ತುಮಾಕೂರು ಜಿಲ್ಲೆಯಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು – ಜಿಲ್ಲೆಯ ಶಿರಾ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದರೂ ಜನಪ್ರತಿನಿಧಿಗಳು ಯಾವುದೇ ವ್ಯವಸ್ಥೆ ಮಾಡಿಲ್ಲ. ಹಣವಿದ್ದರೂ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ, ಬಡವರ ಪರಿಸ್ಥಿತಿ ಹೇಳತೀರದಾಗಿದೆ. ಜನಪ್ರತಿನಿಧಿಗಳಿಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ನೀಡಿದ ಭರವಸೆಗಳೆಲ್ಲ ಹುಸಿಯಾಗಿವೆ.

ಕಳೆದ ಹಲವು ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಹೇಮಾವತಿ ಜಲಾಶಯದಿಂದ ನಗರಕ್ಕೆ ನೀರು ಹರಿದುಬರುತ್ತಿತ್ತು. ಅದರೆ, ಈಗ ತುಮಕೂರು ನಾಲೆಗೆ ನೀರು ಹರಿಬಿಟ್ಟು ಹಲವು ದಿನಗಳೇ ಕಳೆದಿವೆ. ಅದರೂ ಶಿರಾ ನಗರ ಕೆರೆ ಕೂಡ ತಲುಪಲಿಲ್ಲ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಶಿರಾದ ನಗರಸಭೆಗೆ ಆಯುಕ್ತರಾಗಿ ವರ್ಗಾವಣೆಯಾಗಿರುವ ಮಂಜುನಾಥ್ ಸ್ವಾಮಿ ಅವರ ಮೇಲೆ ಶಿರಾ ನಗರದ ಎಲ್ಲ ವಾರ್ಡ್‍ಗಳಿಗೂ ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಹರಿಸುವ ಜವಾಬ್ದಾರಿ ಇದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಶಾಶ್ವತವಾಗಿ ಶಿರಾ ನಗರ ಸೇರಿದಂತೆ ಶಿರಾ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಆದರೆ, ನಂತರ ನಡೆದ ಚುನಾವಣೆಯಲ್ಲಿ ಜಯಚಂದ್ರ ಸೋಲನನುಭವಿಸಿದರು. ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಅವರು ಶಾಸಕರಾಗಿ ಆಯ್ಕೆಯಾದರು.

ಆದರೆ, ಇವರು ಆಯ್ಕೆಯಾದ ನಂತರ ಇಲ್ಲಿತನಕ ಕುಡಿಯುವ ನೀರಿನ ಯೋಜನೆಗಳಿಗಾಗಲಿ ಅಥವಾ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಿಲ್ಲ ಎಂದು ನಗರದ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ನಗರದ ಶಾಸಕರಾಗಿರುವ ಬಿ.ಸತ್ಯನಾರಾಯಣ ಅವರು ತಕ್ಷಣವೇ ಶಿರಾ ನಗರದಲ್ಲಿ ಕುಡಿಯುವ ನೀರಿಗಾಗಿ ನಡೆಯುತ್ತಿರುವ ಹಾಹಾಕಾರ ತಪ್ಪಿಸಲು ಅಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಸಭೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Facebook Comments