಿಷ್ಣು ಸ್ಮರಿಸಿದ ಕಿಚ್ಚ ಸುದೀಪ್:
ಬೆಂಗಳೂರು, ಸೆ.18-ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತನ್ನ ನೆಚ್ಚಿನ ನಟ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಟ್ವೀಟರ್‍ನಲ್ಲಿ ಶುಭಾಶಯ ಕೋರುವ ಮೂಲಕ ಸ್ಮರಿಸಿಕೊಂಡಿದ್ದಾರೆ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬದ ಅಂಗವಾಗಿ ರಾಜ್ಯಾದ್ಯಂತ ಅಭಿಮಾನಿಗಳು ವಿಷ್ಣು ಭಾವಚಿತ್ರಕ್ಕೆ ನಮನ ಸಲ್ಲಿಸಿ ಸಿಹಿ ಹಂಚಿ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ.

ವಿಷ್ಣು ದಾದಾ ಮೇಲೆ ಸಾಕಷ್ಟು ಪ್ರೀತಿ, ಅಭಿಮಾನ ಹೊಂದಿರುವ ಕಿಚ್ಚ , ಅಪ್ಪಾಜಿ ನಿಮ್ಮ ಮೇಲೆ ಪ್ರೀತಿ ಎಷ್ಟಿದೆಯೋ ಅಷ್ಟೇ ಕೋಪವೂ ಇದೆ ಎಂದು ಟ್ವೀಟ್‍ನಲ್ಲಿ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. ನೀವು ನಮ್ಮನ್ನು ಬಹಳ ಬೇಗ ಬಿಟ್ಟು ಹೋಗಿ ಬಿಟ್ಟಿರಿ. ನಿಮ್ಮನ್ನು ಕಳೆದುಕೊಂಡು ನಾವು ಅನಾಥರಾಗಿದ್ದೀವಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಅಗತ್ಯ ನಮಗೆ ಸಾಕಷ್ಟಿತ್ತು ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

Facebook Comments