ಮಾದಕವಸ್ತು ನಿಯಂತ್ರಣ ಕಾಯ್ದೆ ತಿದ್ದುಪಡಿಗೆ ಸರ್ಕಾರ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.8- ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿರುವ ಡ್ರಗ್ಸ್ ಜಾಲ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಇದೇ 21ರಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಹಾಲಿ ಇರುವ ಮಾದಕವಸ್ತು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ.

ಕಳೆದ ವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾಜಿ ಶಾಸಕ ಎನ್.ಯೋಗೀಶ್ ಭಟ್ ಅವರು ಈ ಹಿಂದೆ ನೀಡಿದ್ದ ವರದಿಯ ಕುರಿತು ಗೃಹ ಬಸವರಾಜ್ ಬೊಮ್ಮಾಯಿ ಅವರು ಚರ್ಚೆನಡೆಸಿದ್ದರು. ಯೋಗೀಶ್ ಭಟ್ ವರದಿಯ ಪ್ರಮುಖ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಯೋಗೀಶ್ ಭಟ್ ವರದಿ ಸಲ್ಲಿಕೆಯಾದ ಬಳಿಕ ರಾಜ್ಯದ ಮೂರು ಪ್ರಮುಖ ಪಕ್ಷಗಳು ಅಧಿಕಾರ ನಡೆಸಿದ್ದರೂ ಈ ವರದಿಯ ಶಿಫಾರಸುಗಳನ್ನು ಪರಿಗಣಿಸಿರಲಿಲ್ಲ. ಈಗ ಮತ್ತೆ ಡ್ರಗ್ಸ್ ಜಾಲದ ಕರಾಳ ಮುಖ ರಾಜ್ಯದಲ್ಲಿ ಸ್ಯಾಂಡಲ್‍ವುಡ್ ಮೂಲಕ ಸ್ಫೋಟಗೊಂಡಿದೆ.

ಮಂಗಳೂರಿನಲ್ಲಿ ಡ್ರಗ್ಸ್ ಜಾಲ 2012ರಲ್ಲಿ ಹೆಚ್ಚಾಗಿತ್ತು. ಇದನ್ನು ತಡೆಯಲು ಪೋಷಕರು ವಿಧಾನಸಭೆಯ ಅರ್ಜಿಗಳ ಸಮಿತಿಗೆ ದೂರು ಸಲ್ಲಿಸಿದ್ದರು. ಇದರ ಅನ್ವಯ ಯೋಗೀಶ್ ಭಟ್ ಅಧ್ಯಕ್ಷತೆಯ ಸಮಿತಿ ಎಂಟು ತಿಂಗಳು ಅಧ್ಯಯನ ನಡೆಸಿ ಸುಮಾರು 18 ಶಿಫಾರಸು ನೀಡಿತ್ತು.

# ಸಮಿತಿಯ ಶಿಫಾರಸುಗಳೇನು? :
ರಾಜ್ಯಾದ್ಯಂತ ವಿಶಿಷ್ಟ ಜಾಗೃತಿ ಮೂಡಿಸಬೇಕು. ಡ್ರಗ್ಸ್ ಮಾರಾಟ ಜಾಲ ನಿಯಂತ್ರಿಸಲು ಕಾನೂನು ರೂಪಿಸಬೇಕು. ಡ್ರಗ್ಸ್ ಬಳಕೆ ಬಗ್ಗೆ ಸರ್ಕಾರ ಸಮಗ್ರ ಮಾಹಿತಿ ಪಡೆಯಬೇಕು. ಅದರ ಆಧಾರದ ಮೇಲೆ ಮಾದಕ ವ್ಯಸನಿಗಳ ಪ್ರಮಾಣ ಮತ್ತು ಪೆÇಲೀಸರು ಪ್ರಕರಣ ದಾಖಲಿಸುವ ಪ್ರಮಾಣದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.

ಮಾದಕ ವ್ಯಸನಿಗಳ ಪುನರ್ವಸತಿಗೆ ನೀತಿಯೊಂದನ್ನು ರೂಪಿಸಬೇಕು.ಮಾದಕ ವಸ್ತು ವ್ಯಸನಿಗಳ ಚಿಕಿತ್ಸೆಗೆ ಎಲ್ಲ ಸೌಕರ್ಯಗಳನ್ನು ಒಳಗೊಂಡ ಕೇಂದ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ಆರಂಭಿಸಬೇಕು. ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯುವಕ- ಯುವತಿಯರು ಕೆಲಸದ ಒತ್ತಡದಿಂದ ಮಾದಕ ವಸ್ತು ವ್ಯಸನಿಗಳಾಗುತ್ತಿದ್ದಾರೆ.

ಇವರಿಗೆ ಮಾನಸಿಕ ಒತ್ತಡ ನಿಭಾಯಿಸುವ ಕುರಿತು ಸೂಕ್ತ ತರಬೇತಿ ನೀಡುವಂತೆ ಐಟಿ-ಬಿಟಿ ಕಂಪನಿಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು. ಮಾದಕ ವಸ್ತು ಮಾರಾಟ ಮಾಡುವವರು ಕನಿಷ್ಠ 250 ಗ್ರಾಂ ನಷ್ಟು ಹೊಂದಿದ್ದರೆ ಮಾತ್ರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ.

ಆದರೆ, ಡ್ರಗ್ಸ್ ಮಾರಾಟಗಾರರು ಶಾಲಾ, ಕಾಲೇಜುಗಳಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುವುದರಿಂದ ಅವರನ್ನು ಪತ್ತೆ ಹಚ್ಚಿದರೂ ಕಾನೂನು ಕ್ರಮಕೈಗೊಳ್ಳಲು ಈಗಿರುವ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಮಾನದಂಡವನ್ನು ಕನಿಷ್ಠ 10 ಗ್ರಾಂಗೆ ಬದಲಾಯಿಸಬೇಕು.  ಮಾದಕ ವಸ್ತುಗಳ ನಿಯಂತ್ರಣದಲ್ಲಿ ರಾಸಾಯನಿಕಗಳ ವಿಶ್ಲೇಷಣೆ ಅತ್ಯಂತ ಮುಖ್ಯವಾಗಿದೆ.

ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಬಲಗೊಳಿಸಬೇಕು. ಮಾದಕ ದ್ರವ್ಯ ನಿಯಂತ್ರಣ ಘಟಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಡ್ರಗ್ಸ್ ಮಾಫಿಯಾ ಚಟುವಟಿಕೆ ನಡೆಸುವವರ ಮಾಹಿತಿ ಕಲೆ ಹಾಕಿ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ದಕ್ಷ ಮತ್ತು ಸಮರ್ಥ ಅಧಿಕಾರಿಗಳನ್ನು ನೇಮಕ ಮಾಡಬೇಕು. ಮಾದಕ ವಸ್ತು ಸೇವನೆಯಿಂದ ನಡೆಯುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ, ಅತ್ಯಾಚಾರ, ವಿದ್ಯಾರ್ಥಿಗಳ ಆತ್ಮಹತ್ಯೆ, ಮಹಿಳೆಯರ ಕಳ್ಳಸಾಗಾಣಿಕೆಯಂತಹ ಪ್ರಕರಣ ಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ತಂಡ ರಚಿಸಬೇಕು.

ಶಿಕ್ಷಣ ಸಂಸ್ಥೆಗಳ ನೂರು ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಮತ್ತು ಮಾದಕ ದ್ರವ್ಯಗಳ ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ಮುಚ್ಚಬೇಕು ಇಲ್ಲವೇ ಸ್ಥಳಾಂತರಿಸಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವಸ್ತುಗಳಿಂದ ದೂರ ನಿಲ್ಲುವ ಕುರಿತು ತರಬೇತಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು.ಮುಂಬೈನಿಂದ ಬರುವ ಡ್ರಗ್ಸ್ ಬಗ್ಗೆ ತನಿಖೆ ಆಗಬೇಕು.

ಅದೇ ರೀತಿ ವಿದೇಶಗಳಿಂದ ಕಾರ್ಗೋ ಮೂಲಕ ಹಾಗೂ ಕೋರಿಯರ್‍ಗಳಲ್ಲಿ ಬರುವ ಮಾದಕವಸ್ತು ಪತ್ತೆ ಹಚ್ಚಿ ಈ ದಂಧೆಗೆ ಕಡಿವಾಣ ಹಾಕುವ ಬಗ್ಗೆ ನಿರ್ಧರಿಸಲಾಗಿದೆ. ಅದೇ ರೀತಿ ಯೋಗೀಶ್ ಭಟ್ ಅವರು ನೀಡಿದ್ದ ವರದಿಯನ್ನು ಪರಿಶೀಲಿಸುವಂತೆ ಉನ್ನತಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಅವರು ನೀಡಿರುವ ಶಿಫಾರಸುಗಳ ಬಗ್ಗೆ ಪರಿಶೀಲಿಸಿ ಹೊಸ ನಿಯಮಾವಳಿಗಳನ್ನು ರೂಪಿಸುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Facebook Comments