ಚಿತ್ರದುರ್ಗದ ಬಳಿ ಡಿಆರ್‌ಡಿಒ ನಿರ್ಮಿತ ಚಾಲಕ ರಹಿತ ಡ್ರೋನ್ ವಿಮಾನ ಪತನ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಸೆ.17- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಅಭಿವೃದ್ಧಿಪಡಿಸಿದ್ದ ಚಾಲಕ ರಹಿತ ಡ್ರೋನ್ ಲಘು ವಿಮಾನ ರುಸ್ತುಂ-2 ಪತನವಾಗಿದೆ.
ಭಾರತೀಯ ಸೇನಾ ಬತ್ತಳಿಕೆಯ ಪ್ರಮುಖ ಅಸ್ತ್ರವಾಗಲಿದೆ ಎಂದೇ ಬಿಂಬಿಸಲಾಗಿದ್ದ ಡ್ರೋನ್ ವಿಮಾನದ ಪರೀಕ್ಷಾರ್ಥ ಹಾರಾಟ ಮಾಡಲಾಗಿತ್ತು.

ಆದರೆ ನಿಯಂತ್ರಣ ಕಳೆದುಕೊಂಡ ವಿಮಾನ ಇಂದು ಬೆಳಗ್ಗೆ 6 ಗಂಟೆಗೆ ಚಳ್ಳಕೆರೆ ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿಯ ಅಡಿಕೆ ತೋಟವೊಂದರ ಬಳಿ ಪತನಗೊಂಡಿದೆ. ಕುದಾಪುರ ಬಳಿಯ ಡಿಆರ್‍ಡಿಒ ಸಂಸ್ಥೆ ಚಳ್ಳಕೆರೆ ಏರೋನಾಟಿಕಲ್ ಟೆಸ್ಟ್ ರೇಂಜ್‍ನಲ್ಲಿ ಮಾನವ ರಹಿತ ಮತ್ತು ಮಾನವ ಸಹಿತ ವಿಶೇಷ ವಿಮಾನಗಳ ಹೊರಾಂಗಣ ಪರೀಕ್ಷೆ ಮತ್ತು ಮೌಲ್ಯಮಾಪನ ಮಾಡುತ್ತಿದೆ.

ವಿಮಾನ ಪತನಗೊಂಡ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತನಗೊಂಡಿರುವುದು ಡ್ರೋನ್ ಚಾಲಕ ರಹಿತ (ತಪಸ್-04 ಎಡಿಇ) ವಿಮಾನ ಎಂದು ತಿಳಿಸಿದ್ದಾರೆ. ಡಿಆರ್‍ಡಿಒ ಅಧಿಕಾರಿಗಳು ಪರೀಕ್ಷಾರ್ಥವಾಗಿ ಇಂದು ಮುಂಜಾನೆ ಹಾರಾಟ ನಡೆಸಿದ್ದು , ನಿಯಂತ್ರಣ ಕಳೆದುಕೊಂಡ ವಿಮಾನ ಪತನಗೊಂಡಿದೆ ಎಂದು ತಿಳಿಸಿದ್ದಾರೆ.

ಚಾಲಕ ರಹಿತ ವಿಮಾನವಾದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ವಿಮಾನ ಬಿದ್ದ ರಭಸಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದು, ಅವರನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ ಎಂದು ಅರುಣ್ ತಿಳಿಸಿದ್ದಾರೆ.

 

Facebook Comments

Sri Raghav

Admin