ನಡು ರಸ್ತೆಯಲ್ಲೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಚಾಲಕನ ಭೀಕರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23-ಟಿಟಿ ವಾಹನದ ಚಾಲಕ ನನ್ನು ಡ್ರ್ಯಾಗರ್‍ನಿಂದ ಇರಿದು ತಲೆ ಮೇಲೆ ಕಲ್ಲು ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಟರಾ ಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‍ಆರ್‍ನಗರದ ನಿವಾಸಿ ಚಂದ್ರಶೇಖರ್ ಅಲಿಯಾಸ್ ಶೇಖರ್(43) ಕೊಲೆಯಾಗಿರುವ ಟಿಟಿ ವಾಹನದ ಚಾಲಕ.

ಮಂಡ್ಯ ಮೂಲದವರಾದ ಚಂದ್ರಶೇಖರ್ ಈ ಮೊದಲು ಕಾಳಿದಾಸ ಲೇಔಟ್‍ನಲ್ಲಿ ವಾಸವಾಗಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಆರ್‍ಆರ್ ನಗರಕ್ಕೆ ಬಂದು ನೆಲೆಸಿದ್ದರು. ಈ ಹಿಂದೆ ಸಿಟಿ ಮಾರ್ಕೆಟ್‍ನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಚಂದ್ರಶೇಖರ್, ಕೊರೊನಾದಿಂದಾಗಿ ಲಾಕ್‍ಡಾನ್ ಸಂದರ್ಭದಲ್ಲಿ ಭಾರೀ ನಷ್ಟವುಂಟಾಗಿದ್ದರಿಂದ ಹೂವಿನ ವ್ಯಾಪಾರ ಬಿಟ್ಟು, ಟಿಟಿ ವಾಹನದ ಚಾಲಕ ವೃತ್ತಿ ಮಾಡುತ್ತಿದ್ದರು.

ಹೊಸಕೆರೆಹಳ್ಳಿ ಮುಖ್ಯರಸ್ತೆ, ರೈಸ್‍ರೋಡ್ ಜಂಕ್ಷನ್ ಬಳಿಯ ಮಹಾವೀರ ಜೈನ್ ಆಸ್ಪತ್ರೆ ಹಿಂಭಾಗ ರಾತ್ರಿ 9 ಗಂಟೆ ಸುಮಾರಿನಲ್ಲಿ ಚಂದ್ರಶೇಖರ್ ಹೋಗುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಡ್ರ್ಯಾಗರ್‍ನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬ್ಯಾಟರಾಯನಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈತನ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅನೈತಿಕ ಸಂಬಂಧ ಅಥವಾ ಹಣಕಾಸ ವಿಚಾರವಾಗಿ ಕೊಲೆ ನಡೆದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin