ಡ್ರೋಣ್ ಪ್ರಾಧಿಕಾರ ರಚನೆಗೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18-ಆಧುನಿಕ ತಂತ್ರಜ್ಞಾನದಲ್ಲಿ ಹೆಚ್ಚು ಜನಪ್ರಿಯ ಗೊಳ್ಳುತ್ತಿರುವ ಡ್ರೋಣ್‍ಗಳಿಗೆ ಪ್ರತ್ಯೇಕವಾಗಿ ಪ್ರಾಧಿಕಾರ ರಚಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ನಾಗರಿಕ ವಿಮಾನ ಇಲಾಖೆಯ ಕಾರ್ಯದರ್ಶಿ ಪ್ರದೀಪ್‍ಸಿಂಗ್ ಕರೋಲಾ ಹೇಳಿದರು. ನಗರದ ಖಾಸಗಿ ಹೊಟೇಲ್‍ನಲ್ಲಿಂದು ನಡೆದ ಏಷ್ಯಾದ ಅತಿ ದೊಡ್ಡ ವಿಮಾನ ಯಾನ ಕ್ಷೇತ್ರದ ವಾಣಿಜ್ಯ ಮೇಳ ವಿಂಗ್ಸ್ ಇಂಡಿಯಾ-2020 ಉದ್ಘಾಟಿಸಿ ಮಾತನಾಡಿದ ಅವರು, ಡ್ರೋಣ್ ನಿರ್ಮಾಣ, ನಿರ್ವಹಣೆ ಸೇರಿದಂತೆ ಬಹಳಷ್ಟು ತಂತ್ರಜ್ಞಾನಗಳು ಪ್ರಸ್ತುತ ಚಾಲ್ತಿಯಲ್ಲಿವೆ. ಆದರೆ ಇದಕ್ಕೆ ಸ್ಪಷ್ಟವಾದ ನಿಯಮಾವಳಿಗಳಿಲ್ಲ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಮಾನ ನಿಲ್ದಾಣ ಪ್ರಾಧಿಕಾರದ ಮಾದರಿಯಲ್ಲಿ ಡ್ರೋಣ್ ಪ್ರಾಧಿಕಾರವನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಹೇಳಿದರು. ಬೆಂಗಳೂರು ಡ್ರೋಣ್‍ಗಳ ರಾಜಧಾನಿ ಯಾಗಿ ಅಭಿವೃದ್ಧಿಯಾಗಿದೆ. ಬಹಳಷ್ಟು ಸ್ಟಾರ್ಟ್ ಅಪ್‍ಗಳು ಬೆಂಗಳೂರಿನಿಂದಲೇ ಚಾಲನೆಗೊಳ್ಳುತ್ತಿವೆ. ಉತ್ಪಾದಕರು ಮತ್ತು ಡ್ರೋಣ್ ನಿರ್ವಾಹಕರು ಸ್ಪಷ್ಟ ಮಾಹಿತಿ ನೀಡಿದರೆ, ಹೂಡಿಕೆಗೆ ಪೂರಕವಾದಂತಹ ನೀತಿಯನ್ನು ರೂಪಿಸಲಾಗುವುದು. ಸ್ಪಷ್ಟವಾದ ನಿಯಮಾವಳಿಗಳನ್ನು ರೂಪಿಸಿ ಪ್ರಾಧಿಕಾರ ರಚಿಸಲಾಗುವುದು ಎಂದು ಹೇಳಿದರು.

ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ನಿರ್ಮಾಣ ವೆಚ್ಚ, ಜನರಿಗೆ ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣದರ ನಿಗದಿ ಮಾಡುವುದು ಸೇರಿದಂತೆ ಹಲವಾರು ಪ್ರಮುಖ ಸವಾಲುಗಳು ಸರ್ಕಾರದ ಮುಂದಿವೆ. ಇವುಗಳನ್ನು ಶೀಘ್ರವೇ ಬಗೆಹರಿಸುವುದಾಗಿ ಹೇಳಿದರು.

ನಾಗರಿಕ ವಿಮಾನ ಇಲಾಖೆಯ ಜಂಟಿ ಕಾರ್ಯದರ್ಶಿ ಉಷಾ ಪಡ್ದೆ, ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ಎಲ್.ಎನ್.ಮೂರ್ತಿ, ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಕಪಿಲ್ ಮೋಹನ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹ್ಯಾರಿ ಮರರ್ ಮತ್ತಿತರರು ಭಾಗವಹಿಸಿದ್ದರು.

Facebook Comments