ಇವರು ಲಾರಿ ಚಾಲಕರಲ್ಲ, ಚಾಲಾಕಿ ಖದೀಮರು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.9- ದಾಸ್ತಾನು ಸಾಗಿಸುವ ವಾಹನಗಳನ್ನು ಅಪಘಾತವಾಗಿದೆ ಎಂದು ನಂಬಿಸಿ ವಾಹನದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಖದೀಮ ಚಾಲಕರ ಕೃತ್ಯವನ್ನು ಕಳ್ಳಂಬೆಳ್ಳ ಪೋಲೀಸರು ಪತ್ತೆಹಚ್ಚಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಅಬಕಾರಿ ಇಲಾಖೆಗೆ ಸೇರಿದ 550 ಕೇಸ್ ಮದ್ಯದ ಬಾಕ್ಸ್‍ಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಅಪಘಾತವಾಗಿದೆ ಎಂದು ಬಿಂಬಿಸಿ ಲಾರಿಯಲ್ಲಿದ್ದ 20 ಲಕ್ಷಕ್ಕೂ ಹೆಚ್ಚು ಮೌಲ್ಯದ 250 ಮದ್ಯದ ಬಾಕ್ಸ್‍ಗಳನ್ನು ಲಪಟಾಯಿಸಲು ಯತ್ನಿಸಿದ ಚಾಲಕ ತಿಪ್ಪೇಸ್ವಾಮಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಖತರ್ನಾಕ್ ಪ್ಲಾನ್: ಜ.5ರಂದು ಟ್ರಾನ್ಸ್‍ಪೋರ್ಟ್ ಕಂಪೆನಿಯವರು ಲಾರಿಗೆ 550 ಮದ್ಯದ ಬಾಕ್ಸ್‍ಗಳನ್ನು ತುಂಬಿ ಹುಬ್ಬಳ್ಳಿಗೆ ತಲುಪಿಸುವಂತೆ ಸೂಚಿಸಿದ್ದರು. ಮದ್ಯದ ಬಾಕ್ಸ್‍ಗಳೊಂದಿಗೆ ಬೆಂಗಳೂರಿನಿಂದ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ ಲಾರಿ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಮರದ ಗೇಟ್ ಬಳಿ ಮಧ್ಯರಾತ್ರಿ ಅಪಘಾತಕ್ಕೀಡಾಗಿತ್ತು.

ಅಪಘಾತ ಕುರಿತಂತೆ ಚಾಲಕ ತಿಪ್ಪೆಸ್ವಾಮಿ ನೀಡಿದ ಮಾಹಿತಿ ಮೇರೆಗೆ ಕಳ್ಳಂಬೆಳ್ಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಆದರೆ, ಚಾಲಕನ ಹೇಳಿಕೆ ಬಗ್ಗೆ ಪೋಲೀಸರು ಅನುಮಾನಗೊಳ್ಳುತ್ತಾರೆ. ಅಪಘಾತ ಸಂಭವಿಸಿದಾಗ ನಾನು ಲಾರಿಯಲ್ಲಿ ಸಿಲುಕಿಕೊಂಡಿದ್ದೆ. ಹರಸಾಹಸ ಪಟ್ಟು ಹೊರಬಂದು ಪೊಲೀಸರಿಗೆ ಮಾಹಿತಿ ನೀಡಲು ತಡವಾಯಿತು ಎಂದು ಚಾಲಕ ಹೇಳಿಕೆ ನೀಡುತ್ತಾನೆ. ನಂತರ ಆತನನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಅಪಘಾತದ ವಿಚಾರ ತಿಳಿದ ಟ್ರಾನ್ಸ್‍ಪೋರ್ಟ್ ಸಂಸ್ಥೆಯವರು ಹಾಗೂ ಅಬಕಾರಿ ಇಲಾಖೆಯವರು ಸ್ಥಳಕ್ಕೆ ಬಂದು ಲಾರಿಯಲ್ಲಿದ್ದ ಮದ್ಯದ ಬಾಕ್ಸ್‍ಗಳನ್ನು ಹುಬ್ಬಳ್ಳಿಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತಾರೆ.  ಅಬಕಾರಿ ಇಲಾಖೆ ಅಧಿಕಾರಿಗಳ ಮನವಿ ಮೇರೆಗೆ ಲಾರಿಯಲ್ಲಿದ್ದ ಮದ್ಯದ ಬಾಕ್ಸ್‍ಗಳನ್ನು ಮತ್ತೊಂದು ಲಾರಿಗೆ ಸಾಗಿಸಲು ಯತ್ನಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು.

550 ಬಾಕ್ಸ್‍ಗಳು ಇರಬೇಕಾದ ಜಾಗದಲ್ಲಿ ಕೇವಲ 250 ಬಾಕ್ಸ್‍ಗಳು ಮಾತ್ರ ಇರುತ್ತವೆ. ಅವುಗಳಲ್ಲಿ ಕೆಲವು ಬಾಟಲ್‍ಗಳು ಒಡೆದುಹೋಗಿರುತ್ತವೆ. ಇದರಿಂದ ಅನುಮಾನಗೊಂಡ ಟ್ರಾನ್ಸ್‍ಪೋರ್ಟ್ ಸಂಸ್ಥೆಯವರು ಕಳ್ಳಂಬೆಳ್ಳ ಪೊಲೀಸರಿಗೆ ದೂರು ನೀಡುತ್ತಾರೆ. ದೂರಿನ ಆಧಾರದ ಮೇಲೆ ಡಿವೈಎಸ್‍ಪಿ ಕುಮಾರಪ್ಪ ಅವರು ಶಿರಾ ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್, ಸಬ್‍ಇನ್ಸ್‍ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸುತ್ತಾರೆ.

ತನಿಖೆ ಚುರುಕುಗೊಳಿಸಿದ ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ತಿಪ್ಪೆಸ್ವಾಮಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.
ಚಾಲಕ ತಿಪ್ಪೆಸ್ವಾಮಿ, ಆತನ ಸಹೋದರ ಬಸವರಾಜು, ಸ್ನೇಹಿತ ಜಯಣ್ಣ ಮತ್ತಿತರರು ಪ್ಲಾನ್ ಮಾಡಿ ಲಾರಿಯಲ್ಲಿದ್ದ 250 ಮದ್ಯದ ಬಾಕ್ಸ್‍ಗಳನ್ನು ಲಪಟಾಯಿಸಲು ಸಂಚು ರೂಪಿಸುತ್ತಾರೆ.

ಅದರಂತೆ ಮಧ್ಯರಾತ್ರಿ 2 ಗಂಟೆ ಸಂದರ್ಭದಲ್ಲಿ ಊರುಕೆರೆಯ ಹೊರಭಾಗದಲ್ಲಿರುವ ರಾಯರಪಾಳ್ಯದ ಬಳಿ ಲಾರಿಯಲ್ಲಿದ್ದ 250 ಬಾಕ್ಸ್‍ಗಳನ್ನು ಇಳಿಸಿ ನಂತರ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯ ದೊಡ್ಡಮರದ ಬಳಿ ಲಾರಿ ಅಪಘಾತವಾಗಿದೆ ಎಂಬಂತೆ ಬಿಂಬಿಸಿರುತ್ತಾರೆ.  ಲಾರಿ ಅಪಘಾತವಾದ ಸಂದರ್ಭದಲ್ಲಿ ಸ್ಥಳೀಯರು ಲಾರಿಯಲ್ಲಿದ್ದ ಮದ್ಯದ ಬಾಕ್ಸ್‍ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ನಂಬಿಸುವ ಖತರ್ನಾಕ್ ಐಡಿಯಾ ರೂಪಿಸಿರುವುದು ಇದೀಗ ಬಯಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನಕ್ಕೊಂದು ರೀತಿಯ ಅಪಘಾತಗಳು ಸಂಭವಿಸುತ್ತಿರುತ್ತವೆ. ಇವುಗಳಲ್ಲಿ ಕೆಲವು ಸಿನಿಮೀಯ ಅಪಘಾತ ಪ್ರಕರಣಗಳಾಗಿರುತ್ತವೆ.

ಇತ್ತೀಚೆಗೆ ಶಿರಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈರುಳ್ಳಿ ಚೀಲಗಳಿದ್ದ ಲಾರಿಯನ್ನು ದರೋಡೆ ಮಾಡಿರುವ ಪ್ರಕರಣ ವರದಿಯಾಗಿತ್ತು.
ಈರುಳ್ಳಿ ಬೆಲೆ ಗಗನಕ್ಕೇರಿದ ಸಂದರ್ಭದಲ್ಲೇ ಈರುಳ್ಳಿ ಲಾರಿ ದರೋಡೆಗೊಳಗಾಗಿದ್ದು, ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಮದ್ಯದ ಬಾಕ್ಸ್‍ಗಳಿದ್ದ ಲಾರಿಯನ್ನು ಅಪಘಾತವಾಗಿದೆ ಎಂದು ಬಿಂಬಿಸಿ ಮದ್ಯದ ಬಾಟಲ್‍ಗಳನ್ನು ಲಪಟಾಯಿಸಿರುವುದನ್ನು ನೋಡಿದರೆ ಭಾರೀ ವಾಹನಗಳ ಚಾಲಕರೇ ಖತರ್ನಾಕ್ ಖದೀಮರು ಎಂಬುದನ್ನು ಬಿಂಬಿಸುತ್ತಿದೆ.

ಲಾರಿಯಿಂದ ತೆಗೆದಿರಿಸಲಾಗಿದ್ದ 250 ಮದ್ಯದ ಬಾಕ್ಸ್‍ಗಳನ್ನು ಸುರೇಶ್ ಎಂಬುವವರ ಮನೆಯಲ್ಲಿ ಅಡಗಿಸಿಡಲಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತಿಪ್ಪೆಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ತಲೆಮರೆಸಿಕೊಂಡಿರುವ ಸುರೇಶ್ ಮತ್ತು ಜಯಣ್ಣ ಎಂಬುವವರ ಬಂಧನಕ್ಕೆ ಜಾಲ ಬೀಸಿದ್ದಾರೆ.

Facebook Comments